“ಅನ್ಲಾಕ್ ರಾಘವ’ ಹೀಗೊಂದು ವಿಭಿನ್ನ ಶೀರ್ಷಿಕೆಯ ಕನ್ನಡ ಚಿತ್ರವೊಂದು ನಿರ್ಮಾಣವಾಗಿ, ಈಗ ಬಿಡುಗಡೆಯ ಹೊಸ್ತಿಲಲ್ಲಿದೆ. ಇತ್ತೀಚೆಗೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ವಿಜಯ ಪ್ರಕಾಶ್ ಅವರ ಧ್ವನಿಯಲ್ಲಿ ಮೂಡಿಬಂದ “ಲಾಕ್ ಲಾಕ್ ಲಾಕ್ ನಮ್ಮೊಳಗೆ ನಾವೇ ಲಾಕ್’ ಎಂಬ ಹಾಡು ಸದ್ಯ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಚಿತ್ರದಲ್ಲಿನ ಈ ಹಾಡಿನ ಬಗ್ಗೆ ಮಾತು ಹಂಚಿಕೊಂಡ ನಿರ್ದೇಶಕ ದೀಪಕ್ ಮಧುವನಹಳ್ಳಿ, “ಈ ಹಾಡಿನಲ್ಲಿರುವ ಎನರ್ಜಿ ಇಡೀ ಸಿನಿಮಾದಲ್ಲಿದೆ. ನಮ್ಮ ಚಿತ್ರದಲ್ಲಿ ಕಂಪೋಸ್ ಆದ ಮೊದಲ ಹಾಡು ಇದು ಹಾಗೂ ಕೊನೆಗೆ ವಾಯ್ಸ್ ಮಿಕ್ಸಿಂಗ್ ಆದ ಹಾಡು ಕೂಡ ಇದು. ಚಿತ್ರದ ಶೀರ್ಷಿಕೆ ಗೀತೆಯೂ ಹೌದು.
ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸೊಗಸಾಗಿ ಹಾಡಿದ್ದಾರೆ. ಅಷ್ಟೇ ಸೊಗಸಾಗಿ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಫೆಬ್ರವರಿ 7ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ’ ಎಂದರು.
ಈ ಚಿತ್ರದ ಮೂಲಕ ಮಿಲಿಂದ್ ನಾಯಕ ನಟನಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಸಂತಸ ಹಂಚಿಕೊಳ್ಳುತ್ತ, “ಇದು ನನ್ನನ್ನು ಚಿತ್ರದಲ್ಲಿ ಪರಿಚಯಿಸುವ ಗೀತೆ. ಚಿತ್ರದ ಮೂರು ಹಾಡುಗಳಲ್ಲಿ ನನ್ನಗಿಷ್ಟವಾದ ಹಾಡು ಇದು. ನನ್ನ ಮೊದಲ ಚಿತ್ರದ ಮೊದಲ ಹಾಡನ್ನು ವಿಜಯ್ ಪ್ರಕಾಶ್ ಅವರು ಹಾಡಿರುವುದು ಹೆಚ್ಚು ಖುಷಿಯಾಗಿದೆ’ ಎನ್ನುತ್ತಾರೆ ಮಿಲಿಂದ್.
ನಿರ್ಮಾಪಕ ಮಂಜುನಾಥ್ ದಾಸೇಗೌಡ ಮಾತನಾಡುತ್ತ, “ನಾವು ಮೂಲತಃ ಶಿವಮೊಗ್ಗದವರು. ನಮ್ಮೂರಿನಲ್ಲೇ ಈ ಹಾಡು ಬಿಡುಗಡೆಯಾಗಿದ್ದು ಸಂತೋಷವಾಗಿದೆ. ನಾನು ಹಾಗೂ ಗಿರೀಶ್ ಕುಮಾರ್ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ, ನನ್ನ ಮಗ ಮಿಲಿಂದ್ ನಾಯಕ ನಟನಾಗಿದ್ದಾನೆ’ ಎಂದರು.