ಕುಂದಾಪುರ: ಕೋಡಿ ಸಮುದ್ರ ತೀರದಲ್ಲಿ ಪುರಸಭೆ ವತಿಯಿಂದ ಶೌಚಾಲಯ ನಿರ್ಮಾಣಗೊಂಡು ತಿಂಗಳು ಗಳೇ ಕಳೆದರೂ ಇನ್ನೂ ಸಾರ್ವಜನಿಕರ, ಪ್ರವಾಸಗಿರ ಬಳಕೆಗೆ ಬಿಟ್ಟುಕೊಟ್ಟಿಲ್ಲ.
ರಾಜ್ಯದ ಅತಿ ಉದ್ದದ ಸಮುದ್ರ ತೀರವಾದ ಕೋಡಿ ಈಚಿನ ದಿನಗಳಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಸೀವಾಕ್ ನಿರ್ಮಾಣವಾದ ಬಳಿಕ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಇಲ್ಲಿ ಮೂಲ ಸೌಕರ್ಯದ ಕೊರತೆಯಿದೆ. ಪ್ರವಾಸೋದ್ಯಮ ಇಲಾಖೆ ಇಲ್ಲಿ ಅಭಿವೃದ್ಧಿ ಮಾಡಲು ಅನುದಾನದ ಕೊರತೆಯ ನೆಪ ಒಡ್ಡುತ್ತಿದೆ. ಅಭಿವೃದ್ಧಿಗೆ ನೀಲನಕಾಶೆ ಮಾಡಲಾಗಿದ್ದರೂ ಸರಕಾರ ಅದನ್ನು ಮಾನ್ಯ ಮಾಡಲೇ ಇಲ್ಲ.
ಇಲ್ಲಿಗೆ ಸಾವಿರಾರು ಪ್ರವಾಸಿಗರು ಬರುವಾಗ ಅಗತ್ಯವಾಗಿ ಶೌಚಾಲಯ ಬೇಕಿತ್ತು. ಸಾರ್ವಜನಿಕರ ಸ್ಥಳೀಯ ಪುರಸಭೆ ಸದಸ್ಯರ ಮನವಿ, ಬೇಡಿಕೆಗೆ ಸ್ಪಂದಿಸಿದ ಪುರಸಭೆ ಕೊನೆಗೂ ಸುಸಜ್ಜಿತ ಶೌಚಾಲಯ ನಿರ್ಮಿಸಿ ಕೊಟ್ಟಿದೆ. ಆದರೆ, ಕಾಮಗಾರಿ ಮುಗಿದು ತಿಂಗಳುಗಟ್ಟಲೆ ಕಳೆದರೂ ಇನ್ನೂ ಪ್ರವಾಸಿಗರಿಗೆ ಬಳಕೆಗೆ ನೀಡಲಾಗಿಲ್ಲ. ಹೀಗಾಗಿ ಪ್ರವಾಸಿಗರು ಈಗಲೂ ಪರದಾಡುವ ಪರಿಸ್ಥಿತಿ ಇದೆ.
ಪುರಸಭೆ ಇದರ ಬಗ್ಗೆ ಗಮನ ಹರಿಸಿ ಆದಷ್ಟು ಶೀಘ್ರ ಪ್ರವಾಸಿಗರಿಗೆ ಅನುಕೂಲವಾಗುವಂತೆ ಶೌಚಾಲಯವನ್ನು ಬಿಟ್ಟುಕೊಡಬೇಕು ಎಂದು ಅಶೋಕ್ ಪೂಜಾರಿ ಕೋಡಿ ಆಗ್ರಹಿಸಿದ್ದಾರೆ.
ನಿರ್ಮಾಣವಾದ ಶೌಚಾಲಯ ಸಾರ್ವಜನಿಕ ಬಳಕೆಗೆ ಬಿಟ್ಟುಕೊಡಲು ವಿಳಂಬ ಮಾಡುವುದು ಸರಿಯಲ್ಲ ಎನ್ನುವುದು ಪುರಸಭೆ ಮಾಜಿ ಸದಸ್ಯ ನಾಗರಾಜ ಕಾಂಚನ್ ಅಭಿಪ್ರಾಯ.