ಹೊಸದಿಲ್ಲಿ: ಸೋಮವಾರದಿಂದ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಆ್ಯತ್ಲೀಟ್‌ಗಳು ಹೊರಾಂಗಣ ಅಭ್ಯಾಸ ಆರಂಭಿಸಲಿದ್ದಾರೆ. ಇದರೊಂದಿಗೆ ಕ್ರೀಡಾಪಟುಗಳ ಎರಡು ತಿಂಗಳ ಸುದೀರ್ಘ ವಿರಾಮ ಅವಧಿ ಕೊನೆಗೊಳ್ಳಲಿದೆ. ಆ್ಯತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಆದಿಲ್ ಸುಮಾರಿವಾಲ ರವಿವಾರ ಈ ವಿಷಯವನ್ನು ಪ್ರಕಟಿಸಿದರು.
ಸದ್ಯ ಪಟಿಯಾಲಾ, ಬೆಂಗಳೂರು ಮತ್ತು ಊಟಿ ಕೇಂದ್ರಗಳಲ್ಲಿ ಕ್ರೀಡಾಪಟುಗಳು ವಿರಾಮ ಅವಧಿಯನ್ನು ಕಳೆಯುತ್ತಿದ್ದು, ಇವರೆಲ್ಲ ಸೋಮವಾರ ಅಂಗಳಕ್ಕಿಳಿಯಬಹುದಾಗಿದೆ. ಆದರೆ ಮೊದಲ ಹಂತವಾಗಿ ಟ್ರ್ಯಾಕ್‌ಗಳಲ್ಲಿ ಕೇವಲ ಫಿಟ್‌ನೆಸ್ ಟ್ರೇನಿಂಗ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
“ಕ್ರೀಡಾಪಟುಗಳೆಲ್ಲ ಕಳೆದ ಎಂಟು ವಾರಗಳಿಂದ ಕೋಣೆಯಲ್ಲೇ ಉಳಿದಿದ್ದಾರೆ. ಹೀಗಾಗಿ ಇವರ ಫಿಟ್‌ನೆಸ್ ಒಂದು ಹಂತಕ್ಕೆ ಬರುವುದು ಮುಖ್ಯ. ಅನಂತರ ಇವರೆಲ್ಲ ರನ್ನಿಂಗ್, ತ್ರೋಯಿಂಗ್ ಮೊದಲಾದ ಅಭ್ಯಾಸಗಳಲ್ಲಿ ತೊಡಗಬಹುದು’ ಎಂದು ಸುಮಾರಿವಾಲ ಹೇಳಿದರು.
ಕ್ರೀಡಾಳುಗಳ ಸಂತಸ
ಹೊರಾಂಗಣ ಅಭ್ಯಾಸಕ್ಕೆ ಅವಕಾಶ ನೀಡಿದ್ದಕ್ಕಾಗಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಸ್ಪ್ರಿಂಟರ್ ಹಿಮಾ ದಾಸ್, ಓಟಗಾರ್ತಿ ದ್ಯುತಿ ಚಂದ್ ಮೊದಲಾದವರೆಲ್ಲ ಸಂತಸ ವ್ಯಕ್ತಪಡಿಸಿದ್ದಾರೆ.