Advertisement

ಪ್ರವಾಸಿ ನೆಲೆಯಾಗಲೇ ಇಲ್ಲ “ಕುದ್ರು’ಗಳು!

04:07 PM Jun 28, 2023 | Team Udayavani |

ಮಹಾನಗರ: ನೇತ್ರಾವತಿ ನದಿ ಹರಿ ಯುತ್ತಿರುವ ಅಡ್ಯಾರ್‌ನಿಂದ ಅಳಿವೆ ಬಾಗಿಲು ವರೆಗಿನ ಹಾಗೂ ಫಲ್ಗುಣಿ ನದಿ ಹರಿಯುತ್ತಿರುವ ಗುರುಪುರದಿಂದ ತಣ್ಣೀರು ಬಾವಿಯವರೆಗಿನ ಪ್ರದೇಶದಲ್ಲಿ ಹಲವಾರು ಕಡೆಗಳಲ್ಲಿ ನದಿ ಇಕ್ಕೆಲಗಳಲ್ಲಿ ಹಿನ್ನೀರಿನಲ್ಲಿ ಸುಂದರ ಪ್ರಕೃತಿ ತಾಣಗಳಿವೆ. ಆದರೆ ಯಾವುದೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿ ನೆಲೆಯಲ್ಲಿ ಬದಲಾಗಿಲ್ಲ!

Advertisement

ಪ್ರವಾಸೋದ್ಯಮಕ್ಕೆ ಪೂರಕವಾಗಿ ವಿವಿಧ ಯೋಜನೆ-ಯೋಚನೆಗಳ ಬಗ್ಗೆ ಜನಪ್ರತಿನಿಧಿಗಳು ತಿಳಿಸುತ್ತಾರೆ. ಆದರೆ ಅವು ವಿವಿಧ ತಾಂತ್ರಿಕ ನೆಪದಿಂದಾಗಿ ಕಾರ್ಯಯೋಜನೆಗೆ ಬರಲು ಕೆಲವು ವರ್ಷಗಳೇ ಬೇಕಾಗುತ್ತವೆ. ಜತೆಗೆ ಪರಿಸರ ವಿಷಯ ಇದರಲ್ಲಿ ಅಡಕವಾಗಿರುವುದರಿಂದ ಪರಿಸರ ಪೂರಕವಾಗಿ ಪ್ರವಾಸೋದ್ಯಮ ಬೆಸೆಯುವ ಪ್ರಯತ್ನ ಪೂರ್ಣಮಟ್ಟದಲ್ಲಿ ಮಂಗಳೂರು ವ್ಯಾಪ್ತಿ ಯಲ್ಲಿ ಅನುಷ್ಠಾನಕ್ಕೆ ಬಂದಿಲ್ಲ.

ನದಿಗಳ ಮಧ್ಯೆ ಇರುವ ಕುದ್ರುಗಳು (ಕಿರು ದ್ವೀಪಗಳು) ಹಿನ್ನೀರು ಪ್ರವಾಸೋದ್ಯಮಕ್ಕೆ ಪೂರಕ ವಾಗಿದೆ. ಮಂಗಳೂರು ನಗರದ ಇಕ್ಕೆಲಗಳಲ್ಲಿ ಹರಿಯುತ್ತಿರುವ ನೇತ್ರಾವತಿ ಮತ್ತು ಫಲ್ಗುಣಿ ನದಿಗಳ ಮಧ್ಯೆ ಸುಂದರ ಕುದ್ರುಗಳಿದ್ದು ಇಲ್ಲಿ ಪ್ರವಾಸೋ ದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶಗಳನ್ನು ಬಹಳಷ್ಟು ವರ್ಷಗಳ ಹಿಂದೆಯೇ ಗುರುತಿಸಲಾಗಿತ್ತು. ಜಪ್ಪಿನಮೊಗರು ಕಡೆಕಾರು ಬಳಿ ನೇತ್ರಾವತಿ ನದಿಯ ಮಧ್ಯದಲ್ಲಿ, ಹಳೆ ಬಂದರು ಬಳಿಯ ಫಲ್ಗುಣಿ ನದಿ ಮಧ್ಯದಲ್ಲಿ, ತಣ್ಣೀರು ಬೀಚ್‌ ಬಳಿ ಕುಡ್ಲ ಕುದ್ರು ಸಹಿತ ಮಂಗಳೂರು ಸುತ್ತಮುತ್ತದ ಆರು ಕುದ್ರುಗಳಿವೆ. ಇದರಲ್ಲಿ ಕೆಲವು ಖಾಸಗಿ ನೆಲೆಯಲ್ಲಿ ಅಭಿವೃದ್ಧಿಯಾಗಿದ್ದು ಬಿಟ್ಟರೆ ಪೂರ್ಣಮಟ್ಟದಲ್ಲಿ ಸರಕಾರಿ ನೆಲೆಯಿಂದ ಅಭಿವೃದ್ಧಿ ಸಾಧ್ಯವಾಗಿಲ್ಲ.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೆಲವು ಕುದ್ರು, ನದಿ ತೀರವನ್ನು ಅಭಿವೃದ್ಧಿಪಡಿಸುವ ವಾಟರ್‌ ಡೆವೆಲಪ್‌ಮೆಂಟ್‌ ಯೋಜನೆ ಸದ್ಯ ಜಾರಿಗೆ ಬರುವ ನಿರೀಕ್ಷೆಯಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದು ಕೆಲವೇ ವರ್ಷದಲ್ಲಿ ಅನುಷ್ಠಾನವಾಗಬಹುದು. ಅದಕ್ಕೂ ಬೇರೆ ಬೇರೆ ಅಡೆ-ತಡೆ ಎದುರಾದರೆ ಯೋಜನೆ ಮತ್ತಷ್ಟು ವರ್ಷ ದೂರ ಹೋಗುವ ಸಾಧ್ಯತೆಯೇ ಅಧಿಕ!

ಕಡೆಕಾರು ಕುದ್ರು;
ಪರಿಶೀಲನೆಯಲ್ಲಿ ಬಾಕಿ!
ಜಪ್ಪಿನಮೊಗರು ಕಡೆಕಾರಿನ ಬಳಿ ನೇತ್ರಾವತಿ ನದಿ ಮಧ್ಯದಲ್ಲಿರುವ ಸುಂದರ ಕುದ್ರು ಗಮನ ಸೆಳೆಯುತ್ತಿವೆ. ಇದನ್ನು ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ 2011ರಲ್ಲಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸಿ ಪರಿಶೀಲನೆ ಕೂಡ ಆಗಿದ್ದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಸಿದ್ಧತೆಗಳಾಗಿತ್ತು. ದ್ವೀಪಕ್ಕೆ ಬೋಟು ಸೌಲಭ್ಯಕ್ಕೂ ಚಾಲನೆ ನೀಡಲಾಗಿತ್ತು. ಆದರೆ ಮುಂದಕ್ಕೆ ಯಾವುದೇ ಪ್ರಗತಿಯಾಗಲಿಲ್ಲ.

Advertisement

ಕೇರಳ ಮಾದರಿ ಸಾಧ್ಯತೆ
ಸಿಆರ್‌ಝಡ್‌ ನಿಯಮಗಳನ್ನೇ ಪೂರಕವಾಗಿ ಬಳಸಿಕೊಂಡು ಕೇರಳವು ಸಾಗರ ಹಾಗೂ ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಅಲ್ಲಿ 8 ಸಣ್ಣ ದ್ವೀಪಗಳು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಿ ಪ್ರವಾಸಿ ತಾಣಗಳಾಗಿವೆ. ಇದೇ ಸ್ವರೂಪದಲ್ಲಿ ಮಂಗಳೂರಿನಲ್ಲಿರುವ ಕುದ್ರುಗಳನ್ನು ಕೇರಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದರೆ ಪ್ರವಾಸಿ ತಾಣಗಳಾಗಿ ಗಮನ ಸೆಳೆಯುವಂತೆ ಮಾಡಲು ಸಾಕಷ್ಟು ಅವಕಾಶಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next