ಕಲ್ಪತರು ನಾಡು, ಶೈಕ್ಷಣಿಕ ನಗರ ಎಂದೇ ಖ್ಯಾತಿಪಡೆದಿರುವ ತುಮಕೂರು ಜಿಲ್ಲೆಯಲ್ಲಿ ನೋಡಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಜಿಲ್ಲೆಯಲ್ಲಿ ಸಾಕಷ್ಟು ಬೆಟ್ಟ ಗುಡ್ಡಗಳನ್ನು ಕಾಣಬಹುದು. ತುಮಕೂರಿನ ಬೆಟ್ಟ ಗುಡ್ಡಗಳ ನಡುವೆ ಒಂದು ನೈಸರ್ಗಿಕ ಚಿಲುಮೆ ಇದೆ. ಅದೇ ನಾಮದ ಚಿಲುಮೆ. ಇಲ್ಲಿ ವರ್ಷದ 360 ದಿನಗಳಲ್ಲಿಯೂ ನೀರು ಬರುತ್ತವೆ. ಈ ಚಿಲುಮೆಗೂ ರಾಮಾಯಣಕ್ಕೂ ನಂಟಿದೆ ಎನ್ನುತ್ತಾರೆ ಇತಿಹಾಸಕಾರರು.
ಹೌದು ನಾಮದ ಚಿಲುಮೆ ಕರ್ನಾಟಕ ತುಮಕೂರು ಬಳಿಯ ದೇವಾರಾಯನದುರ್ಗದ ಸಮೀಪ ಇರುವ ಒಂದು ನೈಸರ್ಗಿಕ ತಾಣವಾಗಿದೆ. ಬೆಂಗಳೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ನಾಮದ ಚಿಲುಮೆಯು ತುಮಕೂರಿನಿಂದ ಬರೀ 14 ಕಿ.ಮೀ ದೂರದಲ್ಲಿದೆ. ತುಮಕೂರಿಗೆ ಹೋಗುವ ರಸ್ತೆಯಲ್ಲಿ ಬೆಟ್ಟದ ಬುಡದಲ್ಲಿದೆ ಈ ತಾಣವಿದೆ. ಈ ಜಾಗಕ್ಕೆ ಪ್ರವಾಸಿಗರು ದಿನ ಪೂರ್ತಿ ಆಗಮಿಸುತ್ತಾರೆ.
ಪಿಕ್ನಿಕ್‌ಗೆ, ಲಾಂಗ್ ಬೈಕ್ ರೈಡ್ ಗೆ ಉತ್ತಮ ತಾಣ
ಪಿಕ್ನಿಕ್‌ಗೆ, ಲಾಂಗ್ ಬೈಕ್ ರೈಡ್ ಹೋಗಲು ಬಯಸುವವರು ತುಮಕೂರಿನ ನಾಮದ ಚಿಲುಮೆಯನ್ನು ಭೇಟಿ ನೀಡಲೇ ಬೇಕು. ನೀವು ದಾರಿಯುದ್ದಕ್ಕೂ ಕಾಡುಗಳು ಹಾಗೂ ಕೋತಿಗಳನ್ನು ಕಾಣಬಹುದು. ಕೆಲವೊಮ್ಮೆ ಕೋತಿಗಳು ದಾರಿಮಧ್ಯೆ ನಿಮ್ಮನ್ನು ಅಡ್ಡಗಟ್ಟುವುದೂ ಇದೆ. ದಾರಿಯುದ್ದಕ್ಕೂ ನೀವು ಎರಡೂ ಬದಿಯಲ್ಲೂ ಕಾಡನ್ನು ನೋಡಬಹುದು.
ಜಿಂಕೆ ವನ ವಿಶೇಷ :
ನಾಮದ ಚಿಲುಮೆಯ ಒಳಗೆ ಜಿಂಕೆ ವನ ಕೂಡಾ ಇದೆ. ಇಲ್ಲಿ ನೀವು ಸಾಕಷ್ಟು ಚುಕ್ಕೆ ಜಿಂಕೆಗಳನ್ನು ಕಾಣಬಹುದು. ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಜಿಂಕೆಗಳನ್ನು ರಕ್ಷಿಸಲು ಪ್ರದೇಶವನ್ನು ಬೇಲಿ ಹಾಕಲಾಗಿದೆ. ಮೂಲೆಯ ಸುತ್ತಲೂ ಅನೇಕ ಜಿಂಕೆಗಳನ್ನು ಗುರುತಿಸಬಹುದು. ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ ಮತ್ತು ನಾಮದ ಚಿಲುಮೆ ಅಲ್ಲಿನ ಶಾಂತ ವಾತಾವರಣಕ್ಕೆ ಪ್ರಸಿದ್ಧವಾಗಿದ್ದು, ಒಂದು ದಿನದ ಪಿಕ್ನಿಕ್‌ಗೆ ಸೂಕ್ತವಾದ ತಾಣವಾಗಿದೆ.
ರಾಮನ ಬಾಣದಿಂದ ಉದ್ಭವವಾದ ಸ್ಥಳ :
ರಾಮ, ಸೀತೆ ಮತ್ತು ಲಕ್ಷ್ಮಣರೊಂದಿಗೆ ವನವಾಸದ ಸಮಯದಲ್ಲಿ ಇಲ್ಲಿಯೇ ಇದ್ದರು ಎಂದು ನಂಬಲಾಗಿದೆ. ರಾಮನು ಹಣೆಗೆ ತಿಲಕವನ್ನು ಹಚ್ಚಲು ನೀರನ್ನು ಹುಡುಕಿದನು. ಅವನಿಗೆ ನೀರು ಸಿಗದಿದ್ದಾಗ ಬಂಡೆಗೆ ಬಾಣ ಹೊಡಿದನು. ಬಾಣವು ಬಂಡೆಗೆ ತೂರಿಕೊಂಡು, ರಂಧ್ರವನ್ನು ಮಾಡಿ ಅದರಿಂದ ನೀರು ಹೊರಚಿಮ್ಮಿತು. ಹಾಗಾಗಿ ಈ ಸ್ಥಳವನ್ನು ನಾಮದ ಚಿಲುಮೆ ಎಂದು ಕರೆಯಲಾಗುತ್ತಿದೆ. ಈ ಚಿಲುಮೆಯಲ್ಲಿ ವರ್ಷವಿಡೀ ನೀರು ಚಿಮ್ಮುತ್ತಿರುತ್ತದೆ. ಯಾವುದೇ ಬರಗಾಲಕ್ಕೂ ಈ ನೀರು ಬತ್ತುವುದಿಲ್ಲವಂತೆ. ಇಲ್ಲಿಂದ ಹೊರಬರುವ ನೀರನ್ನು ಪವಿತ್ರ ನೀರನ್ನು ತೀರ್ಥ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ಈ ನೀರನ್ನು ತೀರ್ಥದಂತೆ ಸೇವಿಸುತ್ತಾರೆ.
ರಾಮನ ಪಾದದ ಗುರುತು :
ಈ ಚಿಲುಮೆಯ ಬಳಿ ನೀವು ರಾಮನ ಪಾದದ ಗುರುತನ್ನೂ ನೋಡಬಹುದು. ಈ ಚಿಲುಮೆಯನ್ನು ಪ್ರಸ್ತುತ ಅರಣ್ಯ ಇಲಾಖೆಯು ಸಂರಕ್ಷಿಸುತ್ತಿದೆ. ಹಾಗಾಗಿ ಪ್ರವಾಸಿಗರುಈ ಚಿಲುಮೆಯನ್ನು ಹಾಳು ಮಾಡದಂತೆ ಬೇಲಿಯನ್ನು ನಿರ್ಮಿಸಿದ್ದಾರೆ. ಜಿಂಕೆ ಉದ್ಯಾನವನವು ಪ್ರವೇಶಕ್ಕಾಗಿ ಅತ್ಯಲ್ಪ ಶುಲ್ಕವನ್ನು ವಿಧಿಸುತ್ತದೆ. ವಯಸ್ಕರಿಗೆ 10 ರೂ. ಹಾಗೂ ಮಕ್ಕಳಿಗೆ 5 ರೂ. ಪ್ರವೇಶ ಶುಲ್ಕ ವಿಧಿಸಲಾಗುವುದು. ಜಿಂಕೆಗಳ ನೈಸರ್ಗಿಕ ಆವಾಸಸ್ಥಾನವು ವಿರಾಮ ತೆಗೆದುಕೊಳ್ಳಲು ಮತ್ತು ಕುಟುಂಬದೊಂದಿಗೆ ಪಿಕ್ನಿಕ್ ಅನ್ನು ಆನಂದಿಸಲು ಸೂಕ್ತ ಸ್ಥಳವಾಗಿದೆ.