ಬೆಂಗಳೂರು: ಪಾರದರ್ಶಕ ಮತದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಇದೇ ಮೊದಲ ಬಾರಿ ರಚಿಸುತ್ತಿರುವ “ಚುನಾವಣಾ ಗೀತೆ’ಯ ಚಿತ್ರೀಕರಣ ಶುಕ್ರವಾರ ನಗರದ ವಿಧಾನಸೌಧ ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಿತು.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಚುನಾವಣಾ ಗೀತೆಯ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ. ಗೀತೆಯನ್ನು ನಿರ್ದೇಶಕ ಯೋಗರಾಜ್ ಭಟ್ ರಚಿಸಿ ನಿರ್ದೇಶಿಸುತ್ತಿದ್ದು, ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಹೊಣೆಯನ್ನು ವಹಿಸಿಕೊಂಡಿದ್ದಾರೆ.
ಜತೆಗೆ ಗಾಯಕ ವಿಜಯ್ ಪ್ರಕಾಶ್ ಮತ್ತು ಅವರ ತಂಡ ಗೀತೆ ಹಾಡಲಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಸಿದ್ದಾರೆ. ಐದು ದಿನಗಳಿಂದ ರಾಜ್ಯದಾದ್ಯಂತ ಚಿತ್ರೀಕರಣ ನಡೆದಿದ್ದು, ಶುಕ್ರವಾರ ತಂಡ ಬೆಂಗಳೂರಲ್ಲಿ ಶೂಟಿಂಗ್ ನಡೆಸಿದೆ. ರಾಜ್ಯದ ಸಾಂಸ್ಕೃತಿಕ ಕಲೆಗಳನ್ನು ಗೀತೆ ಬಿಂಬಿಸಲಿದ್ದು, ನೂರಾರು ಕಲಾವಿದರು ಕಲಾ ಪ್ರದರ್ಶನ ನೀಡಿದ್ದಾರೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾತನಾಡಿ, ಚುನಾವಣಾ ಗೀತೆ ರಚಿಸುವ ಕುರಿತು ಹಲವಾರು ದಿನಗಳಿಂದ ಸಂಶೋಧನೆ ನಡೆಸಿದ್ದು, ಜನಜಾಗೃತಿ ಹಾಗೂ ನೈತಿಕ ಮತದಾನವನ್ನು ಗೀತೆ ಉತ್ತೇಜಿಸಲಿದೆ. ಜತೆಗೆ ಇದು ದೊಡ್ಡ ಸಂಖ್ಯೆಯ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೇರಣೆಯಾಗಲಿದೆ. ಈ ಗೀತೆಯನ್ನು ರೇಡಿಯೋ, ದೂರದರ್ಶನ ಹಾಗೂ ಚಲನಚಿತ್ರಗಳ ಸೇರಿದಂತೆ ಇನ್ನಿತರ ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.
ನಿರ್ದೇಶಕ ಯೋಜರಾಜ್ ಭಟ್ ಮಾತನಾಡಿ, ಹಲವು ವರ್ಷಗಳಿಂದ ಸಮಾಜ ಹಾಗೂ ಪ್ರಜಾಪ್ರಭುತ್ವಕ್ಕೆ ಏನಾದರೂ ಮಾಡಬೇಕೆಂಬ ಬಯಕೆಯಿತ್ತು. ಈ ಚುನಾವಣಾ ಗೀತೆ ಮೂಲಕ ಅದು ಸಾಧ್ಯವಾಗಿದ್ದು, ಭಾಷಣದ ಮೂಲಕ ನೀಡಲಾಗದ ಉತ್ತೇಜನವನ್ನು ಹಾಡಿನ ಮೂಲಕ ನೀಡಬಹುದಾಗಿದೆ. ಹಾಡುಗಳಲ್ಲಿನ ಅಂಶಗಳನ್ನು ಸುಲಭವಾಗಿ ಗ್ರಹಿಸಬಹುದಾಗಿದ್ದು, ಅವು ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತವೆ ಎಂದರು.
ಚುನಾವಣಾ ಗೀತೆ ಕೇಳುವ ಪ್ರತಿಯೊಬ್ಬರ ಮನದಲ್ಲಿಯೂ ಅದು ದೀರ್ಘಕಾಲ ಉಳಿಯಲಿದ್ದು, ಪಾರದರ್ಶಕ ಚುನಾವಣೆ ಕುರಿತು ಅರಿವು ಮೂಡಿಸಲಿದೆ. ಗೀತೆಯ ಚಿತ್ರೀಕರಣಕ್ಕೆ ಆಯೋಗ ಸಂಪೂರ್ಣ ಬೆಂಬಲ ನೀಡಿದ್ದು, ವಿಕಲಚೇತನರು, ಆದಿವಾಸಿಗಳು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಯುವ ಮತದಾರರನ್ನು ಒಳಗೊಂಡಂತೆ ಗೀತೆಯನ್ನು ಚಿತ್ರೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಾಡಿ ಮಾಡಿ ಮತದಾನ: “ಮಾಡಿ ಮಾಡಿ ಮತದಾನ, ಇರಲಿ ದೇಶಕೆ ನಿನ್ನಯ ಅಭಿಮಾನ’ ಎಂಬ ಸಾಲುಗಳೊಂದಿಗೆ ಆರಂಭವಾಗುವ ಗೀತೆ, ಚುನಾವಣೆ ಹಾಗೂ ಮತದಾನದ ಮಹತ್ವ, ಪ್ರಜಾಪ್ರಭುತ್ವದ ಮೌಲ್ಯ ಉಳಿಸುವಿಕೆ, ಸರ್ಕಾರ ಮತ್ತು ಜನಪ್ರತಿನಿಧಿಗಳು ಹಾಗೂ ಮತದಾರರ ಜವಾಬ್ದಾರಿ, ರಾಜ್ಯದ ಕಲೆ ಸಂಸ್ಕೃತಿ, ಇತಿಹಾಸ ಬಿಂಬಿಸುತ್ತದೆ. ಬೆಂಗಳೂರಿನಲ್ಲಿ ಒಂದು ತಂಡ ಚಿತ್ರೀಕರಣದಲ್ಲಿ ತೊಡಗಿದ್ದು, ಇನ್ನೂ ನಾಲ್ಕು ತಂಡಗಳು ರಾಜ್ಯಾದ್ಯಂತ ಸಂಚರಿಸಿ ಪ್ರಮುಖ ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಿವೆ.