Advertisement

ನೆಲಮಂಗಲ: ಸಾಹಿತ್ಯ ಸಮ್ಮೇಳನ- ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡಲಿ

11:32 AM Mar 01, 2024 | Team Udayavani |

ಉದಯವಾಣಿ ಸಮಾಚಾರ
ನೆಲಮಂಗಲ: ಕಂಪನಿಗಳಿಗಾಗಿ ಸರ್ಕಾರ ಕನ್ನಡಿಗರ ಭೂಮಿ ವಶಪಡಿಸಿಕೊಂಡು ಕನ್ನಡಿಗರಿಗೆ ಉದ್ಯೋಗ ನೀಡದೆ, ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಈ ದುಸ್ಥಿತಿ ನಿಲ್ಲಬೇಕು. ಆಗ ಕನ್ನಡ ಭಾಷೆ, ಸಾಹಿತ್ಯ ಬೆಳೆಯುತ್ತದೆ ಎಂದು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಚೌಡಯ್ಯ ತಿಳಿಸಿದರು.

Advertisement

ನಗರದ ಬಸವಣ್ಣ ದೇವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆದ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ನೆಲಮಂಗಲ ತಾಲೂಕಿನಲ್ಲಿ ಶೇ.87.74ರಷ್ಟು ಕನ್ನಡ ಮಾತನಾಡುವ ಜನರಿದ್ದಾರೆ. ಉರ್ದು ಮಾತನಾಡುವವರು 2ನೇ ಸ್ಥಾನದಲ್ಲಿದ್ದು, ತೆಲುಗು ಮೂರನೇ ಸ್ಥಾನದಲ್ಲಿರುವುದು ಮನಗಾಣಬೇಕಾಗಿದೆ. ತಾಲೂಕಿನಲ್ಲಿ 4530.03 ಎಕರೆ ಭೂಮಿ ಯನ್ನು ವಶಪಡಿಸಿಕೊಂಡು 1428 ಕೈಗಾರಿಕೆ ಸ್ಥಾಪನೆ ಮಾಡಲಾಗಿದೆ. ಆದರೆ, ಕನ್ನಡಿಗರಿಗೆ ಕೆಲಸ ನೀಡಿರು ವುದು ಶೇ.5ರಷ್ಟು ಮಾತ್ರ. ಇಂತಹ ಸ್ಥಿತಿ ಮುಂದುವರಿದರೆ ಕನ್ನಡಿಗರು ಕನ್ನಡ ನಾಡಿನಲ್ಲಿರುವುದು ಕಷ್ಟವಾಗುತ್ತದೆ. ಆದ್ದರಿಂದ ಉದ್ಯೋಗದಲ್ಲಿ ನಮ್ಮ ಹಕ್ಕು ಕೇಳಬೇಕು, ಕೇಳಿದಾಗ ಮಾತ್ರ ನಮ್ಮ ಭಾಷೆ, ಸಾಹಿತ್ಯ ನಮ್ಮವರು ಉಳಿದುಕೊಳ್ಳುತ್ತಾರೆ ಎಂದರು.

ಋಣ ತೀರಿಸಿ: ಮನುಷ್ಯರು ತಾಯಿ, ನೆಲ, ಗುರುವಿನ ಋಣ ತೀರಿಸಬೇಕಾಗಿದೆ. ನಾಡು, ನುಡಿಯ ಬೆಳವಣಿಗೆಗೆ ಶ್ರಮಿಸಬೇಕಾಗಿದೆ. ಅದ್ದೂರಿ ಕನ್ನಡ ಸಾಹಿತ್ಯ ಸಮ್ಮೇಳನ ಸಂತೋಷದ ಸಂಗತಿ. ನೆಲಮಂಗಲ ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ವಿಶೇಷ ಸ್ಥಾನ ‌ಮಾನ ನೀಡಿದೆ. ತಾಲೂಕಿನಲ್ಲಿ ಒಂದು ಕನ್ನಡ ಭವನವಾಗಬೇಕಾಗಿದೆ. ಶಾಸಕರಲ್ಲಿ ಮನವಿ ಮಾಡುತ್ತೇವೆ ಎಂದರು.

ಧ್ವಜಾರೋಹಣ: ಗುರುವಾರ ಬೆಳಗ್ಗೆ 8 ಗಂಟೆಯಲ್ಲಿ ತಹಶೀಲ್ದಾರ್‌ ಅಮೃತ್‌ ಆತ್ರೇಶ್‌, ಇಒ ಮಧು, ಬಿಇಒ ತಿಮ್ಮಯ್ಯ, ಶ್ರೀಸಿದ್ದಲಿಂಗ ಮಹಾಸ್ವಾಮೀಜಿಗಳು ರಾಷ್ಟ್ರಧ್ವಜ, ನಾಡಧ್ವಜ, ಪರಿಷತ್‌ ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.

ವಿವಿಧ ವಿಚಾರ ಗೋಷ್ಠಿ:ಸಾಹಿತಿ ಮಣ್ಣೆ ಮೋಹನ್‌ ಅಧ್ಯಕ್ಷತೆಯಲ್ಲಿ ವಿಚಾರ ಗೋಷ್ಠಿ ನಡೆಯಿತು. ವಿಚಾರ ಗೋಷ್ಠಿಯಲ್ಲಿ ಅಕ್ಕಮಹಾದೇವಿ, ರುದ್ರಸ್ವಾಮಿ, ಕಾಸರಘಟ್ಟ ಗಂಗಾಧರ್‌, ಬೆಟ್ಟಸ್ವಾಮಿಗೌಡ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು. ನಂತರ ಸಾಹಿತಿ ಲಕ್ಷ್ಮೀಶ್ರೀನಿವಾಸ್‌ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 18 ಕವಿತೆ ವಾಚನ ಮಾಡಿದರು. ಕವಿತೆ ವಾಚನ ಮಾಡಿದ ಎಲ್ಲರಿಗೂ ಕನ್ನಡ ಸಾಹಿತ್ಯ ಪರಿಷತ್‌ ನಿಂದ ಅಭಿನಂದನೆ ಸಲ್ಲಿಸಲಾಯಿತು.

Advertisement

ಅದ್ದೂರಿ ಮೆರವಣಿಗೆ: ನಗರದ ಕೋಟೆ ಬೀದಿಯ ಭುವನೇಶ್ವರಿ ದೇವಿಯ ದೇವಾಲಯದಿಂದ ಬಸ್‌ ನಿಲ್ದಾಣದ ಮಾರ್ಗವಾಗಿ ಬಸವಣ್ಣ ದೇವರ ಮಠದವರೆಗೂ ಸಾವಿರಾರು ಜನರ ಸಮ್ಮುಖದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚೌಡಯ್ಯ ಅವರನ್ನು ಬೆಳ್ಳಿ ಪಲ್ಲಕ್ಕಿ ಉತ್ಸವದ ಮೂಲಕ ಕರೆತರಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಪೂರ್ಣ ಕುಂಭ ಸೇರಿದಂತೆ ವಿದ್ಯಾರ್ಥಿಗಳ ಭಾಗವಹಿಸಿದ್ದು ವಿಶೇಷ ಮೆರಗು ತಂದಿತು.

ಪುಸ್ತಕ ಬಿಡುಗಡೆ: ವೇದಿಕೆಯಲ್ಲಿ ಪ್ರಕಾಶ್‌ ಮೂರ್ತಿ ಅವರ ನಿರಾಪರಾಧಿ, ಮುರಳೀಧರ್‌ ಅವರ ಆರದ ದೀಪ, ಸಿರಾಜ್‌ ಅಹಮದ್‌ ಅವರ ನವಿಲಿಗೆ ಸಾವಿರ ನಯನಗಳು, ಪ್ರೇಮಕುಮಾರ್‌ ಅವರ ಮನದ ಹನಿ, ನಂದಾದೀಪ ಅವರ ಕಾವ್ಯ ದರ್ಶಿನಿ ಪುಸ್ತಕಗಳನ್ನು ಸಮ್ಮೇಳನಾಧ್ಯಕ್ಷ ಡಾ.ಚೌಡಯ್ಯ, ಜಿಲ್ಲಾಧ್ಯಕ್ಷ ಕೃಷ್ಣಪ್ಪ ಬಿಡುಗಡೆ ಮಾಡಿದರು.

ಆರೋಗ್ಯ ತಪಾಸಣೆ ಶಿಬಿರ: ಸಮ್ಮೇಳನದಲ್ಲಿ ಸಿ.ಆರ್‌ .ದಾಸೇಗೌಡ ನೇತೃತ್ವದಲ್ಲಿ ಬಿಜಿಎಸ್‌ ಹಾಗೂ ಸಪ್ತಗಿರಿ ಆಸ್ಪತ್ರೆಗಳಿಂದ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸಿಎಸ್‌ಸಿವಿಎಲ್‌ ಟ್ರಸ್ಟ್‌ನಿಂದ ಆಯುಷ್ಮಾನ್‌ ಕಾರ್ಡ್‌ ಮಾಡುವ ಶಿಬಿರ ನಡೆಯಿತು. ಅನೇಕ ವಿದ್ಯಾರ್ಥಿಗಳು, ಜನರು ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು.

ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಶ್ರೀ ಶಿವಾನಂದಾಶ್ರಮದ ಶ್ರೀರಮಾನಂದ ಮಹಾಸ್ವಾಮೀಜಿ, ಕೆಪಿಸಿಸಿ ಪದವಿದರ ವಿಭಾದ ಅಧ್ಯಕ್ಷ ರಾಮೋಜಿಗೌಡ, ಗೌರವಾಧ್ಯಕ್ಷ ನಾರಾಯಣಗೌಡ, ಗೌರವ ಕಾರ್ಯದರ್ಶಿ ಪ್ರಕಾಶ್‌ ಮೂರ್ತಿ, ಮಂಜುನಾಥ್‌, ತಾಲೂಕು ಕಲಾವಿದರ ಬಳದ ಅಧ್ಯಕ್ಷ ಡಾ.ಜಿ.ಗಂಗರಾಜು, ಜಿಲ್ಲಾ ಮಹಿಳಾ ಪತ್ರಿನಿಧಿ ಮಂಜುಳಾ ಸಿದ್ದರಾಜು, ಪದಾಧಿಕಾರಿಗಳಾದ ವಿಜಯ್‌ ಹೊಸಪಾಳ್ಯ, ದಿನೇಶ್‌, ಶಿವಲಿಂಗಯ್ಯ, ಜನಾರ್ಧನ್‌, ಸಿದ್ದರಾಜು, ಕಲಾವಿದ ಬೂದಿಹಾಲ್‌ ಕಿಟ್ಟಿ, ನಗರ ಅಧ್ಯಕ್ಷ ಮಲ್ಲೇಶ್‌, ಪ್ರತಿನಿಧಿ ಸಿ.ಎಚ್‌ ,ಸಿದ್ದಯ್ಯ, ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಕೆಂಪಣ್ಣ,ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿಮೂರ್ತಿ, ಬಿಜೆಪಿ ಉಪಾಧ್ಯಕ್ಷ ಜಗದೀಶ್‌ಚೌಧರಿ, ಕಾಂಗ್ರೆಸ್‌ ಮಹಿಳಾ ಘಟಕದ ರುಕ್ಮಿಣಿ, ನಾಗರತ್ನ, ಬಿಜೆಪಿ ಮಹಿಳಾ ಘಟಕ ಮಂಜುಳ ಉಪಸ್ಥಿತರಿದರು.

ಶಿಸ್ತು ಬದ್ಧವಾಗಿ ನಡೆದ ಸಾಹಿತ್ಯ ಸಮ್ಮೇಳನ ಕಸಾಪ ತಾಲೂಕು ಅಧ್ಯಕ್ಷ ಪ್ರದೀಪ್‌ಕುಮಾರ್‌ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಬೆಳಗ್ಗೆ ಧ್ವಜಾರೋಹಣದಿಂದ ಸಮಾರೋಪದವರೆಗೂ ಶಿಸ್ತು ಬದ್ಧವಾಗಿ ಚೆನ್ನಾಗಿ ನಡೆದಿದ್ದು, ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿ ಹಬ್ಬದಂತೆ ಆಚರಣೆ ಮಾಡಿದರು. ಬಹುದಿನಗಳ ಪರಿಶ್ರಮ ಹಾಗೂ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಅತ್ಯುತ್ತಮವಾಗಿ ನಡೆಯಿತು. ಶೇ.60ರಷ್ಟು ಕನ್ನಡ ನಾಮಫ‌ಲಕ ಕಡ್ಡಾಯ, ಕನ್ನಡಿಗರಿಗೆ ಸ್ಥಳೀಯ ಕಂಪನಿಗಳಲ್ಲಿ ಉದ್ಯೋಗ ನೀಡಬೇಕು ಸೇರಿದಂತೆ ಅನೇಕ ನಿರ್ಣಯಗಳನ್ನು ಸಮ್ಮೇಳನದಲ್ಲಿ ತೆಗೆದುಕೊಂಡಿದ್ದು, ರಾಜ್ಯ ಘಟಕದ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next