Advertisement
ಹೇಗಿದೆ ರಸ್ತೆ?ಮಡಿಕೇರಿ ವೃತ್ತದಿಂದ ಮಾಂದಲಪಟ್ಟಿಗೆ ಈಗಿರುವ ಸಂಪರ್ಕಕ್ಕೆ ಮಡಿಕೇರಿ – ಅಬ್ಬಿಫಾಲ್ಸ್ – ದೇವಸ್ತೂರು- ಮಾಂದಲ ಪಟ್ಟಿ ಹಳೆ ರಸ್ತೆ ಸಾಧರಣ ಅನ್ನುವ ಸ್ಥಿತಿಯಲ್ಲಿದೆ. ಉಳಿದೆಲ್ಲ ಸಂಪರ್ಕ ರಸ್ತೆಗಳು ಕಡಿದು ಕೊಂಡಿವೆ. ಹಳೆ ರಸ್ತೆಯಲ್ಲಿ ಹಲವು ಕಡೆಗಳಲ್ಲಿ ಗುಡ್ಡ ಜರಿತ, ಬಿರುಕು ಉಂಟಾಗಿದೆ. ಈಗ ತಾತ್ಕಾಲಿಕ ದುರಸ್ತಿ ನಡೆಸಿ ಗ್ರಾಮದೊಳಗೆ ಜೀಪು, ಲಘು ವಾಹನ ಸಂಚರಿಸಲು ಅನುವು ಮಾಡಿಕೊಡಲಾಗಿದೆ.
ಮಾಂದಲಪಟ್ಟಿ ಸಂಪರ್ಕದ ಕಾಲೂರು- ಹಚ್ಚಿನಾಡು-ಮುಟ್ಲು ರಸ್ತೆ ಬಿರುಕು ಬಿಟ್ಟಿದೆ. ನಿಡುದಾಣೆ ಗ್ರಾಮದಿಂದ ಹೆಬ್ಬೆಟ್ಟಗೇರಿ- ದೇವಸ್ತೂರು ರಸ್ತೆಯ ಕಾಲೂರು- ಮಾಂದಲ ಪಟ್ಟಿ ನಡುವೆ 2.9 ಕಿ.ಮೀ.ಸಂಪೂರ್ಣ ಹಾನಿಯಾಗಿದೆ. ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ದೇವಸ್ತೂರು-ಕಾಳೂರು ರಸ್ತೆಯ 900 ಮೀ. ಕಂದಕ ಸೃಷ್ಟಿಯಾಗಿದೆ. ಹಚ್ಚಿನಾಡು, ಹಮ್ಮಿಯಾಲ, ಮುಟ್ಲೂರು ಭಾಗದ ರಸ್ತೆಯಲ್ಲಿಯು ಹಾನಿ ಇದೆ. ಗ್ರಾಮಸ್ಥರ ಓಡಾಟಕ್ಕೆ ದೇವತ್ತೂರು-ಚಂದಕನಾಡು-ಮಾಂದಲಪಟ್ಟಿಗೆ ಹಾಗೂ ಇನ್ನು ಕೆಲ ರಸ್ತೆ ದುರಸ್ತಿ ಮಾಡಲಾಗಿದೆ.
Related Articles
ಪ್ರತಿನಿತ್ಯ ನೂರು, ಸಾವಿರಕ್ಕಿಂತಲೂ ಹೆಚ್ಚು ಮಂದಿ ಇಲ್ಲಿಗೆ ಭೇಟಿ ನೀಡುವ ತಾಣ. ಚಾರಣಿಗರಿಗಂತೂ ಇದು ಸ್ವರ್ಗ ಸಮಾನ. ಪರ್ವತಶ್ರೇಣಿ, ಆಳವಾದ ಕಂದರ ಕೈ ಬೀಸಿ ಕರೆಯುತ್ತದೆ. ಗಾಳಿಪಟ ಸಿನಿಮಾದಲ್ಲಿ ಮುಗಿಲುಪೇಟೆ ಎಂದು ಬಣ್ಣಿಸಲಾಗಿದೆ. ಚೆಕ್‌ಪೋಸ್ಟಲ್ಲಿ ಶುಲ್ಕ ಪಾವತಿಸಿ ಮುಂದಕ್ಕೆ ಸಾಗಬೇಕು. ಕಡಿದಾದ ರಸ್ತೆಯಲ್ಲಿ ಜೀಪು ಸಂಚಾರವೇ ಆಸರೆ. ಶುಲ್ಕ ಪಾವತಿಸದೆಯು ವಿಹಾರ ನಡೆಸಬಹುದು. ಆದರೆ ಬೆಟ್ಟದ ತುದಿ ಮಂಟಪ ವೀಕ್ಷಿಸಲು ಅಸಾಧ್ಯ. ಮಂಟಪ ಏರಿ ಮುಗಿಲ ಸಂಭ್ರಮ ಸವಿಯದಿದ್ದರೆ ಪ್ರವಾಸ ಅಪೂರ್ಣವಾದಿತ್ತು.
Advertisement
ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಈ ಪ್ರವಾಸಿ ತಾಣವನ್ನು ಒಂದು ವರ್ಷಕ್ಕೆ ಗುತ್ತಿಗೆ ನೀಡಲಾಗುತ್ತದೆ. ಈ ವರ್ಷ 11.50 ಲಕ್ಷ ರೂ.ಗೆ ಟೆಂಡರ್ ವಹಿಸಲಾಗಿತ್ತು. ಇಲ್ಲಿ ವಾಹನ ಪಾರ್ಕಿಂಗ್‌ಗೆ ನಿರ್ಧಿಷ್ಟ ಶುಲ್ಕ ವಿಧಿಸಲಾಗುತ್ತದೆ. ಗುತ್ತಿಗೆ ಪಡೆದುಕೊಂಡವರಿಗೆ ಸಿಗುವ ಆದಾಯ ಇದು. ಪ್ರಾಕೃತಿಕ ವಿಕೋಪಕ್ಕೆ ಈಡಾದ ಬಳಿಕ ಆ.14 ರಿಂದ ಇಲ್ಲಿ ಪ್ರವಾಸಿಗರು ಪ್ರವೇಶಿಸಿಲ್ಲ ಅನ್ನುತ್ತಾರೆ ಟೆಂಡರ್ ಪಡೆದ ತಿಮ್ಮಯ್ಯ (ಗಾಂಧಿ).
ಮಾಂದಲಪಟ್ಟಿ ಸಮುದ್ರಮಟ್ಟದಿಂದ 4,000 ಮೀಟರ್ ಎತ್ತರದಲ್ಲಿದೆ. ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಈ ಪ್ರದೇಶ 8 ಸಾವಿರ ಹೆಕ್ಟೇರುಗಳಿವೆ ಎಂದು ಪಹಣಿ ಪತ್ರದಲ್ಲಿ ನಮೂದಾಗಿವೆ ಎನ್ನುತ್ತಾರೆ ಮಾಂದಲಪಟ್ಟಿ ಗ್ರಾಮಕರಣಿಕ ಶಿವಕುಮಾರ್.
ಟೂರಿಸ್ಟೇ ಜನರಿಗೆ ದಿಕ್ಕು ..!ಮಾಂದಲಪಟ್ಟಿ ತಪ್ಪಲಿನ ಕಾಫಿ ತೋಟ, ಗದ್ದೆ ನೆಲ ಸಮಗೊಂಡಿವೆ. ಇಲ್ಲಿನ ನಿವಾಸಿಗಳಿಗೆ ಜೀವನ ನಿರ್ವಹಣೆಗೆ ಈಗ ಉಳಿದಿರುವ ದಾರಿ ಪ್ರವಾಸಿಗರ ಸಾಗಾಟ. ಜಿಲ್ಲಾಡಳಿತದ ನಿಷೇಧದ ನಡುವೆಯೂ ಅಳಿದುಳಿದಿರುವ ರಸ್ತೆಯಲ್ಲಿ 10-20 ಜೀಪುಗಳು ಸಂಚರಿಸುತ್ತವೆ. ಮಾಂದಲಪಟ್ಟಿ ಬೆಟ್ಟ ಹತ್ತುವುದಿಲ್ಲ. ಬೆಟ್ಟದ ಕೆಳಭಾಗದ ಗ್ರಾಮದಲ್ಲಿನ ಹಾನಿ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಚಿತ್ರಣ ತೋರಿಸಲಾಗುತ್ತಿದೆ. ಆ ಪ್ರದೇಶಗಳು ಪ್ರವಾಸಿ ತಾಣವಾಗಿ ಬದಲಾಗಿದೆ. ಕಿರಣ್ ಪ್ರಸಾದ್ ಕುಂಡಡ್ಕ