Advertisement

Tourism ಕರಾವಳಿಯಲ್ಲಿ ಇನ್ನಷ್ಟು ಕಳೆಗಟ್ಟಿದ ವರ್ಷಾಂತ್ಯ ಪ್ರವಾಸೋದ್ಯಮ

11:31 PM Dec 24, 2023 | Team Udayavani |

ಮಂಗಳೂರು: ಕ್ರಿಸ್ಮಸ್‌, ವರ್ಷಾಂತ್ಯ, ಹೊಸ ವರ್ಷದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಪ್ರವಾಸೋದ್ಯಮ ಗರಿಗೆದರಿದೆ. ಹೆಚ್ಚೆಚ್ಚು ಮಂದಿ ಪ್ರವಾಸಿಗರು ಕರಾವಳಿಯತ್ತ ಆಕರ್ಷಿತರಾಗಿ ಭೇಟಿ ನೀಡುವವರ ಸಂಖ್ಯೆ ಏರಿಕೆಯಾಗಿದೆ.

Advertisement

ಪರಿಣಾಮವಾಗಿ ಮಂಗಳೂರು, ಉಡುಪಿಯ ಹೊಟೇಲ್‌ಗ‌ಳಲ್ಲಿ ಡಿ. 20ರಿಂದ ಜನವರಿ ಮೊದಲ ವಾರದವರೆಗೆ ಬಹುತೇಕ ಎಲ್ಲ ದುಬಾರಿ ಮಧ್ಯಮ ದರ್ಜೆಯ ಹೊಟೇಲ್‌, ವಸತಿಗೃಹಗಳು, ರೆಸಾರ್ಟ್‌, ಹೋಮ್‌ಸ್ಟೇ, ಸರ್ವಿಸ್‌ ಅಪಾರ್ಟ್‌ ಮೆಂಟ್‌, ಕಡಲತೀರದ ಅತಿಥಿಗೃಹ ಗಳೆಲ್ಲವೂ ಪ್ರವಾಸಿಗರಿಂದ ಮುಂಗಡ ಬುಕ್ಕಿಂಗ್‌ ಆಗಿವೆ.

ಸಾಮಾನ್ಯವಾಗಿ ಕ್ರಿಸ್ಮಸ್‌ಗೆ ಬಹುತೇಕ ಕಡೆ ರಜೆ ಇರುವ ಕಾರಣ ಮಕ್ಕಳೊಂದಿಗೆ ಪೋಷಕರೂ ರಜೆಯ ಹುಮ್ಮಸ್ಸಿನಲ್ಲಿರುತ್ತಾರೆ. ಕರಾವಳಿಯ ದೇಗುಲಗಳು, ಪ್ರವಾಸಿ ತಾಣಗಳು, ಕಡಲ ತೀರಗಳಲ್ಲಿ ಹಾಗಾಗಿ ಜನವೋ ಜನ. ಮುಖ್ಯವಾಗಿ ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರ, ಗುಜರಾತ್‌ ಕಡೆಯಿಂದಲೂ ಸಾವಿರಾರು ಮಂದಿ ಜನ ಪ್ರವಾಸಿಗರು ಕರಾವಳಿಯತ್ತ ಬರತೊಡಗಿದ್ದಾರೆ.

ಕೋವಿಡ್‌ ಬಳಿಕ ನಿಧಾನವಾಗಿ ಪ್ರವಾಸೋದ್ಯಮ ಚಿಗುರುತ್ತಿದ್ದು, ಕಳೆದ ವರ್ಷವೂ ಡಿಸೆಂಬರ್‌ನಲ್ಲಿ ಹೆಚ್ಚಿತ್ತು. ಈ ಬಾರಿಯೂ ಅದಕ್ಕಿಂತಲೂ ಉತ್ತಮ ಸನ್ನಿವೇಶ ಕಂಡುಬಂದಿದೆ. ಧರ್ಮಸ್ಥಳ, ಕೊಲ್ಲೂರು, ಉಡುಪಿ ಅಷ್ಟಮಠ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ಸಹಿತ ಹಲವು ತೀರ್ಥಕ್ಷೇತ್ರಗಳಲ್ಲಿ ಭಾರಿ ಜನಸಂದಣಿ ಕಂಡು ಬರುತ್ತಿದೆ. ಇದು ವರ್ಷಾಂತ್ಯದವರೆಗೂ ಮುಂದುವರಿಯುವ ಸಂಭವವಿದೆ.

ಮದುವೆ ತಾಣ ಕರಾವಳಿ
ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಕರಾವಳಿಯ ತಾಣಗಳನ್ನು ಮದುವೆಗಾಗಿ ಆಯ್ದುಕೊಳ್ಳುತ್ತಿರುವುದು (ಡೆಸ್ಟಿನೇಶನ್‌ ವೆಡ್ಡಿಂಗ್‌) ಹಾಗೂ ಕರಾವಳಿಯ ಮೂಲದವರು ದೂರದ ನಗರಗಳಿಂದ ಬಂದು ಇಲ್ಲಿಯೇ ಮದುವೆ ಸಂಪ್ರದಾಯ ಆಚರಿಸುತ್ತಿರುವುದು ಕಂಡುಬಂದಿದೆ. ಪ್ರಮುಖವಾಗಿ ಮುಂಬಯಿ, ದಿಲ್ಲಿಯಲ್ಲಿನ ಕರಾವಳಿ ಮೂಲದವರು ಊರಿನಲ್ಲೇ ವಿವಾಹವಾಗಲು ದೊಡ್ಡ ಸಂಖ್ಯೆಯಲ್ಲಿ ಸ್ಥಳೀಯ ಹೊಟೇಲ್‌ಗ‌ಳಲ್ಲಿ ವಸತಿ ವ್ಯವಸ್ಥೆಯನ್ನು ಕಾದಿರಿಸುತ್ತಿದ್ದಾರೆ.

Advertisement

ಮುಂಬಯಿಯಂತಹ ಕಡೆ ವಿವಾಹಕ್ಕೆ ವೆಚ್ಚ ಜಾಸ್ತಿ, ಅಲ್ಲದೆ ಮತ್ತೆ ಊರಿನಲ್ಲೂ ಊಟ ಕೊಡಬೇಕು. ಅದರ ಬದಲು ಇಲ್ಲಿನ ಧಾರ್ಮಿಕ ಕ್ಷೇತ್ರಗಳಲ್ಲಿ ಸರಳವಾಗಿ ವಿವಾಹವಾಗಿ, ಬಳಿಕ ರೆಸಾರ್ಟ್‌ಗಳಲ್ಲಿ ಭರ್ಜರಿ ಔತಣಕೂಟ ಏರ್ಪಡಿಸಿದರೂ ಬಹಳಷ್ಟು ಹಣದ ಉಳಿತಾಯ ಸಾಧ್ಯ. ಈ ಸೂತ್ರವನ್ನು ಅನುಸರಿಸುತ್ತಿದ್ದಾರೆ ಹಲವರು. ಇದರೊಂದಿಗೆ ಕೋವಿಡ್‌ ಬಳಿಕ ಅನಿವಾಸಿ ಭಾರತೀಯರೂ ಪ್ರವಾಸಕ್ಕಾಗಿ ಬರುತ್ತಿರುವುದು ಕರಾವಳಿ ಪ್ರವಾಸೋದ್ಯಮಕ್ಕೆ ಚುರುಕು ತಂದಿದೆ.

ದ.ಕ.ದಲ್ಲಿ 90ರಷ್ಟು ಹೋಂಸ್ಟೇಗಳು ಇವೆ. ಹೆಚ್ಚಿನವು ಮಂಗಳೂರು ತಾಲೂಕಿನಲ್ಲಿ ಅದರಲ್ಲೂ ವಿಶೇಷವಾಗಿ ಉಳ್ಳಾಲ, ಸುರತ್ಕಲ್‌ ಕಡಲ ಕಿನಾರೆ ಬಳಿ ಇವೆ. ಉಡುಪಿ ಜಿಲ್ಲೆಯ ಮಲ್ಪೆ, ಕಾಪು, ಕುಂದಾಪುರ ಕಡಲ ಕಿನಾರೆ ಪರಿಸರದಲ್ಲಿರುವ ಹೋಂ ಸ್ಟೇ, ಹಟ್‌ ಹೋಂಗಳು ಭರ್ತಿಯಾಗಿವೆ. ಮಂಗಳೂರು ನಗರದಲ್ಲಿ ವಿವಿಧ ದರ್ಜೆಗಳ ಒಟ್ಟು 100ರಷ್ಟು ಹೊಟೇಲ್‌ಗ‌ಳಿದ್ದು, ಅದರಲ್ಲಿರುವ ಅಂದಾಜು 6000ದಷ್ಟು ರೂಂಗಳೆಲ್ಲವೂ ಭರ್ತಿಯಾಗಿವೆ. 40ರಷ್ಟು ಸರ್ವಿಸ್‌ ಅಪಾರ್ಟ್‌ಮೆಂಟ್‌ಗಳೂ ತುಂಬಿವೆ. ಮಂಗಳೂರು, ಉಡುಪಿ ನಗರದಲ್ಲಿರುವ ವಿವಿಧ ಶಾಪಿಂಗ್‌ ಮಾಲ್‌ಗ‌ಳು, ನಗರದ ಪ್ರಮುಖ ರೆಸ್ಟೋರೆಂಟ್‌, ಐಸ್‌ಕ್ರೀಂ ಪಾರ್ಲರುಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಿದೆ.

ದ.ಕ.: ತೀರ್ಥಕ್ಷೇತ್ರಗಳೇ ಅಚ್ಚುಮೆಚ್ಚು
ಪ್ರವಾಸೋದ್ಯಮ ಇಲಾಖೆ ಮಾಹಿತಿ ಯಂತೆ ಕಳೆದ 11 ತಿಂಗಳಲ್ಲಿ ಹೆಚ್ಚು ಜನ ಆಕರ್ಷಿಸಿರುವುದು ಧಾರ್ಮಿಕ ಕೇಂದ್ರ ಗಳೇ. ಕುಕ್ಕೆ ಸುಬ್ರಹ್ಮಣ್ಯಕ್ಕೆ 72,03,800 ಮಂದಿ ಆಗಮಿಸಿ ಅಗ್ರಸ್ಥಾನದಲ್ಲಿದ್ದರೆ, ಧರ್ಮಸ್ಥಳ 65,05,380, ಕಟೀಲು 56,59,300 ಅನಂತರದ ಸ್ಥಾನದಲ್ಲಿದೆ. ಉಳಿದಂತೆ ಬೀಚ್‌ಗಳಲ್ಲಿ ಪಣಂಬೂರು ಅತಿ ಹೆಚ್ಚು ಎಂದರೆ 11,69,800 ಮಂದಿ ಯನ್ನು ಆಕರ್ಷಿಸಿದೆ. ತಣ್ಣೀರುಬಾವಿ ಬೀಚ್‌ 10,22,900 ಮಂದಿಯನ್ನು ಸೆಳೆದಿದ್ದರೆ ಪಿಲಿಕುಳ ನಿಸರ್ಗಧಾಮಕ್ಕೆ 6.04 ಲಕ್ಷ ಮಂದಿ ಬಂದಿದ್ದಾರೆ.

ಉಡುಪಿ ಬೀಚ್‌ ಪ್ರಸಿದ್ಧ
ಉಡುಪಿಯಲ್ಲಿ ಮಲ್ಪೆ ಬೀಚ್‌ ಈ ವರ್ಷ 62,33,970 ಮಂದಿಯನ್ನು ಸೆಳೆದರೆ ಕಾಪು ಬೀಚ್‌, ಸ್ಕೂಬಾ ಡೈವ್‌ ಸೌಲಭ್ಯ 33,93,096 ಮಂದಿ ನೋಡಿದ್ದಾರೆ. ಸೈಂಟ್‌ ಮೇರೀಸ್‌ ದ್ವೀಪ ಮಳೆಗಾಲದಲ್ಲಿ ಮುಚ್ಚುವುದಾದರೂ ಉಳಿದ ಸಮಯದಲ್ಲಿ ಇದುವರೆಗೆ 35,57,850 ಮಂದಿ ತೆರಳಿ ಆನಂದಿಸಿದ್ದಾರೆ.

ಉಡುಪಿಯಲ್ಲೂ ಹೊಟೇಲ್‌ಗ‌ಳೆಲ್ಲಾ ಎರಡು ವಾರ ಹಿಂದೆಯೇ ಭರ್ತಿಯಾಗಿವೆ, ಹೆಚ್ಚು ಜನ ಬರುತ್ತಿದ್ದಾರೆ, ಬಂದವರು ಧಾರ್ಮಿಕ ತಾಣಗಳು, ಕಡಲ ತೀರಕ್ಕೆ ತೆರಳಲು ಇಷ್ಟ ಪಡುತ್ತಿದ್ದಾರೆ, ನಮ್ಮ ಇಲಾಖೆಯಿಂದಲೂ ತಾಣಗಳ ಬಗ್ಗೆ ಪ್ರಚಾರ ಮಾಡುತ್ತಿದ್ದೇವೆ.
– ಕುಮಾರ್‌ ಸಿ.ಯು. ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಉಡುಪಿ

ಈ ವರ್ಷ ಎಂದಿಗಿಂತಲೂ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ, ಪಣಂಬೂರು ಬೀಚ್‌ಗೆ ಕೆಲ ದಿನಗಳಲ್ಲಿ ತೇಲುವ ಸೇತುವೆ,
ಸ್ಕೂಬಾ ಡೈವಿಂಗ್‌ ಕೂಡ ಬರಲಿದ್ದು, ಇನ್ನಷ್ಟು ಮಂದಿಯನ್ನು ಸೆಳೆಯಲಿದೆ.
-ಮಾಣಿಕ್ಯ, ಪ್ರಭಾರ ಉಪನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಮಂಗಳೂರು

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next