Advertisement

ಜನಪದ ಕಾಯಕ ಸಾಹಿತ್ಯ: ಅಭಿಮತ

09:52 PM Aug 18, 2019 | Team Udayavani |

ಮೈಸೂರು: ಜನಪದ ಶುದ್ಧ ಸಾಹಿತ್ಯ ಒಳಗೊಂಡಿದ್ದು, ಅದರ ಮೂಲ ಮಟ್ಟುಗಳು ಕೆಡದಂತೆ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್‌ ತಿಳಿಸಿದರು.

Advertisement

ಕಲಾಮಂದಿರದ ಕಿರುರಂಗಮಂದಿರದಲ್ಲಿ ಭಾನುವಾರ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ “ರಂಗಭೂಮಿ ಮತ್ತು ಜನಪದ ಕಲಾ ಪ್ರಕಾರಗಳ ತರಬೇತಿ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಜನಪದ ಕಾಯಕ ಸಾಹಿತ್ಯವಾಗಿದ್ದು, ಅದಕ್ಕೆ ವಾದ್ಯಗಳು ಬೇಕಿಲ್ಲ. ಗ್ರಾಮೀಣ ಬದುಕಿನ ನಿತ್ಯದ ಎಲ್ಲಾ ಕಾರ್ಯಗಳಲ್ಲಿಯೂ ಜನಪದ ಸಾಹಿತ್ಯ ಹಾಸುಹೊಕ್ಕಾಗಿದೆ ಎಂದರು.

ಕತ್ತು ಕೊಯ್ದಂತೆ: ರಾಗಿ ಬೀಸುವಾಗ, ಭತ್ತ ಕುಟ್ಟುವಾಗ, ಸಾವು, ನೋವು ಹೀಗೆ ಎಲ್ಲವನ್ನು ಒಳಗೊಂಡಂತಹ ಶುದ್ಧ ಸಾಹಿತ್ಯ ಜನಪದವಾಗಿದೆ. ನಾಗರಿಕರ ಹತ್ತಿರ ಸುಳ್ಳು ಸಾಹಿತ್ಯವಿದೆ. ಅದನ್ನು ನೀವು ಹಾಡಿದರೆ ಜನಪದ ಗಾಯಕಿಯರ ಕತ್ತು ಕೊಯ್ದಂತೆ ಎಂದರು.

ಶಾಸ್ತ್ರೀಯ ಸಂಗೀತತಾರೆಯರಿಗೆ ಜನಪದ ಸಾಹಿತ್ಯ ಹಾಡಲಾಗುವುದಿಲ್ಲ. ಯುವ ಗಾಯಕಿ ಅನನ್ಯಭಟ್‌ ವಿಕಾರವಾಗಿ ವಾದ್ಯಗಳೊಂದಿಗೆ ಜನಪದ ಗೀತೆ ಹಾಡಿದರೆ ಅದನ್ನು ಜನರು ಸಂಭ್ರಮಿಸುತ್ತಾರೆ. ಯಾಕೆಂದರೆ ಇವರಿಗೆ ಜನಪದದ ಮೂಲಮಟ್ಟಿನ ಅರಿವಿಲ್ಲ. ಜನಪದಕ್ಕೆ ಹಾಡುಗಳಿಗೆ ವಾದ್ಯಗಳ ಅಗತ್ಯವಿಲ್ಲ. ಹಂಸಲೇಖ ಫ್ಯೂಚರ್‌ ಫೋಕ್ಲೋರ್‌ ಎಂದು ಹೇಳುವುದು ಸರಿಯಲ್ಲ.

ಆ ಪದವೇ ಇಲ್ಲ. ಅಕ್ಷರಸ್ಥರು ರಚಿಸುವುದು ಜನಪದವಲ್ಲ. ಟಾಯ್ಲೆಟ್‌ ರೂಂ ಗೋಡೆ ಮೇಲೆ ಬರೆದಿದ್ದನ್ನು ನಗರ ಜನಪದ ಎಂದು ಕರೆದುಕೊಳ್ಳುತ್ತಾರೆ. ಹಳ್ಳಿಯ ಶುದ್ಧ ಜನಪದದಲ್ಲಿ ಅನೇಕ ಪ್ರಕಾರಗಳಿದ್ದು, ಅದನ್ನು ಕಲಿಯುವ ಮೂಲಕ ಗ್ರಾಮೀಣ ಸಂಸ್ಕೃತಿಯಲ್ಲಿರುವ ಶುದ್ಧತೆ, ಸತ್ವವನ್ನು ಉಳಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

Advertisement

ಮೂಲ ಮಟ್ಟು ಉಳಿಸಿ: ಇಂದು ಓದಿಕೊಂಡವರು ಜನಪದ ರಾಗವನ್ನೇ ತಿರುಚಿ ಹಾಡುವ ಕಾರ್ಯವಾಗುತ್ತಿದೆ. ಜನಪದ ಸಾಹಿತ್ಯವನ್ನು ಬೆಳಗ್ಗೆಲ್ಲ ಹಾಡಬಹುದು. ಆದರೆ, ಗಿಮಿಕ್‌ ಮಾಡಿ ಹಾಡುತ್ತೇನೆ ಎಂದರೆ ಅದು ಜನಪದರಿಂದ ಸಾಧ್ಯವಾಗುವುದಿಲ್ಲ. ಜನಪದದಲ್ಲಿ 25 ಬಗೆಯ ಸಂಪ್ರದಾಯಿಕ ಗಾಯಕರಿದ್ದು, ಜನಪದ ತರಬೇತಿ ಶಿಬಿರಗಳಿಗೆ ಮೂಲ ಗಾಯಕರನ್ನು ಕರೆಯಿಸಿ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸಬೇಕು ಎಂದು ಹೇಳಿದರು.

ಅರಿವು ಅಗತ್ಯ: ಡೊಳ್ಳುಕುಣಿತ, ಕೋಲಾಟ, ಕಂಸಾಳೆ ಹೀಗೆ ಜನಪದ ನೃತ್ಯ, ಹಾಡಿಗೆ ತನ್ನದೇಯಾದ ಹಿನ್ನೆಲೆಯಿದೆ. ನಗರ ಸಾಹಿತ್ಯ ಕೂಡು ಕುಟುಂಬವನ್ನು ಬೇರ್ಪಡಿಸಿದರೆ, ಜನಪದ ಸಾಹಿತ್ಯ ಕೂಡುಕುಟುಂಬವನ್ನು ಉಳಿಸಿಕೊಂಡು ಹೋಗುವುದಾಗಿದೆ. ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಪರಿಸ್ಥಿತಿಯಲ್ಲಿ ಜನಪದ ಸಾಹಿತ್ಯದ ಅರಿವು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಅಶ್ವಿ‌ನ್‌ಕುಮಾರ್‌, ಜನಪದ ಗ್ರಾಮೀಣ ಸೊಗಡನ್ನು ಎತ್ತಿಹಿಡಿಯುವಂತಹದ್ದಾಗಿದೆ. ತಲಕಾಡು ಉತ್ಸವದ ಬಗ್ಗೆ ಈಗಾಗಲೇ ಚರ್ಚೆ ಮಾಡಿದ್ದು, ಉತ್ಸವಕ್ಕಾಗಿ ಶೀಘ್ರವೇ ಕಾರ್ಯಕ್ರಮ ರೂಪಿಸಲಾಗುವುದು. ಜನಪದ ಇಲಾಖೆಯಲ್ಲಿನ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಜನಪದ ಕಲೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿರಿ ಎಂದು ತಿಳಿಸಿದರು.

ಮೈಸೂರು ವಿವಿ ಲಲಿತಕಲಾ ಕಾಲೇಜು ಪ್ರಾಂಶುಪಾಲ ಡಾ.ಸಿ.ರಾಮಸ್ವಾಮಿ, ಮೈಸೂರು ವಿವಿ ಸಮಾಜ ಕಾರ್ಯ ವಿಭಾಗ ಸಹಾಯಕ ಪ್ರಾಧ್ಯಾಪಕಿ ಡಾ.ಎಚ್‌.ಪಿ.ಜ್ಯೋತಿ, ಯೂನಿಲಾಗ್‌ ಕನ್‌ಟೆಂಟ್‌ ಸಲ್ಯೂಷನ್ಸ್‌ ಅಸೋಸಿಯೇಟ್‌ ಉಪಾಧ್ಯಕ್ಷ ಎಸ್‌.ಎನ್‌.ರಾಜು, ಗೌತಮ ಟ್ರಸ್ಟ್‌ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಇದ್ದರು.

ಸಂಸ್ಕೃತಿ, ಸಮಾಜ ಉಳಿಸಿ: ನಗರದಲ್ಲಿನ ಕೃತಕ ಕಲೆ ಕಲಿಯುವುದು ನಮ್ಮ ತನ ಕಳೆದುಕೊಂಡಂತೆ. ಗ್ರಾಮೀಣ ಪ್ರದೇಶದವರು ಹಾಡಿಲ್ಲದೇ ಕೆಲಸ ಮಾಡಲಾರರು. 500ಕ್ಕೂ ಹೆಚ್ಚು ಜನಪದ ಕಲೆಗಳಿದ್ದು, ಅದು ಗ್ರಾಮೀಣ ಪ್ರದೇಶದ ವೈವಿಧ್ಯತೆಯಿಂದ ಕೂಡಿದೆ. ಆ ಕಲೆ ಕಳೆದುಕೊಳ್ಳಬಾರದು. ಕಲೆಗಳು ಸಂಬಂಧವನ್ನು ಬೆಸೆಯುತ್ತವೆ. ವಿದ್ಯಾರ್ಥಿಗಳು ಆಸಕ್ತಿ ಕಲೆಯನ್ನು ಕಲಿತು ಕಲೆ ಮೂಲಕ ಸಂಸ್ಕೃತಿ, ಸಮಾಜ ಉಳಿಸುವ ಕಾರ್ಯಮಾಡಬೇಕು ಎಂದು ಎಂದು ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next