Advertisement

ಪ್ರವಾಸೋದ್ಯಮ ಅಭಿವೃದ್ಧಿ ,ಉದ್ಯೋಗ ಸೃಷ್ಟಿಗೆ ಆದ್ಯತೆ

06:15 AM Mar 20, 2018 | Team Udayavani |

ಕಾರ್ಕಳ: ವಿಪಕ್ಷದ ಶಾಸಕನಾಗಿ ಕಾರ್ಕಳ ತಾಲೂಕನ್ನು ವಿವಿಧ ಆಯಾಮಗಳಲ್ಲಿ ಅಭಿವೃದ್ಧಿ ಪಡಿಸಿದ್ದೇನೆ. ವಿಧಾನಸಭೆಗೆ ಒಂದು ದಿನವೂ ಗೈರು ಹಾಜರಾಗದೆ ಕಾರ್ಕಳದ ಜನತೆಯ ಧ್ವನಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಸ್ಥಳೀಯ ಮತ್ತು ರಾಜ್ಯದ ಸಮಸ್ಯೆ, ಹಿಂದುತ್ವದ ವಿಚಾರ, ಸರಕಾರದ ಆದೇಶಗಳಿಂದ ಜನರಿಗಾಗುವ ಸಮಸ್ಯೆಯ ಬಗ್ಗೆ ವಿಧಾನಸಭೆಯಲ್ಲಿ ಹೆಚ್ಚು ಮಾತನಾಡಿದ ಹೆಮ್ಮೆ ನನಗಿದೆ…ಇದು ಕಾರ್ಕಳ ಶಾಸಕ, ವಿಪಕ್ಷ ಮುಖ್ಯ ಸಚೇತಕ ವಿ. ಸುನಿಲ್‌ ಕುಮಾರ್‌ ಅವರ ಮಾತುಗಳು.

Advertisement

ಕ್ಷೇತ್ರದಲ್ಲಿ ಶಾಶ್ವತ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಮುಂದಿನ 25 ವರ್ಷಗಳಿಗೆ ಅನುಕೂಲವಾಗುವಂಥ ಯೋಜನೆಗಳನ್ನು ಇಟ್ಟು ಕೊಂಡು ಅಭಿವೃದ್ಧಿಪಡಿಸಲು ಮುಂದಾಗಿದ್ದೇನೆ. ತಾಲೂಕಿನಾದ್ಯಂತ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. 2013ರಲ್ಲಿ ಕಾರ್ಕಳದ ರಸ್ತೆಗಳು ಹೇಗಿತ್ತು- ಈಗ ಹೇಗಿವೆ ಎಂಬುದನ್ನು ಗಮನಿಸಬಹುದು. ಆದ್ಯತೆ ನೆಲೆಯಲ್ಲಿ ಒಳ ರಸ್ತೆಗಳ ಅಭಿವೃದ್ಧಿಯಾಗುತ್ತಿದೆ ಎನ್ನುತ್ತಾರೆ ಸುನಿಲ್‌.

ತಾಲೂಕಿನ 3 ಪ್ರಮುಖ ನದಿಗಳು ಹಾಗೂ ಅವುಗಳ ಉಪನದಿಗಳಿಗೆ ಹೊಸ ಮಾದರಿಗೆ ತಕ್ಕಂತೆ 57 ಅಣೆಕಟ್ಟು ಕಟ್ಟಲಾಗಿದೆ. ರಾಜ್ಯದ ಬೇರೆ ಯಾವುದೇ ಕ್ಷೇತ್ರದಲ್ಲಿ 57 ಅಣೆಕಟ್ಟು ನಿರ್ಮಿಸಿದ ಉದಾಹರಣೆ ಇಲ್ಲ. 32 ಸೇತುವೆಗಳನ್ನು ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ಆವಶ್ಯಕತೆಯಿರುವಲ್ಲಿ ಆಯ್ಕೆ ಮಾಡಿಕೊಂಡು ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯ ಹೆದ್ದಾರಿಗಳಲ್ಲಿದ್ದ 3 ಮುಳುಗು ಸೇತುವೆ, ವ್ಯವಸ್ಥಿತವಾದ ಈಜುಕೊಳ, ಆನೆಕೆರೆಗೆ ವಾಕಿಂಗ್‌ ಟ್ರ್ಯಾಕ್‌, 6 ಕೋ.ರೂ. ವೆಚ್ಚದಲ್ಲಿ ವಿವಿಧ ಸೌಲಭ್ಯವುಳ್ಳ ತಾಲೂಕು ಆಸ್ಪತ್ರೆ ನಿರ್ಮಾಣವಾಗಿದೆ.

ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುನಿ ಯಾಲು, ಬಜಗೋಳಿ, ಬೈಲೂರು, ಸಾಣೂರು ಪ.ಪೂ. ಕಾಲೇಜುಗಳಿಗೆ ಹೆಚ್ಚುವರಿ ಕೊಠಡಿ, ಕಾರ್ಕಳದ ಬಿಬಿಎಂ ಕಾಲೇಜು ಮತ್ತು ಹೆಬ್ರಿ ಕಾಲೇಜನ್ನು 1.5. ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ ಗೊಳಿಸಲಾಗಿದೆ. ಸರಕಾರಿ ಶಾಲೆಗಳಿಗೆ ಬೇಡಿಕೆಗೆ ತಕ್ಕಂತೆ ಆಗದಿದ್ದರೂ, ಅಗತ್ಯವಿರುವಲ್ಲಿ ಒದಗಿಸಿದ್ದೇವೆ ಎನ್ನುವ ಮಾತು ಅವರದ್ದು.

ತಾಲೂಕಿನಲ್ಲಿ ವ್ಯವಸ್ಥಿತವಾದ ಕೈಗಾರಿಕಾ ಪ್ರದೇಶ ವಿಲ್ಲ. ಹೀಗಾಗಿ ಮಿಯ್ನಾರಿನಲ್ಲಿ 12 ಎಕ್ರೆ ಜಾಗದಲ್ಲಿ 4 ಕೋ.ರೂ. ವೆಚ್ಚದಲ್ಲಿ ಕೈಗಾರಿಕಾ ವಲಯ ಮಾಡ ಲಾಗಿದೆ. ಮೊದಲ ಹಂತದ ವಲಯ ನಿರ್ಮಾಣ ಗೊಂಡಿದೆ. 1.5. ಕೋ.ರೂ. ವೆಚ್ಚದಲ್ಲಿ ಕಾರ್ಕಳದಲ್ಲಿ ಪ್ರವಾಸಿ ಮಂದಿರ ನಿರ್ಮಾಣವಾಗಿದೆ. ಕ್ಷೇತ್ರಕ್ಕೆ ರಾಜ್ಯ ದಿಂದ ಅಂದಾಜು 1,500 ಕೋ. ರೂ.,  ಕೇಂದ್ರ ದಿಂದ 263 ಕೋ.ರೂ. ರಸ್ತೆ ಮತ್ತು ಸೇತುವೆ ಗಾಗಿ ಸಿಆರ್‌ಎಫ್ ಯೋಜನೆಯಲ್ಲಿ ಅನುದಾನ ತರಲಾಗಿದೆ ಎನ್ನುತ್ತಾರವರು. 

Advertisement

15-20 ವರ್ಷಗಳ ಹಿಂದೆ ಸರಕಾರಿ ಜಾಗದಲ್ಲಿ ಮನೆ ಕಟ್ಟಿದವರಿಗೆ ಹಕ್ಕು ಪತ್ರಗಳನ್ನು ನೀಡುವಂತಹ ಕಾರ್ಯವನ್ನು ಆಂದೋಲನದ ರೀತಿಯಲ್ಲಿ ನಡೆಸ ಲಾಗಿದೆ. ನಿವೇಶನ ರಹಿತ ನೂರಾರು ಕುಟುಂಬ ಗಳಿಗೆ ನಿವೇಶನ ಕಾದಿರಿಸಲಾಗಿದೆ. 3,000 ಮಂದಿಗೆ ಹಕ್ಕುಪತ್ರ ವಿತರಣೆಯಾಗಿದೆ. ಡೀಮ್ಡ್ ಫಾರೆಸ್ಟ್‌ ಸಮಸ್ಯೆಯ ಕಾರಣದಿಂದ ಬಾಕಿ ಉಳಿದಿರುವುದಕ್ಕೂ ನಕ್ಷೆ ತಯಾರಾಗಿದೆ. ಸರಕಾರಿ ಮಟ್ಟದಲ್ಲಿ ಸಮಸ್ಯೆ ಬಗೆಹರಿದ ಎರಡೇ ದಿನಗಳಲ್ಲಿ ಹಕ್ಕುಪತ್ರ ನೀಡಲಾಗುತ್ತದೆ. ಅರಣ್ಯ ಭಾಗದ ಕಬ್ಬಿನಾಲೆ, ಮೇಗದ್ದೆ ಭಾಗಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿದೆ. 

ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ 
ಖಾಸಗಿ ಸಂಸ್ಥೆಗಳ, ಜನರ ಸಹಭಾಗ್ವಿತ್ವದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಉದ್ಯೋಗ ಮೇಳ ನಡೆಸಿ 630 ಜನರಿಗೆ ಉದ್ಯೋಗ ಒದಗಿಸಲಾಗಿದೆ. 1,300 ಆಟೋ ಚಾಲಕರಿಗೆ ಹೆಲ್ತ್‌ ಕಾರ್ಡ್‌, ಸಿಗಡಿ ಕೆರೆ ಅಭಿವೃದ್ಧಿ, ಇನ್ನಾದಲ್ಲಿ 2 ಹಾಗೂ ನಂದಳಿಕೆಯಲ್ಲಿ 1 ಕೆರೆ, ಹಿರಿಯಂಗಡಿಯ ಕಲ್ಲಮನೆ ಕೆರೆ ಅಭಿವೃದ್ಧಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಸರ್ಕಲ್‌ಗ‌ಳನ್ನು ಅಭಿವೃದ್ಧಿ ಮಾಡಿ, ಮಹಾಪುರುಷರ ಪುತ್ಥಳಿಯನ್ನು ಹಾಕುವ ಯೋಜನೆ ರೂಪಿಸಲಾಗಿದೆ. ಹೀಗೆ ಖಾಸಗಿಯಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ ನೆಮ್ಮದಿ ಇದೆ. 

ಮಂಕೀ ಪಾರ್ಕ್‌ ಸಾಧ್ಯವಾಗಿಲ್ಲ…
ಕಾಡುಪ್ರಾಣಿಗಳ ಹಾವಳಿ, ಮಂಗಗಳ ಹಾವಳಿ ತಪ್ಪಿಸಲು ಶಾಶ್ವತ ಯೋಜನೆ ಕೈಗೊಳ್ಳಲು ಸಾಧ್ಯವಾಗಿಲ್ಲ. ಸರಕಾರದ ಮಟ್ಟದಲ್ಲಿ ಯೋಜನೆಗಳೂ ಇಲ್ಲ. ಮಂಗಗಳ ಹಾವಳಿ ತಪ್ಪಿಸಲು ಮಂಕಿ ಪಾರ್ಕ್‌ ಮಾಡುವ ಯೋಚನೆಯಿತ್ತು. ಅದನ್ನು ಮುಂದಿನ ವರ್ಷ ಪ್ರಾರಂಭಿಸುವ ಯೋಚನೆಯಿದೆ. ಗ್ರಾಮೀಣ ಭಾಗದ ರಸ್ತೆಗಳು ಇನ್ನಷ್ಟು ಉತ್ತಮ ರೀತಿಯಲ್ಲಿ ದುರಸ್ತಿಗೊಳ್ಳಬೇಕಿತ್ತು. ಗಾಮೀಣಾಭಿವೃದ್ಧಿ ಇಲಾಖೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನವೂ ಬಂದಿಲ್ಲ. ಹೀಗಾಗಿ ಒಳ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಈ ಅವಧಿಯಲ್ಲಿ ಸಾಧ್ಯವಾಗಿಲ್ಲ ಎಂಬ ಬೇಸರವೂ ಸುನಿಲ್‌ ಅವರಿಗಿದೆ.

ಲಕ್ಷ  ಸಸಿ-ಇಂಗು ಗುಂಡಿ ಗುರಿ
25,000 ಸಸಿ ನೆಡುವ, 25,000 ಇಂಗುಗುಂಡಿ ನಿರ್ಮಿಸುವ ಕಾರ್ಯ ಮೂರು ವರ್ಷದಿಂದ ನಡೆಯು ತ್ತಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಒಂದು ಲಕ್ಷ ಸಸಿ ನೆಡಲು ಮತ್ತು ಒಂದು ಲಕ್ಷ ಇಂಗುಗುಂಡಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. 300 ಸರಕಾರಿ ಬೋರ್‌ವೆಲ್‌ಗ‌ಳಿಗೆ ಪಂಚಾಯತ್‌ ಅನು ದಾನದಿಂದ ಜಲ ಮರುಪೂರಣ ಮಾಡ ಲಾಗಿದೆ.  ಸಾರ್ವಜನಿಕರ ಸಹಭಾಗಿತ್ವದಲ್ಲಿ ಇಂಗುಗುಂಡಿ ನಿರ್ಮಿಸಲಾಗಿದೆ. ಹೀಗೆ ಪರಿಸರದ ರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗಿದೆ.

ಪ್ರವಾಸೋದ್ಯಮ- ಉದ್ಯೋಗಾವಕಾಶ
ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿರುವ ಕಾರ್ಕಳವನ್ನು ಪ್ರವಾಸಿ ತಾಣವನ್ನಾಗಿ ರೂಪಿಸುವ ಯೋಚನೆ ಇದೆ. ಇಲ್ಲಿಗೆ ಆಗಮಿಸಿದ ಪ್ರವಾಸಿಗರು ಒಂದೆರಡು ದಿನ ಇಲ್ಲೇ ಉಳಿಯುವಂತೆ ರೂಪಿಸಬೇಕು. ಕೂಡ್ಲು ಫಾಲ್ಸ್‌ನಿಂದ ಆರಂಭವಾಗಿ, ಕವಿ ಮುದ್ದಣನ ಊರು ನಂದಳಿಕೆಯ ವರೆಗೂ ಹತ್ತಾರು ಪ್ರೇಕ್ಷಣಿಯ ಸ್ಥಳಗಳನ್ನು ಒಳಗೊಂಡು ಕಾರ್ಕಳ ದರ್ಶನ ಎನ್ನುವ ಹೆಸರಿನಡಿ ರೂಪಿಸಲು ಚಿಂತನೆ ನಡೆಸಲಾಗಿದೆ. ಶಾಸಕನಾಗಿ ಆಯ್ಕೆಯಾದರೆ ಮುಂದಿನ ವರ್ಷದಿಂದ ಆ ಕೆಲಸ ಪ್ರಾರಂಭವಾಗಲಿದೆ ಎನ್ನುತ್ತಾರೆ ಸುನಿಲ್‌. 

ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯಬೇಕು ಎನ್ನುವ ದೃಷ್ಟಿಯಿಂದ ಕಾರ್ಕಳಕ್ಕೆ ಉದ್ಯಮಗಳನ್ನು ತರುವ ಚಿಂತನೆ ನಡೆಸಲಾಗಿದೆ. ಪಿಯುಸಿ, ಎಸ್ಸೆಸೆಲ್ಸಿ  ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಹಿತ ಇತರ ಕೋರ್ಸ್‌ ಮಾಡಿದ ವಿದ್ಯಾರ್ಥಿಗಳಿಗೂ ಉದ್ಯೋಗ ಲಭ್ಯವಾಗಬೇಕು. ತಾಂತ್ರಿಕ ಕಾರಣದಿಂದ ಬಾಕಿ ಇರುವ ಹಕ್ಕುಪತ್ರ, ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಕಾರ್ಯ ಮಾಡಬೇಕು. ಸ್ವತ್ಛ ಕಾರ್ಕಳಕ್ಕೆ ವಿಶೇಷ ಆದ್ಯತೆ ನೀಡಬೇಕು ಎನ್ನುವ ಚಿಂತನೆಯಿದೆ. ಹೀಗೆ ದೂರದೃಷ್ಟಿಯಿಟ್ಟು  ಅಭಿವೃದ್ಧಿ ಸುಂದರ ಕಾರ್ಕಳ ನಿರ್ಮಾಣ ಮಾಡುವ ಯೋಜನೆ ಇದೆ ಎನ್ನುವುದು ಶಾಸಕ ಸುನಿಲ್‌ ಕುಮಾರ್‌ ಅವರ ಮಾತು.

– ಜಿವೇಂದ್ರ ಶೆಟ್ಟಿ  ಗರ್ಡಾಡಿ

Advertisement

Udayavani is now on Telegram. Click here to join our channel and stay updated with the latest news.

Next