Advertisement
ಶನಿವಾರದಿಂದ ಪ್ರವಾಸೋದ್ಯಮ ಚೇತರಿಕೆ: ವರ್ಷಾಂತ್ಯದಲ್ಲಿ ಪ್ರತಿಭಟನೆಯ ಕಾವು ಕಡಿಮೆಯಾಗಿದ್ದರಿಂದ ಶನಿವಾರದಿಂದ ಪ್ರವಾಸೋದ್ಯಮ ಚೇತರಿಕೆ ಕಂಡಿದೆ. ದಸರೆಯ ಬಳಿಕ ವರ್ಷಾಂತ್ಯದಲ್ಲಿ ಮೈಸೂರಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತ ಅರಮನೆ ಆವರಣದಲ್ಲಿ ಏರ್ಪಡಿಸಿರುವ ಮಾಗಿ ಉತ್ಸವ, ಮೃಗಾಲಯದಿಂದ ಏರ್ಪಡಿಸಿರುವ ಪಕ್ಷಿ ವೀಕ್ಷಣೆ ಕಾರ್ಯಕ್ರಮಗಳು ಪ್ರವಾಸಿಗರನ್ನು ಸೆಳೆಯುತ್ತಿವೆ.
Related Articles
Advertisement
ಶೇ.90ರಷ್ಟು ಈಗಾಗಲೇ ಬುಕ್: ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ, ಗಲಾಟೆ, ಹಿಂಸಾಚಾರಗಳು ನಡೆಯುತ್ತಿದ್ದರಿಂದ ಡಿಸೆಂಬರ್ ತಿಂಗಳಲ್ಲಿ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದ್ದು, ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಶೇ.30ರಷ್ಟು ಕುಸಿದಿದೆ ಎಂದು ಹೋಟೆಲ್ ಉದ್ಯಮಿಗಳು ಹೇಳುತ್ತಿದ್ದರು.
ಆದರೆ, ಶುಕ್ರವಾರದಿಂದ ಪರಿಸ್ಥಿತಿ ಸುಧಾರಿಸಿದ್ದು, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದು, ಮೈಸೂರು ನಗರದಲ್ಲಿರುವ ಹೋಟೆಲ್, ವಸತಿ ಗೃಹಗಳಲ್ಲಿನ ಸುಮಾರು 9500 ಕೊಠಡಿಗಳ ಪೈಕಿ ಶೇ.90ರಷ್ಟು ಈಗಾಗಲೇ ಬುಕ್ ಆಗಿದ್ದು, ಈ ವರ್ಷ ಶೇ.100ರಷ್ಟು ಬುಕ್ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ.
ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲ: ದೇಶ-ವಿದೇಶಗಳಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಇಲ್ಲಿನ ಯಾತ್ರಾ ಸ್ಥಳಗಳು, ಪ್ರವಾಸಿ ತಾಣಗಳನ್ನು ತೋರಿಸುವ ಸಲುವಾಗಿ ರಚಿಸಲಾದ ಕಾವೇರಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಗಾಢ ನಿದ್ದೆಯಲ್ಲಿದೆ. ಇದರ ಪರಿಣಾಮ ಪ್ರವಾಸಿಗರು ಖಾಸಗಿ ಸಂಸ್ಥೆಗಳನ್ನೇ ಆಶ್ರಯಿಸಬೇಕಿದೆ. ಇನ್ನೂ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತ ಆಯೋಜಿಸಿರುವ ಮಾಗಿ ಉತ್ಸವ ನೋಡಲು ಸ್ಥಳೀಯರೇ ಬರುತ್ತಿದ್ದು, ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂಬ ಆರೋಪವೂ ಇದೆ.
ಈ ತಿಂಗಳ ಮಧ್ಯಭಾಗದಲ್ಲಿ ಪ್ರತಿಭಟನೆಗಳಿಂದಾಗಿ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಮೈಸೂರಿನ ಯಾವುದೇ ತಾಣಕ್ಕೆ ಹೋದರೂ ಪ್ರವಾಸಿಗರಿದ್ದಾರೆ. -ಎಚ್.ಪಿ.ಜನಾರ್ದನ್, ಉಪ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ಪ್ರತಿಭಟನೆಗಳಿಂದಾಗಿ ಮೈಸೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಮೈಸೂರಿಗೆ ಬರುವವರಿಗಿಂತ ಇಲ್ಲಿಂದ ಹೊರಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೈಸೂರಿನಲ್ಲಿ ಇನ್ನೋವಾ, ಟೆಂಪೋ ಟ್ರಾವೆಲರ್‌ಗಳು ಬಾಡಿಗೆಗೆ ಸಿಗುತ್ತಿಲ್ಲ. ವರ್ಷಾಂತ್ಯಕ್ಕೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ.
-ಬಿ.ಎಸ್.ಪ್ರಶಾಂತ್, ಅಧ್ಯಕ್ಷ, ಮೈಸೂರು ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಕಳೆದ ವಾರ ಇದ್ದ ಪರಿಸ್ಥಿತಿ ಈಗಿಲ್ಲ. ಪರಿಸ್ಥಿತಿ ಸುಧಾರಿಸಿದ್ದು, ಪಿಕಪ್ ಆಗ್ತಿದೆ. ಮೈಸೂರಿನಲ್ಲಿರುವ ಹೋಟೆಲ್ ಮತ್ತು ವಸತಿಗೃಹಗಳಲ್ಲಿ ಶೇ.90ರಷ್ಟು ರೂಮ್ ಬುಕ್ಕಿಂಗ್ ಆಗಿದೆ.
-ಸಿ.ನಾರಾಯಣ ಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ * ಗಿರೀಶ್ ಹುಣಸೂರು