Advertisement

ದಸರಾ ನೋಡಬರುವ ಪ್ರವಾಸಿಗರಿಗೆ ಹಳ್ಳಿತಿಂಡಿ ರುಚಿ

12:40 AM Sep 24, 2019 | Lakshmi GovindaRaju |

ಬೆಂಗಳೂರು: ವಿವಿಧ ಭಾಗಗಳಿಂದ ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹಳ್ಳಿ ತಿಂಡಿ ರುಚಿ ತೋರಿಸಲು ಹಾಗೂ ಗ್ರಾಮೀಣ ಸಂಸ್ಕೃತಿ ಪರಿಚಯಿಸಲು ರಾಮನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ವೇಳೆ ರಾಮನಗರದಲ್ಲಿ ಹೆದ್ದಾರಿಯ ಎರಡೂ ಕಡೆ ಹಳ್ಳಿ ತಿಂಡಿ ಸವಿಯುವ ವ್ಯವಸ್ಥೆ ಇರಲಿದೆ. ತಟ್ಟೆ ಇಡ್ಲಿ ಸಹಿತ ಬಹು ಬಗೆಯ ತಿನಿಸುಗಳು ಮಳಿಗೆಗಳಲ್ಲಿ ಸಿಗಲಿವೆ. ಮಾಂಸಾಹಾರ ತಿಂಡಿಗಳೂ ಇರುತ್ತವೆ ಎಂದು ಹೇಳಿದರು.

ಮಂಡ್ಯದ ಗ್ರಾಮವೊಂದನ್ನು ಆಯ್ಕೆ ಮಾಡಿ ಅಲ್ಲಿ ಪ್ರವಾಸಿಗರು ಗ್ರಾಮೀಣ ಸಂಸ್ಕೃತಿಯ ಅನುಭವ ಪಡೆದುಕೊಳ್ಳಬಹುದು. ಎತ್ತಿನ ಗಾಡಿಯಲ್ಲಿ ಸವಾರಿ, ಕಬ್ಬು ತಿನ್ನುವುದು, ಕೆಸರು ಗದ್ದೆಯಲ್ಲಿ ನಡೆಯುವ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಭಾಗಿಯಾಗಬಹುದು, ನೇಗಿಲು ಹಿಡಿದು ಬೇಸಾಯವನ್ನೂ ಮಾಡಬಹುದು ಎಂದು ತಿಳಿಸಿದರು.

ಈ ಉದ್ದೇಶಕ್ಕೆ ಸ್ಥಳೀಯರ ನೆರವು ಪಡೆಯಲಾಗುವುದು. ಎರಡೂ ಜಿಲ್ಲೆಗಳಿಗೆ ಇದಕ್ಕಾಗಿಯೇ ತಲಾ 15 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಮೈಸೂರು ದಸರಾ ಪ್ರಯುಕ್ತ ನಮ್ಮ ಇಲಾಖೆಯಿಂದ 5.90 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು ಕ್ವಿಜ್‌, ಗಾಳಿಪಟ ಉತ್ಸವ, ಪಾರಂಪರಿಕ ಕ್ರೀಡೆ, ಮತ್ಸ್ಯ ಮೇಳ ಸೇರಿದಂತೆ ಹಲವು ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಕುಂಭ ಮೇಳದ ಮಾದರಿಯಲ್ಲಿ ನನ್ನ ನಗರ-ನನ್ನ ಕಲ್ಪನೆ ಎಂಬ ಚಿತ್ರಕಲೆ ಬಿಡಿಸುವ ಸ್ಪರ್ಧೆಯೂ ಆಯೋಜಿಸಲಾಗುವುದು. ರಾಜ್ಯದ ಪ್ರವಾಸೋದ್ಯಮದ ಜತೆಗೆ ಭಾರತೀಯ ಪ್ರವಾಸೋದ್ಯಮಕ್ಕೂ ಉತ್ತೇಜನ ಕೊಡಲಾಗುವುದು ಎಂದು ಮಾಹಿತಿ ನೀಡಿದರು. ಹಾಲಿ ಪ್ರವಾಸೋದ್ಯಮ ನೀತಿ 2020ಕ್ಕೆ ಅಂತ್ಯಗೊಳ್ಳಲಿದ್ದು ನಂತರ ಹೊಸ ನೀತಿ ಬರಲಿದ್ದು ಈಗಾಗಲೇ ಇನ್ಫೋಸಿಸ್‌ನ ಸುಧಾಮೂರ್ತಿ ನೇತೃತ್ವದ ಕಾರ್ಯಪಡೆ ಹಲವು ಸಲಹೆ ಸೂಚನೆ ನೀಡಿದೆ ಎಂದು ಹೇಳಿದರು.

Advertisement

ಕಾಶ್ಮೀರದಲ್ಲಿ ಸಾಂಸ್ಕೃತಿಕ ಕೇಂದ್ರ: ಜಮ್ಮು-ಕಾಶ್ಮೀರದಲ್ಲಿ ಕರ್ನಾಟಕದ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಅಲ್ಲಿ ಕೆಎಸ್‌ಟಿಡಿಸಿ ಹೋಟೆಲ್‌ ಪ್ರಾರಂಭಿಸುವ ಉದ್ದೇಶವೂ ಇದೆ. ಈ ಸಂಬಂಧ ಅಲ್ಲಿನ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಅವರ ಉತ್ತರ ಬಂದ ಬಳಿಕ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವ ಸಿ.ಟಿ.ರವಿ ಅವರನ್ನು ಭೇಟಿಯಾದ ಒಡಿಶಾ ಪ್ರವಾಸೋದ್ಯಮ ಸಚಿವ ಜ್ಯೋತಿಪ್ರಕಾಶ್‌ ಪಾಣಿಗ್ರಾಹಿ, ಕೋನಾರ್ಕ್‌ ಉತ್ಸವಕ್ಕೆ ಆಹ್ವಾನಿಸಿದರು. ಒಡಿಶಾ ಪ್ರವಾಸೋದ್ಯಮ ಸಂಬಂಧ ಆಯೋಜಿಸಿದ್ದ ರೋಡ್‌ ಶೋದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬಂದಿದ್ದ ಅವರು, ಸಚಿವ ರವಿ ಅವರೊಂದಿಗೆ ಕೆಲ ಕಾಲ ಸಮಾಲೋಚನೆ ನಡೆಸಿದರು.

ಪ್ರವಾಸೋದ್ಯಮ ವಿಚಾರದಲ್ಲಿ ಪರಸ್ಪರ ಸಹಕಾರಕ್ಕೆ ಮಾತುಕತೆ ನಡೆಸಲಾಯಿತು. ಮೈಸೂರು ದಸರಾಕ್ಕೆ ಆಗಮಿಸುವಂತೆ ಒಡಿಶಾ ಸಚಿವರಿಗೂ ಸಿ.ಟಿ.ರವಿ ಅವರು ಆಹ್ವಾನ ನೀಡಿದರು. ಮೂಲತಃ ಐಟಿ ಎಂಜಿನಿಯರ್‌ ಆಗಿರುವ ಜ್ಯೋತಿಪ್ರಕಾಶ್‌ ಪಾಣಿಗ್ರಾಹಿ, ಬೆಂಗಳೂರಿನಲ್ಲಿ ತಾವು ಈ ಹಿಂದೆ ನೌಕರಿ ಮಾಡಿದ್ದನ್ನು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next