ಸಾಗರ: ಕೋವಿಡ್ 19 ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ರವಿವಾರ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದರು.
ರವಿವಾರ ಜಲಪಾತ ವೀಕ್ಷಣೆಗೆ ಪ್ರಕೃತಿಯೂ ಸಾಥ್ ನೀಡಿದ್ದು, ಇಡೀ ದಿನ ಬಿಸಿಲಿನ ವಾತಾವರಣವಿತ್ತು. ಹೀಗಾಗಿ ಪ್ರವಾಸಿಗರಿಗೆ ಜಲಪಾತದ ಭವ್ಯ ದರ್ಶನವಾಯಿತು.
ಸಂಜೆ 6.30ರ ವೇಳೆಗೆ ಜೋಗ ಅಭಿವೃದ್ಧಿ ಪ್ರಾಧಿಕಾರದ ಪ್ರವೇಶ ಶುಲ್ಕ ಸಂಗ್ರಹ 1.95 ಲಕ್ಷ ರೂ. ದಾಟಿತ್ತು.
ಕೋವಿಡ್ 19 ಲಾಕ್ ಡೌನ್ ಕಾರಣದಿಂದ ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಅಂತರ್ ಜಿಲ್ಲಾ ಸಂಚಾರಕ್ಕೆ ನಿರ್ಬಂಧವಿದ್ದ ಕಾರಣ ರಾಜ್ಯದ ಪ್ರವಾಸಿ ಸ್ಥಳಗಳೆಲ್ಲಾ ಬಿಕೋ ಎನ್ನುತ್ತಿದ್ದವು.
ಇದೀಗ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಬಹುತೇಕ ಪ್ರವಾಸಿ ತಾಣಗಳನ್ನು ಪ್ರವಾಸಿಗರ ಭೇಟಿಗೆ ಮುಕ್ತಗೊಳಿಸಲಾಗಿದೆ.
ಈ ನಡುವೆ ಶನಿವಾರ ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಮತ್ತು ರವಿವಾರ ರಜಾದಿನವಾಗಿದ್ದರಿಂದ ಪ್ರವಾಸಿ ತಾಣಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು.