ಯಳಂದೂರು: ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಕೆ.ಗುಡಿ ವಲಯನ ಶಿಬಿರದಲ್ಲಿನ ಆನೆಗೆ ಪ್ರವಾಸಿಗರು ಆಹಾರ ನೀಡಿ, ಫೋಟೋ ಕ್ಲಿಕ್ಕಿಸಿಕೊಳ್ಳುವುದರಿಂದ ಪ್ರಾಣಿಗೆ ಕಿರಿಕಿರಿ ಆಗುವ ಜೊತೆಗೆ ರೊಚ್ಚಿಗೇಳುವ ಸಾಧ್ಯತೆ ಇದೆ. ಶಿಬಿರದಲ್ಲಿ ಗಜೇಂದ್ರ ಎಂಬ 67 ಪ್ರಾಯದ ಗಂಡಾನೆ ಇದ್ದು, ಹಲವು ವರ್ಷಗಳಿಂದ ಸಾಕಲಾಗುತ್ತಿದೆ. ದಸರಾದಲ್ಲೂ ಭಾಗವಹಿಸಿದೆ.
ಇದನ್ನು ನೋಡಿಕೊಳ್ಳುವ ಮಾವುತರು ಇದಕ್ಕೆ ನಿತ್ಯ ಆಹಾರ ನೀಡುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರ ಕೈಯಲ್ಲಿ ಆಹಾರ ನೀಡಿ ಆನೆಗೆ ತಿನ್ನಿಸಲು ಅವಕಾಶ ನೀಡುತ್ತಾರೆ. ಆದರೆ, ಇದು ಮಾವುತರಿಗೆ ಮಾತ್ರ ಒಗ್ಗಿದ್ದು, ಬೇರೆಯವರು ಇದಕ್ಕೆ ಆಹಾರ ನೀಡಿದರೆ ಆಕ್ರೋಶಗೊಳ್ಳುವ ಸಾಧ್ಯತೆ ಇರುತ್ತದೆ. ಇದು ಮುಂದೆ ದೊಡ್ಡ ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ.
ಹಿಂದೆಯೇ ನಡೆದಿದ್ದ ಅವಘಡಗಳು: 2015ರಲ್ಲಿ ಇದೇ ಗಜೇಂದ್ರ ಆನೆ ಮದವೇರಿ ಇಲ್ಲಿ ದಾಂಧಲೆ ನಡೆಸಿದ್ದಲ್ಲದೆ, ಮತ್ತೂಂದು ಆನೆ ಕೊಂದು ಹಾಕಿತ್ತು. ಅಲ್ಲದೆ, 2017 ರಲ್ಲೂ ಇದು ತನ್ನ ಕಾಲಿಗೆ ಹಾಕಿದ್ದ ಸರಪಳಿ ಕಿತ್ತೂಗೆಯಲು ಹೋಗಿ ಗಾಯ ಮಾಡಿಕೊಂಡಿದ್ದ ಕೋಪಿಷ್ಠ ಸ್ವಭಾವದ್ದಾಗಿದೆ. ಈ ಹಿಂದೆ ಇದೇ ಶಿಬಿರದಲ್ಲಿ ದುರ್ಗಾ ಪರಮೇಶ್ವರಿ ಎಂಬ ಹೆಣ್ಣಾನೆಯೂ ಇತ್ತು. ಇದನ್ನು ಎಚ್. ಡಿ ಕೋಟೆ ತಾಲೂಕಿನಲ್ಲಿರುವ ಸಾಕಾನೆ ಶಿಬಿರಕ್ಕೆ ಸಾಗಿಸಲಾಗಿದೆ. ಇದೊಂದು ಆನೆ ಮಾತ್ರ ಇಲ್ಲಿದೆ.
ಯಾವ ಸಂದರ್ಭದಲ್ಲಾದರೂ ಇದು ಮದವೇರಿ ಕೆರಳುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಸಿಬ್ಬಂದಿ ಆನೆಗೆ ನೀಡುವ ಆಹಾರದ ಉಂಡೆಗಳನ್ನು ಪ್ರವಾಸಿಗರ ಕೈಗೆ ನೀಡಿ ತಿನ್ನಿಸಲು ಹೇಳುತ್ತಾರೆ. ಈ ವೇಳೆ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂಬುದು ರಘು ಸೇರಿ ಅನೇಕ ಪ್ರವಾಸಿಗರು, ಪ್ರಾಣಿಪ್ರಿಯರ ಆಗ್ರಹವಾಗಿದೆ. ಕೆ.ಗುಡಿ ವಲಯ ಆರ್‌ಎಫ್ಒ ವಿನೋದ್‌ಗೌಡ ಮಾತನಾಡಿ, ಇಲ್ಲಿನ ಸಾಕಾನೆ ಗಜೇಂದ್ರನಿಗೆ ಪ್ರವಾಸಿಗರು ಆಹಾರ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಈ ಬಗ್ಗೆ ವಿಚಾರಿಸಿ, ಕ್ರಮ ವಹಿಸ ಲಾಗುವುದು ಎಂದು ವಿವರಿಸಿದರು.
● ಫೈರೋಜ್ ಖಾನ್