ಮಸ್ಕಿ: ಮಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ದಿನ ಹತ್ತಿರವಾಗುತ್ತಿರುವಾದಂತೆಲ್ಲ ತರಹೇವಾರಿ ರಾಜಕೀಯ ಅಸ್ತ್ರಗಳು ಪ್ರಯೋಗವಾಗುತ್ತಿವೆ. ಪûಾಂತರ ಪರ್ವದ ಜತೆ ಈಗ ಟೂರ್ನಾಮೆಂಟ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದ್ದು, ಈ ಮೂಲಕ ಯುವಕರನ್ನು ಸೆಳೆಯುವ ಕಸರತ್ತು ರಾಜಕೀಯ ಪಕ್ಷಗಳಿಂದ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಇಂತಹ ಹೊಸ ಗಿಮಿಕ್‌ನ್ನು ಕ್ಷೇತ್ರಾದ್ಯಂತ ಕಳೆದೊಂದು ತಿಂಗಳಿಂದ ನಡೆಸಿವೆ. ಕ್ರೀಡಾಕೂಟಗಳ ಆಯೋಜನೆಗೆ ಧನಸಹಾಯ, ಪ್ರಶಸ್ತಿ ಪ್ರಾಯೋಜಕತ್ವ ಸೇರಿ ಕೆಲವು ಕಡೆ ತಾವೇ ನೇರವಾಗಿ ಕ್ರೀಡೆ ಆಯೋಜಿಸುವ ಮೂಲಕ ಯುವ ಮತದಾರರನ್ನು ಸೆಳೆಯುವ ಪ್ರಯತ್ನ ನಡೆದಿದೆ.
ಇಂತಹ ಚಟುವಟಿಕೆ ಮೂಲಕ ರಾಜಕೀಯ ಪಕ್ಷಗಳಿಗೆ ಎಷ್ಟು ಅನುಕೂಲವಾಗಲಿದೆಯೋ? ಗೊತ್ತಿಲ್ಲ. ಆದರೆ ಇಂತಹ ಅಸ್ತ್ರಗಳ ಮೂಲಕ ಬಿಜೆಪಿ-ಕಾಂಗ್ರೆಸ್ ಮುಖಂಡರಿಂದ ಲಕ್ಷಾಂತರ ರೂ. ಹಣ ಹರಿಯುತ್ತಿದೆ. ಕ್ಷೇತ್ರಾದ್ಯಂತ ಇದೇ ಹವಾ: ಹೆಚ್ಚು ಕಡಿಮೆ ಕಳೆದೆರಡು ತಿಂಗಳಿಂದ ಈ ಕ್ರೀಡಾ ಜ್ವರ ಕ್ಷೇತ್ರಾದ್ಯಂತ ಹರಡಿದೆ. ಚುನಾವಣೆ ಘೋಷಣೆಗೆ ದಿನಗಣನೆ ಶುರುವಾದ ಈ 15 ದಿನಗಳಿಂದಂತೂ ಟೂರ್ನಾಮೆಂಟ್ ಹವಾ ಜೋರಾಗಿ ನಡೆದಿದೆ.
ಕ್ರಿಕೆಟ್ ಪಂದ್ಯಾವಳಿಗಳು ಅತಿ ಹೆಚ್ಚು ಪ್ರಮಾಣದಲ್ಲಿ ನಡೆದಿದ್ದರೆ, ಕಬಡ್ಡಿ-ವಾಲಿಬಾಲ್ ಪಂದ್ಯಾವಳಿಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಈ ಕ್ರೀಡೆಗಳ ಆಯೋಜಕರು ಜಾಣ್ಮೆ ನಡೆ ತುಳಿಯುತ್ತಿದ್ದಾರೆ. ಕೇವಲ ಒಂದೇ ಪಕ್ಷದ ಮುಖಂಡರನ್ನು ಸಂಪರ್ಕಿಸದೆ ಎರಡು ಪಕ್ಷದಿಂದಲೂ ಬಂದಷ್ಟು ನೆರವು ಪಡೆದು ಕ್ರೀಡೆ ಆಯೋಜಿಸಿದ್ದಾರೆ. ಕಳೆದೊಂದು ತಿಂಗಳಲ್ಲಿ ಬರೋಬ್ಬರಿ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಟೂರ್ನಾಮೆಂಟ್‌ಗಳು ನಡೆದಿವೆ ಎನ್ನುತ್ತಾರೆ ಕ್ರೀಡಾಪಟುಗಳು.
ಎಲ್ಲೆಲ್ಲಿ ಆಯೋಜನೆ ?: ಮಸ್ಕಿ ಪಟ್ಟಣ ಕೇಂದ್ರದಲ್ಲಿ ಕಳೆದ ಮೂರು ತಿಂಗಳಿಂದಲೂ ಈ ಕ್ರೀಡಾ ಜ್ವರ ಆವರಿಸಿದೆ. ಟೂರ್ನಾಮೆಂಟ್ ಮಾತ್ರವಲ್ಲದೇ ಐಪಿಎಲ್ ಮಾದರಿಯಲ್ಲಿ ಎಂಪಿಎಲ್ (ಮಸ್ಕಿ ಪ್ರೀಮಿಯರ್ ಲೀಗ್) ಹೆಸರಿನಲ್ಲೂ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ಇಲ್ಲಿ ಕೇವಲ ಬಹುಮಾನದ ಪ್ರಾಯೋಜಕತ್ವ ಮಾತ್ರವಲ್ಲ ಕ್ರಿಕೆಟ್ ತಂಡಗಳ ಖರೀದಿ (ಪ್ರಾಂಚೈಸಿ ಓನರ್), ಖರೀದಿ ಮಾಡಿದ ತಂಡಕ್ಕೆಲ್ಲ ಪ್ರತ್ಯೇಕ ಉಡುಪು, ಕ್ರೀಡಾ ಸಾಮಗ್ರಿ ಸೇರಿ ಎಲ್ಲವನ್ನೂ ರಾಜಕೀಯ ಪಕ್ಷದ ಮುಖಂಡರೇ ಸ್ಪಾನ್ಸರ್ ಹೊತ್ತಿದ್ದರು.
ಇದಲ್ಲದೇ ತಾಲೂಕಿನ ಬಸ್ಸಾಪುರ, ಹಂಚಿನಾಳ, ಬೆಳ್ಳಿಗನೂರು, ಮಾರಲದಿನ್ನಿ, ಮೆದಕಿನಾಳ, ತಲೆಖಾನ್ ಸೇರಿ ಹಲವು ಕಡೆಗಳಲ್ಲೂ ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಲಾಗಿದೆ. ಬಳಗಾನೂರು, ತುರುವಿಹಾಳ ಹೋಬಳಿ ಕೇಂದ್ರಗಳಲ್ಲೂ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಇಲ್ಲಿ ಪ್ರತ್ಯೇಕ ಪ್ರಾಯೋಜಕತ್ವ ಹೊಂದಿದ್ದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಬಸನಗೌಡ ತುರುವಿಹಾಳ ತಾವೇ ಕಬಡ್ಡಿ ಆಡುವ ಮೂಲಕ ಗಮನ ಸೆಳೆದಿದ್ದರು.
ಎಲ್ಲೆಡೆ ಕ್ರಿಕೆಟ್: ಕಬಡ್ಡಿ ಬೆನ್ನಲ್ಲೇ ಈಗ ಕ್ರಿಕೆಟ್ ಜ್ವರ ಹೆಚ್ಚಾಗಿದೆ. ಮೊದಲ ಮತ್ತು ದ್ವಿತೀಯ ಬಹುಮಾನ ಪ್ರಾಯೋಜಕರನ್ನಾಗಿ ಕಾಂಗ್ರೆಸ್, ಬಿಜೆಪಿಯ ಮುಂಚೂಣಿ ನಾಯಕರನ್ನೇ ಇಲ್ಲಿ ಸೆಲೆಕ್ಟ್ ಮಾಡಲಾಗುತ್ತಿದೆ. 25-30 ಸಾವಿರ ರೂ.ವರೆಗೂ ಬಹುಮಾನ ಕೊಡಿಸಲಾಗುತ್ತಿದೆ. ಜತೆಗೆ ತೃತೀಯ ಬಹುಮಾನ, ಪಂದ್ಯ ಪುರುಷೋತ್ತಮ, ಉತ್ತಮ ಬಾಲರ್, ಬ್ಯಾಟಿಂಗ್ ಸೇರಿ ಇತರೆ ವರ್ಗದಲ್ಲೂ ಸ್ಥಳೀಯ ರಾಜಕೀಯ ನಾಯಕರನ್ನು ಆಯ್ಕೆ ಮಾಡಿಕೊಂಡು ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಇನ್ನು ಕೆಲವೆಡೆ ಒಂದು ಹೆಜ್ಜೆ ಮುಂದೆ ಹೋಗಿರುವ ರಾಜಕೀಯ ಪಕ್ಷಗಳು ತಾವೇ ಮುಂದೆ ನಿಂತು ಕ್ರೀಡೆಯ ಎಲ್ಲ ಖರ್ಚು-ವೆಚ್ಚ ಹೊತ್ತು ಟೂರ್ನಾಮೆಂಟ್ ಆಯೋಜಿಸಲಾಗಿರುವುದು ಕಂಡು ಬರುತ್ತಿವೆ. ಒಟ್ಟಿನಲ್ಲಿ ಮಸ್ಕಿ ಉಪ ಚುನಾವಣೆ ಘೋಷಣೆ ಕಾರಣಕ್ಕಾಗಿ ಎಲ್ಲ ತರಹದ ರಾಜಕೀಯ ಅಸ್ತ್ರಗಳು ಇಲ್ಲಿ ಪ್ರಯೋಗವಾಗುತ್ತಿವೆ.
ಮಲ್ಲಿಕಾರ್ಜುನ ಚಿಲ್ಕರಾಗಿ