Advertisement

ಉತ್ತರದ ದಟ್ಟಣೆ ನಿವಾರಣೆಗೆ ಯೋಜನೆಗಳ ಗೋಪುರ!

01:19 AM Jun 01, 2019 | Team Udayavani |

ಬೆಂಗಳೂರು: ಆ ಮಾರ್ಗವು ಬೆಂಗಳೂರು ಮತ್ತು ವಿಶ್ವದ ವಿವಿಧ ದೇಶಗಳ ನಡುವಿನ ಸಂಪರ್ಕ ಸೇತುವೆ. ಅಲ್ಲಿ ಉಂಟಾಗುವ ಸಂಚಾರದಟ್ಟಣೆ ನಿವಾರಣೆಗಾಗಿ ಕಳೆದೊಂದು ದಶಕದಲ್ಲಿ ಸರ್ಕಾರ ಘೋಷಿಸಿದ ಯೋಜನೆಗಳು ಆರು. ಆ ಪೈಕಿ ಕಾರ್ಯರೂಪಕ್ಕೆ ತಂದ ಯೋಜನೆಗಳು ಶೂನ್ಯ! ಇದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಟಾಳ ಮಾರ್ಗದ ಕತೆ.

Advertisement

ವಿಮಾನ ನಿಲ್ದಾಣ ರಸ್ತೆ ಪೀಕ್‌ ಅವರ್‌ನಲ್ಲಿ ಗಂಟೆಗೆ 2,900 ವಾಹನಗಳು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಅಲ್ಲಿ ವಾಸ್ತವವಾಗಿ ಕಾರ್ಯಾಚರಣೆ ಮಾಡುತ್ತಿರುವ ವಾಹನಗಳ ಸಂಖ್ಯೆ 7,700ರಿಂದ 8,000 ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ನೀಡಿದ ವರದಿಯಲ್ಲಿ ಉಲ್ಲೇಖೀಸಿದೆ. ಉದ್ದೇಶಿತ ಮಾರ್ಗದಲ್ಲಿ “ಪೀಕ್‌ ಅವರ್‌’ನಲ್ಲಿ ಪ್ರತಿ ಗಂಟೆಗೆ ಸುಮಾರು 25 ಸಾವಿರ ವಾಹನಗಳು ಸಂಚರಿಸುತ್ತವೆ ಎಂದು ಸಂಚಾರ ಪೊಲೀಸರು ಅಂದಾಜಿಸಿದ್ದಾರೆ. ನರಕಯಾತನೆ ಅನುಭವಿಸುತ್ತಿರುವ ಈ ಮಾರ್ಗದ ಜನರಿಗಾಗಿ ಸರ್ಕಾರ ಯೋಜನೆಗಳ ಆಶಾಗೋಪುರ ಕಟ್ಟಿದೆ. ಆದರೆ, ಆಗಿದ್ದು ಬರೀ ಭ್ರಮನಿರಸನ.

ಘೋಷಿಸಿದ ಯೋಜನೆಗಳೆಲ್ಲವೂ ಸಮಗ್ರ ಯೋಜನಾ ವರದಿಗೆ ಬಂದು ನಿಲ್ಲುತ್ತವೆ. ಇಲ್ಲವೇ ವಿವಾದದ ಅಲೆ ಎಬ್ಬಸುತ್ತವೆ. ಕೊನೆಗೆ ಆ ಅಲೆಯಲ್ಲೇ ಕಣ್ಮರೆ ಆಗುತ್ತವೆ. ಹಿಂದಿನ ಸರ್ಕಾರದಲ್ಲಿ ಇಲ್ಲಿ ಉಕ್ಕಿನ ಸೇತುವೆ ಯೋಜನೆ ಘೋಷಣೆ ಆಗಿತ್ತು. ಅದು ವಿವಾದದ ಕಿಡಿ ಹಚ್ಚಿತು. ಕೊನೆಗೆ ಸರ್ಕಾರ ಯೋಜನೆಯಿಂದ ಹಿಂದೆ ಸರಿಯಿತು. ಈಗ ಮತ್ತದೇ ಮಾರ್ಗದಲ್ಲಿ ಅದೇ ಯೋಜನೆಯನ್ನು ಘೋಷಿಸಲಾಗಿದೆ. ಪುನಃ ಅಷ್ಟೇ ವಿರೋಧ ಕೇಳಿಬರುತ್ತಿದೆ.

ಈ ಮಧ್ಯೆ ಮೆಟ್ರೋ ಯೋಜನೆ ಘೋಷಿಸಿದ್ದು, ಅದು ಹೆಬ್ಟಾಳ ಮೂಲಕವೇ ಹಾದುಹೋಗಲಿದೆ ಎಂದು ಹೇಳಲಾಗಿದೆ. ಇದಕ್ಕೂ ಮುನ್ನ “ಹೈ-ಸ್ಪೀಡ್‌’ ರೈಲು, ಕಮ್ಯುಟರ್‌ ರೈಲು, ಮೋನೊ ರೈಲು, ಬಾಣಸವಾಡಿಯಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರತ್ಯೇಕ ರಸ್ತೆ, ಮೆಟ್ರೋ ರೈಲು ಇವಿಷ್ಟೂ ಯೋಜನೆಗಳನ್ನು ವಿವಿಧ ಅವಧಿಯಲ್ಲಿ ಸರ್ಕಾರ ಘೋಷಣೆ ಮಾಡಿದೆ.

ಯೋಜನೆಗಳೂ… ಲಾಬಿಗಳೂ…: ಬಹುತೇಕ ಯೋಜನೆಗಳ ಹಿಂದೆ ಹಲವು ರೀತಿಯ ಲಾಬಿಗಳು ಕೆಲಸ ಮಾಡುತ್ತವೆ. ತಜ್ಞರೊಂದಿಗೆ ಚರ್ಚಿಸದೆ, ಸಾಧಕ-ಬಾಧಕಗಳನ್ನೂ ನೋಡದೆ, ವೈಯಕ್ತಿಕ ಹಿತಾಸಕ್ತಿಗಾಗಿ ಜನಪ್ರಿಯ ಯೋಜನೆಗಳನ್ನು ಘೋಷಿಸಲಾಗುತ್ತದೆ. ನಂತರ ಆ ಯೋಜನೆಗಳ ವಸ್ತುಸ್ಥಿತಿಯನ್ನು ತಿಳಿಯಲಾಗುತ್ತದೆ. ಆಗ, ಆ ಯೋಜನೆಯನ್ನು ಕೈಬಿಡಲಾಗುತ್ತದೆ. ಹೆಬ್ಟಾಳ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಘೋಷಿಸಿದ ಯೋಜನೆಗಳಲ್ಲಿ ಆಗಿರುವುದೂ ಇದೇ ಎಂದು ಸಾರಿಗೆ ತಜ್ಞ ಎಂ.ಎನ್‌. ಶ್ರೀಹರಿ ಅಭಿಪ್ರಾಯಪಡುತ್ತಾರೆ.

Advertisement

ಮೊದಲು ರಾಜಕೀಯ ಸಾಧಕ-ಬಾಧಕಗಳ ಬಗ್ಗೆ ಚಿಂತನೆ ಆಗಬೇಕು. ಸ್ಥಳೀಯ ಸಂಸ್ಥೆಗಳು, ನಿವಾಸಿಗಳಿಂದ ಅಭಿಪ್ರಾಯ ಸಂಗ್ರಹಿಸಬೇಕು. ಅಲ್ಲಿ ಒಪ್ಪಿಗೆಯಾದ ಬಳಿಕ ತಜ್ಞರಿಂದ ಸಾಧಕ-ಬಾಧಕಗಳ ಕುರಿತು ಚರ್ಚಿಸಬೇಕು. ಇದಾದ ಮೇಲೆ ಹಣಕಾಸಿನ ಸಾಧಕ-ಬಾಧಕ ಬರುತ್ತದೆ. ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ಕಾರ್ಪೋರೇಷನ್‌ ಸ್ಥಾಪಿಸಬೇಕು. ಆದರೆ, ಈಗ ಆಗುತ್ತಿರುವುದೆಲ್ಲಾ ತದ್ವಿರುದ್ಧ. ಇದೇ ಕಾರಣಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದರೂ, ವಿವಿಧ ಹಂತಗಳಲ್ಲಿ ಅವ್ಯಾವೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಈವರೆಗೆ ಘೋಷಿಸಿದ ಯೋಜನೆಗಳು
* ಹೈ-ಸ್ಪೀಡ್‌ ರೈಲು: ಮಿನ್ಸ್‌ಚೌಕ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌). ಯೋಜನಾ ವೆಚ್ಚ 6,990 ಕೋಟಿ ರೂ. ಸಮಗ್ರ ಯೋಜನಾ ವರದಿ (ಡಿಪಿಆರ್‌) ಬಂದ ನಂತರ ಯೋಜನೆ ಬಗ್ಗೆ ಮಾತಿಲ್ಲ.

* ಕಮ್ಯುಟರ್‌ ರೈಲು: ಯಶವಂತಪುರ ಅಥವಾ ಬೈಯಪ್ಪನಹಳ್ಳಿ ಇವೆರಡರಿಂದಲೂ ದೇವನಹಳ್ಳಿಗೆ ಸಂಪರ್ಕ ಕಲ್ಪಿಸುತ್ತದೆ. ಸರ್ಕಾರ ತನ್ನ ಪಾಲಿನ ಹಣ, ಜಾಗ ಕೊಡುವುದಾಗಿ ಒಪ್ಪಿಕೊಂಡಿದೆ. ಕಳೆದ ರೈಲ್ವೆ ಬಜೆಟ್‌ನಲ್ಲಿ ರೈಲ್ವೆ ಸಚಿವರೂ “ಪರಿಶೀಲಿಸುವುದಾಗಿ’ ಹೇಳಿದ್ದಾರೆ. ಈಚೆಗೆ ಸಚಿವರು ಬೆಂಗಳೂರಿಗೆ ಬಂದಾಗಲೂ ಕಮ್ಯುಟರ್‌ ರೈಲು ಸೇರಿದಂತೆ ರೈಲು ಯೋಜನೆಗಳ ಅನುಷ್ಠಾನಕ್ಕಾಗಿ ಪ್ರತ್ಯೇಕ ಕಾರ್ಪೋರೇಷನ್‌ ಸ್ಥಾಪಿಸುವ ಅಗತ್ಯವಿದೆ ಎಂದೂ ಪ್ರತಿಪಾದಿಸಿದ್ದಾರೆ.

* ಮೊನೊ ರೈಲು: ಜೆ.ಪಿ. ನಗರದಿಂದ ಹೆಬ್ಟಾಳದವರೆಗೆ 34 ಕಿ.ಮೀ. ಉದ್ದದ ಮೊನೊ ರೈಲು ಯೋಜನೆಯನ್ನು ಸರ್ಕಾರ ಘೋಷಿಸಿತ್ತು. ಪ್ರತಿ ಕಿ.ಮೀ.ಗೆ 110ರಿಂದ 140 ಕೋಟಿ ರೂ. ವೆಚ್ಚ ಆಗುತ್ತದೆ ಎಂದೂ ಹೇಳಿತ್ತು. ನಂತರದಲ್ಲಿ ಈ ಬಗ್ಗೆ ಚಕಾರ ಇಲ್ಲ.

* ಪ್ರತ್ಯೇಕ ರಸ್ತೆ: 2011ರಲ್ಲಿ ಬಾಣಸವಾಡಿಯಿಂದ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ರಸ್ತೆ ನಿರ್ಮಾಣಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿತ್ತು. ಆದರೆ, ಕೆಐಎಎಲ್‌ ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ ಸ್ಥಗಿತಗೊಳಿಸಲಾಯಿತು. ಈಗ ಲೋಕೋಪಯೋಗಿ ಇಲಾಖೆಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

* ಉಕ್ಕಿನ ಸೇತುವೆ: ನಗರದಿಂದ ಕೆಐಎಎಲ್‌ವರೆಗಿನ 30 ಕಿ.ಮೀ.ನಲ್ಲಿ 6.72 ಕಿ.ಮೀ. ಉದ್ದದ ಷಟಥ ಉಕ್ಕಿನ ಸೇತುವೆಯನ್ನು ನಿರ್ಮಿಸುವುದಾಗಿ ಘೋಷಿಸಿತ್ತು. ನಂತರ ಕೈಬಿಡಲಾಯಿತು. ಈಗ ಇದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

* ಮೆಟ್ರೋ ರೈಲು: ನಾಗವಾರ, ಹೆಬ್ಟಾಳ, ಜಕ್ಕೂರು, ಕೋಗಿಲು, ಟ್ರಂಪೆಟ್‌, ಚಿಕ್ಕಜಾಲ, ವೆಸ್ಟ್‌ ಕೆಐಎ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next