ಬೇತಮಂಗಲ: ಸುಮಾರು ದಶಕಗಳಿಂದ ಸ್ಮಶಾನ ಹಾಗೂ ರೈತರ ಹೊಲಗಳಿಗೆ ದಾರಿಯಿಲ್ಲದೆ ಪರಿತಪಿಸುತ್ತಿದ್ದ ಗ್ರಾಮಸ್ಥರಿಗೆ ಶಾಸಕಿ ಎಂ.ರೂಪಕಲಾ ಮಳೆಯನ್ನೂ ಲೆಕ್ಕಿಸದೆ ಅಧಿಕಾರಿಗಳ ಜತೆ ಸರ್ವೇ ನಡೆಸಿ, ರಸ್ತೆ ಗುರುತಿಸಿ, ಕಾಂಪೌಂಡ್ ಹಾಕಿಸುವ ಮೂಲಕ ಗ್ರಾಮಸ್ಥರ ಬಹು ವರ್ಷಗಳ ಕನಸು ಈಡೇರಿಸಿದರು.
ಪಟ್ಟಣದ ಸಮೀಪದ ಸುಂದರಪಾಳ್ಯ ಗ್ರಾಪಂ ವ್ಯಾಪ್ತಿ ಸುವರ್ಣಹಳ್ಳಿ ಗ್ರಾಮದ ಸ್ಮಶಾನಕ್ಕೆ ಸಮರ್ಪಕ ರಸ್ತೆಯಿಲ್ಲದೆ ಖಾಸಗಿ ವ್ಯಕ್ತಿಗಳ ಜಮೀನಿನ ಮೂಲಕ ಹೋಗಿ ಶವ ಸಂಸ್ಕಾರ ನಡೆಸಲಾಗುತ್ತಿತ್ತು. ಆದರೆ ಖಾಸಗಿ ರೈತ ತನ್ನ ಹೊಲಕ್ಕೆ ಕಾಂಪೌಡ್ ನಿರ್ಮಿಸಿಕೊಂಡ ಹಿನ್ನೆಲೆ 11 ವರ್ಷಗಳಿಂದ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದರು.
ಈ ಬಗ್ಗೆ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದ ತಕ್ಷಣ ಅಜು-ಬಾಜಿನ ರೈತರ ಮನವೋಲಿಸಿ, ಕಾನೂನಿನ ಅಡಿಯಲ್ಲಿಯೇ 10 ಅಡಿಗಳ ರಸ್ತೆ ನಿರ್ಮಾಣಕ್ಕೆ ಸರ್ವೇ ಮಾಡಿ ರೈತರಿಗೆ, ಗ್ರಾಮಸ್ಥರಿಗೆ ಅನವು ಮಾಡಿ ಕೊಡಲು ತಹಶೀಲ್ದಾರ್‌ಗೆ ಮನವಿ ಮಾಡಿದ್ದರು. ತಹಶೀಲ್ದಾರ್ ಸುಜಾತ ತಂಡ ಸರ್ವೆ ಮಾಡಲು ಹೊರ ಟಾಗ ಬಿರುಗಾಳಿ ಸಹಿತ ಮಳೆ ಆರಂಭವಾಯಿತು.
ಶಾಸಕಿ ಎಂ.ರೂಪಕಲಾ ಸ್ಥಳದಲ್ಲೇ ಇದ್ದು, ಮಳೆಯಲ್ಲೇ ಕಾಂಪೌಂಡ್ ಹಾಕಿಸಿದರು. ರೈತರಿಗೆ ಕೃತಜ್ಞತೆ ಅರ್ಪಿಸಿದರು. ರಸ್ತೆಯನ್ನು ಗ್ರಾಪಂ ಅಧ್ಯಕ್ಷ ರಾಂ ಬಾಬು ಮತ್ತು ಪಿಡಿಒ ಏಜಾಜ್ ಪೂರ್ಣಗೊಳಿಸಲು ಸೂಚಿಸಿದರು. ಕಂದಾಯ ಅಧಿಕಾರಿ ನಾರಾಯಣಸ್ವಾಮಿ, ಗ್ರಾಮ ಲೆಕ್ಕಿಗ ಪ್ರೇಮ, ಸರ್ವೇ ಅಧಿಕಾರಿ ಮೌಲಾಖಾನ್, ಸಹಾಯಕ ಶಿವರಾಜ್, ಗ್ರಾಪಂ ಅಧ್ಯಕ್ಷ ರಾಂ ಬಾಬು, ಉಪಾಧ್ಯಕ್ಷ ರತ್ನಮ್ಮ ಶ್ರೀನಿವಾಸ್, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಜಯರಾಮ ರೆಡ್ಡಿ, ವೆಂಗಸಂದ್ರ ಅಧ್ಯಕ್ಷ ಶಂಕರ್, ಪಿಡಿಒ ಏಜಾಜ್, ಕ್ಯಾಸಂಬಳ್ಳಿ ಸೊಸೈಟಿ ಅಧ್ಯಕ್ಷ ವಿಜಯರಾಘವ ರೆಡ್ಡಿ, ಮುಖಂಡರು ಹಾಜರಿದ್ದರು.
ಸಮರ್ಪಕ ರಸ್ತೆಯಿಲ್ಲದೆ, ಶವ ಸಂಸ್ಕಾರ ದಿನಗಳಲ್ಲಿ ಠಾಣೆ ಮೆಟ್ಟಲು ಅತ್ತುವಂತ ಪರಿಸ್ಥಿತಿಯಲ್ಲಿದ್ದ ಸ್ಮಶಾನ ರಸ್ತೆಯ ಸಮಸ್ಯೆಯನ್ನು 20 ವರ್ಷಗಳ ಬಳಿಕ ಇತ್ಯರ್ಥ ಪಡಿಸಿದ್ದೇನೆ. ಸ್ಮಶಾನಕ್ಕೆ ವಿಶೇಷ ಅನುದಾನ ಬಿಡುಗಡೆಗೊಳಿಸಲಾಗುವುದು.
● ಎಂ.ರೂಪಕಲಾ, ಶಾಸಕಿ