Advertisement

ಮೈಸೂರಿನಲ್ಲಿ ಪ್ರವಾಸೋದ್ಯಮ ಚೇತರಿಕೆ

03:45 PM Jun 09, 2023 | Team Udayavani |

ಮೈಸೂರು: ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ದೇಶ-ವಿದೇಶಗಳ ಪ್ರವಾಸಿಗರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ವೀಕ್ಷಿಸಿದ್ದಾರೆ.

Advertisement

ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಭೇಟಿ ನೀಡಿರುವುದು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಇಂಬು ನೀಡಿದೆ. ಪ್ರವಾಸೋದ್ಯಮ ಹಾಗೂ ಇದಕ್ಕೆ ಪೂರಕವಾದ ವ್ಯಾಪಾರ, ವಹಿವಾಟುಗಳಲ್ಲೂ ಚೇತರಿಕೆ ಕಂಡು ಬಂದಿದೆ. ಮೈಸೂರು ಅರಮನೆಗೆ ಕಳೆದ ವರ್ಷ 2022ರ ಏಪ್ರಿಲ್‌ನಲ್ಲಿ 2,02,779 ಮಂದಿ, ಮೇ ನಲ್ಲಿ 3,69,070 ಮಂದಿ ಭೇಟಿ ನೀಡಿದ್ದಾರೆ. ಈ ವರ್ಷ 2023ರ ಏಪ್ರಿಲ್‌ನಲ್ಲಿ 3,71,566 ಮಂದಿ, ಮೇ 5,49,452 ಮಂದಿ ಭೇಟಿ ನೀಡಿದ್ದಾರೆ. ಅಂದರೆ, ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಬಿಸಿಯಾಗಿದ್ದ ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿಯೇ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮೈಸೂರು ಅರಮನೆ ವೀಕ್ಷಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ 5,39,448 ಮಂದಿ ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದಾರೆ. ಇದು ಕಳೆದ ವರ್ಷ ಒಂದು ತಿಂಗಳಿನಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿರುವ ದಾಖಲೆಯಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಅತಿ ಕಡಿಮೆ 1,95,921 ಮಂದಿ ಪ್ರವಾಸಿಗರು ಮೈಸೂರು ಅರಮನೆ ವೀಕ್ಷಿಸಿದ್ದಾರೆ.

ಮೃಗಾಲಯಕ್ಕೆ ಮೇ ತಿಂಗಳಿನಲ್ಲಿ 4.55 ಲಕ್ಷ ಮಂದಿ ಭೇಟಿ: ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೂ ಪ್ರವಾಸಿಗರ ಭೇಟಿಯಲ್ಲಿ ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ 2022ರ ಏಪ್ರಿಲ್‌ನಲ್ಲಿ 3 ಲಕ್ಷ ಮಂದಿ, ಮೇ ತಿಂಗಳಿನಲ್ಲಿ 3.25 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಈ ವರ್ಷ 2023ರ ಏಪ್ರಿಲ್‌ನಲ್ಲಿ 3,45,000 ಮಂದಿ, ಮೇ 30 ರವರೆಗೆ 4,55,000 ಮಂದಿ ಭೇಟಿ ನೀಡಿರುವುದು ದಾಖಲಾಗಿದೆ. ಮೈಸೂರಿನ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳಾದ ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ, ನಂಜನಗೂಡು, ತಲಕಾಡು, ಸೋಮನಾಥಪುರಕ್ಕೂ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಚುನಾವಣೆ ಮುಗಿದ ನಂತರ ಪ್ರವಾಸಿಗರ ಸಂಖ್ಯೆ ಏರಿಕೆ: ರಾಜ್ಯದಲ್ಲಿ ಈ ಬೇಸಿಗೆ ಸಮಯದಲ್ಲಿ ವಿಧಾ ನಸಭೆಗೆ ಚುನಾವಣೆ ನಡೆಯಿತು. ಆದರೂ, ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಿಸುವುದಕ್ಕೆ ಇದು ಯಾವುದೇ ರೀತಿಯಲ್ಲೂ ಅಡಚಣೆ ಆಗಲಿಲ್ಲ. ಏಕೆಂದರೆ, ಮೈಸೂರು ಹಾಗೂ ಸುತಮುತ್ತಲಿಗ ಪ್ರವಾಸಿ ತಾಣಗಳಿಗೆ ನೆರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ರಾಜ್ಯದವರೂ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಾರೆ. ಚುನಾವಣೆ ಸಮಯದಲ್ಲಿ ರಾಜ್ಯದ ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಚುನಾವಣೆ ಮುಗಿದ ನಂತರ ರಾಜ್ಯದ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆ ಕಂಡು ಬಂತು ಎಂದು ಹೋಟೆಲ್‌ ಉದ್ಯಮಿಯೊಬ್ಬರು ವಿವರಿಸಿದರು.

Advertisement

ಪ್ರವಾಸೋದ್ಯಮ ಪ್ರಾಧಿಕಾರ ರಚಿಸಿ : ಈ ಮಧ್ಯೆ ಮೈಸೂರು ಹಾಗೂ ಸುತ್ತಮುತ್ತ ಪ್ರೇಕ್ಷ ಣೀಯ ಸ್ಥಳಗಳಿಗೆ ಪ್ರವಾಸಿಗರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು, ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಪ್ರವಾಸೋ ದ್ಯಮ ಪ್ರಾಧಿಕಾರ ರಚಿಸಬೇಕೆಂಬ ಒತ್ತಾಯ ಮೊದಲಿನಿಂದಲೂ ಇದೆ. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು ರಾಜ್ಯ ಸರ್ಕಾರವನ್ನು ಈಗಾಗಲೇ ಒತ್ತಾಯಿಸಿವೆ.

ಮೈಸೂರಿಗೆ ಪ್ರವಾಸಿಗರು ಈ ಬೇಸಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ವಿಧಾನಸಭೆ ಚುನಾವಣೆ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂತು. ಈಗ ಸೀಸನ್‌ ಮುಗಿಯುತ್ತಿದೆ. ಸಿ.ನಾರಾಯಣಗೌಡ, ಅಧ್ಯಕ್ಷರು, ಮೈಸೂರು ಹೋಟೆಲ್‌ ಮಾಲೀಕರ ಸಂಘ

ಈ ವರ್ಷ ಕೊರೊನಾ ಆತಂಕ ಇರಲಿಲ್ಲ. ಹೀಗಾಗಿ, ಮೈಸೂರಿಗೆ ಕಳೆದ ವರ್ಷಕ್ಕಿಂತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು. ರಾಜ್ಯದ ಪ್ರವಾಸಿಗರು ವಿಧಾನಸಭಾ ಚುನಾವಣೆ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಟಿ.ಎಸ್‌.ಸುಬ್ರಹ್ಮಣ್ಯ, ಉಪ ನಿರ್ದೇಶಕರು, ಅರಮನೆ ಮಂಡಳಿ

ಈ ವರ್ಷದ ಬೇಸಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರು ಹಾಗೂ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ಕೋವಿಡ್‌ ಆತಂಕ ಪೂರ್ಣವಾಗಿ ಹೋಗಿರಲಿಲ್ಲ. ಹೀಗಾಗಿ, ಆ ವರ್ಷ ಪ್ರವಾಸಿಗರು ಹೆಚ್ಚಿನ ಸಂಖ್ಯೆ ಯಲ್ಲಿ ಮೈಸೂರಿಗೆ ಭೇಟಿ ನೀಡಿರಲಿಲ್ಲ. ಆದರೆ, ಈ ವರ್ಷ ಕೋವಿಡ್‌ ಆತಂಕ ದೂರ ವಾಗಿತ್ತು. ಏಪ್ರಿಲ್‌, ಮೇ ತಿಂಗಳಿನಲ್ಲಿ ಪ್ರವಾಸೋದ್ಯಮ ಚುರುಕುಗೊಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರವಾಸಿಗರ ಸಂಖ್ಯೆಯಲ್ಲಿ ಸುಮಾರು ಶೇ.20ರಷ್ಟು ಹೆಚ್ಚಾಗಿತ್ತು. ಬಿ.ಎಸ್‌.ಪ್ರಶಾಂತ್‌, ಗೌರವ ಅಧ್ಯಕ್ಷರು, ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್‌ 

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next