Advertisement
ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಿಯೆಟ್ನಾಂ ಮತ್ತು ಕಾಂಬೋಡಿಯಾ ದೇಶಗಳು ಮುಂಚೂಣಿಯಲ್ಲಿವೆ. ಯುದ್ಧದಲ್ಲಿಯೇ ಹುಟ್ಟಿ, ಬದುಕಿ-ಬೆಳೆದಿರುವ ದೇಶ ವಿಯೆಟ್ನಾಂ. ಚೀನಾ, ಫ್ರಾನ್ಸ್ ಮತ್ತು ಅಮೆರಿಕದಂಥ ದೈತ್ಯ ರಾಷ್ಟ್ರಗಳನ್ನು ಎದುರಿಸಿ ಬದುಕುಳಿದ ದೇಶ ಇದು.
Related Articles
Advertisement
ಈ ದೇಶದ ಜನತೆ ದಶಕಗಳಷ್ಟು ಕಾಲ ತಮ್ಮ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದರೂ ದೇಶ ಅಭಿವೃದ್ಧಿಯ ಬಗೆಗೆ, ಜನರಿಗೆ ಬೇಕಾದ ಸಾರಿಗೆ, ಸಂಪರ್ಕ, ದೂರವಾಣಿ ಸಂಪರ್ಕ, ಜನರ ಆರೋಗ್ಯ ಕಾಪಾಡಲು ಬೇಕಾಗಿರುವ ಆಸ್ಪತ್ರೆಗಳು, ಕೃಷಿಕರಿಗೆ ಬೇಕಾಗಿರುವ ನೀರಾವರಿ, ಮಕ್ಕಳಿಗೆ ಯುವಕರಿಗೆ ಬೇಕಾದ ಶಿಕ್ಷಣ ಮತ್ತು ಜನತೆಗೆ ಬೇಕಾದ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ಸರಕಾರ ಬಹಳಷ್ಟು ಮುತುವರ್ಜಿ ತೆಗೆದುಕೊಂಡಿರುವುದು ಗಮನಾರ್ಹ. ಇಲ್ಲಿ ಬಹಳಷ್ಟು ಮಳೆ ಬೀಳುತ್ತಿದ್ದರೂ, ರಸ್ತೆಗಳಲ್ಲಿ ನೀರು ನಿಂತಿರುವುದಾಗಲೀ ಅಥವಾ ರಸ್ತೆ ಗುಂಡಿಗಳಾಗಲೀ ಕಾಣಸಿಗುವುದಿಲ್ಲ.
ವಿಯೆಟ್ನಾಂ ದೇಶ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದರೆ, ಕಾಂಬೋಡಿಯಾ ದೇಶ ಚಾರಿತ್ರಿಕವಾಗಿ ಹೆಸರುವಾಸಿಯಾಗಿದೆ. ಅಲ್ಲಿಯ ಸೀಮ್ ರೀಫ್ನಲ್ಲಿರುವ ಅಂಕುರ್ ದೇವಸ್ಥಾನಕ್ಕೆ ಜಗತ್ತಿನಲ್ಲಿಯೇ ಅತಿದೊಡ್ಡ ದೇವಸ್ಥಾನವೆನ್ನುವ ಹೆಗ್ಗಳಿಕೆ ಇದೆ. ಸುಮಾರು 12ನೇ ಶತಮಾನದಲ್ಲಿ ರಾಜವರ್ಮನೆನ್ನುವ ರಾಜನು ಈ ಹಿಂದು ದೇವಾಲಯವನ್ನು ಕಟ್ಟಿಸಿದ್ದನಂತೆ. ಸುಮಾರು 210 ಹೆಕ್ಟೇರ್ ಜಾಗದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು ಪ್ರವಾಸಿಗರಲ್ಲಿ ದಿಗಿಲುಂಟು ಮಾಡುತ್ತದೆ. ಯಂತ್ರಗಳ ಸಹಾಯವಿಲ್ಲದೇ, ಕೇವಲ ಆನೆ ಮತ್ತು ಕುದುರೆಗಳ ಸಹಾಯದಿಂದ ಬೃಹದಾಕಾರದ ಕಲ್ಲುಗಳನ್ನು ಅಷ್ಟೆತ್ತರಕ್ಕೆ ಒಯ್ದು ದೇವಾಲಯಗಳನ್ನು ನಿರ್ಮಾಣ ಮಾಡಿರುವುದು ಪ್ರವಾಸಿಗರು ಮೂಗಿನ ಮೇಲೆ ಬೆರಳು ಇಡುವಂತೆ ಮಾಡುತ್ತದೆ. ಹಾಗೆಯೇ ಅಂಕೋರೇಮ್ ಬುದ್ದ ದೇವಾಲಯದಲ್ಲಿ ನಗುಮುಖದ ಬುದ್ಧನ ಹಲವಾರು ಪ್ರತಿಮೆಗಳು ಅಂದಿನ ಶಿಲ್ಪಿಗಳ ವೈಶಿಷ್ಟ್ಯಕ್ಕೆ ಮಾದರಿಯಾಗಿವೆ. ಇಲ್ಲಿನ ಹಿಂದು ಮತ್ತು ಬುದ್ಧ ದೇವಾಲಯಗಳಲ್ಲಿರುವ ಭಾರತ ಮತ್ತು ಕಾಂಬೋಡಿಯಾದ ಸಮ್ಮಿಶ್ರಿತ ವಾಸ್ತುಶಿಲ್ಪ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ದೇಶದ ತುಂಬಾ ತುಂಬಿರುವ ವಿಶಾಲವಾದ ಸರೋವರಗಳು ನೂರಾರು ಮೈಲುಗಳಷ್ಟು ವಿಸ್ತಾರವನ್ನು ಆವರಿಸಿಕೊಂಡಿದ್ದು, ಅವುಗಳಲ್ಲಿ ಪ್ರಯಾಣ ಮಾಡುವಾಗ ಸಮುದ್ರಯಾನದ ಅನುಭವವಾಗುತ್ತದೆ. ಈ ಸರೋವರಗಳಲ್ಲಿ ಅಲ್ಲಿನ ಜನರ ದೈನಂದಿನ ಜೀವನ ಹಾಸುಹೊಕ್ಕಾಗಿರುವದು ಇನ್ನೊಂದು ವಿಶೇಷ. ಸಾವಿರಾರು ಜನರು ಅಲ್ಲಿಯೇ ಮನೆ ಕಟ್ಟಿಕೊಂಡು ಬೇರೆ ಬೇರೆ ರೀತಿಯ ಜೀವನ ಸಾಗಿಸುವುದು ಆಶ್ಚರ್ಯಕರವಾಗಿರುತ್ತದೆ. ಸರೋವರದ ಮೇಲೆ ಚರ್ಚ್‌ಗಳು, ಶಾಲೆಗಳು, ನೀರಿನ ಮೇಲೆ ಚಲಿಸುವ ದೊಡ್ಡ ದೊಡ್ಡ ಮಾರುಕಟ್ಟೆಗಳನ್ನು ನೋಡುವುದೇ ಒಂದು ಅವಿಸ್ಮರಣೀಯ ಅನುಭವ. ಸರೋವರಗಳಲ್ಲಿ ನೂರಾರು ಹೆಕ್ಟೇರ್‌ಗಳಷ್ಟು ತಾವರೆ ತೋಟಗಳನ್ನು ಬೆಳೆಸಿ ಮತ್ತು ಅದರ ಸಂಗಡ ಮೀನುಗಾರಿಕೆಯನ್ನು ನಡೆಸಿ ಅದನ್ನೇ ಜೀವನಕ್ಕೆ ಅವಲಂಬಿಸಿರುವ ನೂರಾರು ಕುಟುಂಬಗಳನ್ನು ಅಲ್ಲಿ ನೋಡಬಹುದು.
ಕಾಂಬೋಡಿಯಾ ಒಂದು ಅಭಿವೃದ್ಧಿ ಹೊಂದುತ್ತಿರುವ ದೇಶವಾದರೂ ದೇಶದ ಅಭಿವೃದ್ಧಿ, ಜೀವನ ಮಟ್ಟವನ್ನು ಮತ್ತು ಜೀವನ ಪಥವನ್ನು ನೋಡಿದರೆ, ಅಭಿವೃದ್ಧಿ ಹೊಂದಿದ ದೇಶದಂತೆ ಕಾಣುತ್ತದೆ. ಅಲ್ಲಿಯೂ ನಮ್ಮ ದೇಶದಂತೆ ಮಳೆ ಸುರಿಯುತ್ತಿದ್ದರೂ ರಸ್ತೆ ಗುಂಡಿಗಳಾಗಲೀ, ರಸ್ತೆ ಅಪಘಾತವಾಗಲೀ ಕಾಣುತ್ತಿಲ್ಲ. ರಸ್ತೆಗಳಲ್ಲಿ ಹಂಪ್‌ಗ್ಳು, ಸ್ಪೀಡ್ ಬ್ರೇಕರ್‌ಗಳು ಕಾಣುವುದಿಲ್ಲ. ಪೊಲೀಸರು ಅಪರೂಪದ ಅತಿಥಿಗಳು ಮಾತ್ರ. ಅಲ್ಲಿ ಜನರ ನೀತಿ ನಿಯಮಾವಳಿಗಳು, ಶಿಸ್ತು ಹಾಗೂ ಜನರಲ್ಲಿ, ಅದರಲ್ಲೂ ಮುಖ್ಯವಾಗಿ ಮಹಿಳೆಯರಲ್ಲಿ ಕಾಣುವ ಕಾರ್ಯ ನಿಷ್ಠೆ ಸ್ತುತ್ಯರ್ಹ. ದಿನನಿತ್ಯದ ಜೀವನದಲ್ಲಿ ಭ್ರಷ್ಟಾಚಾರ ಅತಿ ಕಡಿಮೆ ಎನ್ನಬಹುದು. ಸಾರ್ವಜನಿಕ ಹಿತಾಸಕ್ತಿಯಲ್ಲಿ ಸರಕಾರದ ಸದಾ ಎಚ್ಚರಿಕೆಯೇ ಇದಕ್ಕೆ ಕಾರಣ ಎನ್ನಲಾಗುತ್ತದೆ. ಹಾಗೆಯೇ ಸುಖೀ ಜೀವನಕ್ಕೆ ಗುಣಾತ್ಮಕ ಮೂಲಭೂತ ಸೌಕರ್ಯ ನೀಡುವ ನಿಟ್ಟಿನಲ್ಲಿ ಈ ದೇಶ ಮುಂಚೂಣಿಯಲ್ಲಿದೆ. ಜಿಡಿಪಿ ನಿಟ್ಟಿನಲ್ಲಿ ಭಾರತವು ಜಗತ್ತಿನ 7ನೇ ಅತಿ ದೊಡ್ಡ ಪ್ರವಾಸಿ ಆರ್ಥಿಕ ದೇಶ. ಸುಮಾರು 40.03 ಮಿಲಿಯನ್ ಉದ್ಯೋಗ ಸೃಷ್ಟಿಸಿ ಪ್ರವಾಸೋದ್ಯಮ ಉದ್ಯೋಗ ಸೃಷ್ಟಿಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. 2016ರಲ್ಲಿ ಭಾರತವು 9 ಮಿಲಿಯ ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಿದ್ದು, ಜಾಗತಿಕವಾಗಿ 7ನೇ ಸ್ಥಾನದಲ್ಲಿದೆ. ದೇಶದ ಜಿ.ಡಿ.ಪಿ.ಗೆ 9.60% ನೀಡುವ ಈ ಉದ್ಯಮ ದೇಶದ ಆದಾರಕ್ಕೆ 14.10 ಟ್ರಿಲಿಯನ್ ರೂಪಾಯಿ ಅಥವಾ 2085.90 ಬಿಲಿಯನ್ ಡಾಲರ್ ನೀಡುತ್ತಿದೆ. 7516 ಕಿ.ಮೀ ಕರಾವಳಿ, 1,08,000 ದೇವಸ್ಥಾನಗಳು, ಸಾವಿರಾರು ನದಿಗಳು-ಸರೋವರಗಳು, ನೂರಾರು ಪರ್ವತ ಶ್ರೇಣಿಗಳು, ವೈವಿಧ್ಯಮಯ ಸಂಸ್ಕೃತಿ, ಜೀವನ ಪದ್ಧತಿ, ಭಾಷೆಯಿಂದ ತುಂಬಿರುವ ನಮ್ಮ ದೇಶ ಜಗತ್ತನ್ನೇ ದಿಗ್ಭ್ರಮೆಗೊಳಿಸುವ ಪ್ರವಾಸೋದ್ಯಮ ದೇಶವಾಗಿ ಬೆಳೆಯಬಹುದಿತ್ತು. ದೇಶದ ಬೊಕ್ಕಸಕ್ಕೆ ಗಮನಾರ್ಹ ಕೊಡುಗೆ ನೀಡಬಹುದಿತ್ತು ಮತ್ತು ಲಕ್ಷಾಂತರ ಉದ್ಯೋಗಗಳನ್ನು ಒದಗಿಸಬಹುದಿತ್ತು. ಆದರೆ, ಬದ್ಧತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನಾವು ಬಹಳ ಹಿಂದೆ ಉಳಿದಿದ್ದೇವೆ,
ಎ.ಬಿ. ಶೆಟ್ಟಿ ಬೆಂಗಳೂರು