Advertisement

ಉಡುಪಿ ಜಿಲ್ಲೆಯ ಪ್ರವಾಸಿ ಕ್ಷೇತ್ರಗಳಿಗೆ ಜೀವಕಳೆ

12:41 PM Apr 21, 2022 | Team Udayavani |

ಉಡುಪಿ: ಕೊರೊನಾ ಅನಂತರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಪ್ರವಾಸಿ ತಾಣಗಳಿಗೆ ಜೀವ ಕಳೆ ಬಂದಿದೆ.

Advertisement

ಕಳೆದ ಎರಡು ವರ್ಷದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಸಂಪೂರ್ಣ ಕುಸಿದಿತ್ತು. ಕೊರೊನಾ ನಿಯಮದಿಂದ ಜಿಲ್ಲೆಯ ಮಲ್ಪೆ, ಮರವಂತೆ, ಕಾಪು, ಪಡುಬಿದ್ರಿ, ಸೋಮೇಶ್ವರ ಬೀಚ್‌ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ತೀರ ಕಡಿಮೆಯಾಗಿತ್ತು. ಈಗ ಕೊರೊನಾ ಸಂಬಂಧಿಸಿದ ಬಹುತೇಕ ಎಲ್ಲ ನಿಯಮ ತೆರವುಗೊಳಿಸಿರುವುದರಿಂದ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಉಡುಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಕಳೆದ ಒಂದು ವಾರದಲ್ಲಿ ಲಕ್ಷಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ನಾಲ್ಕು ದಿನ ಸರಣಿ ರಜೆ ಇದ್ದುದ್ದರಿಂದ ಬೇರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಬಂದಿದ್ದಾರೆ. ಪ್ರವಾಸಿ ಕೇಂದ್ರದಲ್ಲಿ ಸುರಕ್ಷತೆಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಜಿಲ್ಲೆಯ ಪ್ರಮುಖ ಬೀಚ್‌ಗಳ ಜತೆಗೆ ಶ್ರೀ ಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ, ಆನೆಗುಡ್ಡೆ ಸಿದ್ಧಿವಿನಾಯಕ ದೇವಸ್ಥಾನ, ಮಂದಾರ್ತಿ ದುರ್ಗಾಪರಮೇಶ್ವರೀ ದೇವಸ್ಥಾನ, ಮಾರನಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರ, ಅರ್ಬಿ ಫಾಲ್ಸ್‌, ಜೋಮ್ಲು ತೀರ್ಥ, ಆನೇಜರಿ, ಕೂಡ್ಲು ತೀರ್ಥ ಸಹಿತವಾಗಿ ಜಿಲ್ಲೆಯ ಪ್ರಮುಖ ಫಾಲ್ಸ್‌ಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸಕ್ಕೆ ಬರುವವರು ಮೊದಲು ದೇವಸ್ಥಾನ ಅನಂತರ ಫಾಲ್ಸ್‌ನ ಸೌಂದರ್ಯ ಸವಿದು, ಬೀಚ್‌ನಲ್ಲಿ ಸಮುದ್ರ ಸ್ಥಾನ ಮಾಡಿದ ಅನಂತರವೇ ವಾಪಾಸ್‌ ಆಗುತ್ತಿದ್ದಾರೆ. ಒಟ್ಟಾರೆಯಾಗಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು ವಾರಾಂತ್ಯದಲ್ಲಿ ಇನ್ನೂ ಹೆಚ್ಚಿರುತ್ತದೆ.

ಬೀಚ್‌ಗಳಲ್ಲಿ ಸುರಕ್ಷಾ ಕ್ರಮ ಅಗತ್ಯ

Advertisement

ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯ ನೀಡುವ ಜತೆಗೆ ಅಲ್ಲಿನ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಮಲ್ಪೆಯ ಸೈಂಟ್‌ ಮೇರೀಸ್‌ ಐಲ್ಯಾಂಡ್‌ ನಲ್ಲಿ ಇತ್ತೀಚೆಗೆ ಹಲವು ಆರು ಜೀವ ಹಾನಿಯಾಗಿದೆ. ಮುಂದೆ ಇಂತಹ ಘಟನೆ ನಡೆಯಂತೆ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಅಲ್ಲಿಗೆ ಅಗತ್ಯ ಸುರಕ್ಷತೆ, ಸೂಚನಾ ಫ‌ಲಕ, ಭದ್ರತಾ ಸಿಬಂದಿ ನಿಯೋಜಿಸುವ ಕಾರ್ಯ ಆಗಬೇಕು. ಇದು ಕೇವಲ ಸೈಂಟ್‌ ಮೇರಿಸ್‌ ಐಲ್ಯಾಂಡ್‌ಗೆ ಸೀಮಿತವಲ್ಲ. ಮಲ್ಪೆ, ಮರವಂತೆ, ಸೋಮೇಶ್ವರ, ಪಡುಬಿದ್ರಿ, ಕಾಪು ಸಹಿತವಾಗಿ ಜಿಲ್ಲೆಯ ಪ್ರಮುಖ ಬೀಚ್‌ಗಳಲ್ಲೂ ಪ್ರವಾಸಿಗರ ಸುರಕ್ಷತೆಗೆ ಕ್ರಮ ಆಗಬೇಕು. ಜತೆಗೆ ಜಿಲ್ಲೆಯಲ್ಲಿರುವ ಪ್ರಮುಖ ಜಲಪಾತಗಳಿಗೂ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿಯೂ ಸುರಕ್ಷತಾ ಕ್ರಮ ಆಗಬೇಕು.

ವ್ಯಾಪಾರದಲ್ಲೂ ಚೇತರಿಕೆ

ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವು ಕುಟುಂಬಗಳಿಗೆ ಉದ್ಯೋಗ ಸಿಗುತ್ತದೆ. ಪ್ರವಾಸಿತಾಣಗಳಲ್ಲಿ ವಿವಿಧ ಉತ್ಪನ್ನ, ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ವ್ಯಾಪಾರದಲ್ಲೂ ಚೇತರಿಕೆ ಕಾಣುತ್ತಿದೆ. ಹೊಟೇಲ್‌, ಲಾಡ್ಜ್, ಟೂರಿಸ್ಟ್‌ ವಾಹನ ಹೀಗೆ ಪ್ರವಾಸೋದ್ಯಮಕ್ಕೆ ಹೊಂದಿಕೊಂಡಿರುವ ಹಲವು ಉದ್ಯಮಗಳಿಗೂ ಸಹಕಾರಿ ಯಾಗುತ್ತಿದೆ. ಹಲವು ಯುವ ಜತೆಗೆ ಉದ್ಯೋಗವೂ ಸಿಗುತ್ತಿದೆ.

ಅಭಿವೃದ್ಧಿಗೆ ಆದ್ಯತೆ

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ಪ್ರವಾಸೋದ್ಯಮದ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದ್ದೇವೆ. ಬೀಚ್‌ ಹಾಗೂ ಧಾರ್ಮಿಕ ಪ್ರವಾಸೋದ್ಯಮದ ಜತೆಗೆ ಲಿಂಕ್‌ ಮಾಡುವ ವ್ಯವಸ್ಥೆಯೂ ನಡೆಯುತ್ತಿದೆ. ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಒಂದೆಡೆ ಸಿಗವಂತೆ ಮಾಡುತ್ತಿದ್ದೇವೆ. -ಕೂರ್ಮಾ ರಾವ್‌ ಎಂ., ಜಿಲ್ಲಾಧಿಕಾರಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next