Advertisement

ವೀರಶೈವ ಧರ್ಮಕ್ಕಾಗಿ ಟೂರ್‌ : ಐವರು ಸಚಿವರ ತಂಡದಲ್ಲಿ ಬಿರುಕು 

08:20 AM Jul 27, 2017 | |

ಬೆಂಗಳೂರು: ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಸಂಬಂಧ ಅಬಿಪ್ರಾಯ ಮೂಡಿಸಲು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾದ ಐವರು ಸಚಿವರ ತಂಡದಲ್ಲಿ ಬಿರುಕು ಉಂಟಾಗಿದೆ.ತಂಡದಲ್ಲಿ ಒಬ್ಬರಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌, “ಅಭಿಪ್ರಾಯ ಮೂಡಿಸಲು ರಾಜ್ಯ ಪ್ರವಾಸ ಮಾಡುವ ಅವಶ್ಯಕತೆಯೇ ಇಲ್ಲ ‘ಎಂದು ಹೇಳಿದ್ದಾರೆ.

Advertisement

ಅಷ್ಟೇ ಅಲ್ಲ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಇತರ ಸಚಿವರಿಂದಲೂ ಮಂತ್ರಿ ಸ್ಥಾನದಲ್ಲಿದ್ದು  ಪ್ರತ್ಯೇಕ ಧರ್ಮಕ್ಕಾಗಿ  ಟೂರ್‌ ಮಾಡಲು ಅಪಸ್ವರ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

ಸಚಿವರ ಪ್ರವಾಸದ ಬಗ್ಗೆ ಬಸವರಾಜ ರಾಯರೆಡ್ಡಿ ಅವರು ವಿಷಯ ಇನ್ನೂ ಚರ್ಚಾ ಹಂತದಲ್ಲಿರುವಗಲೇ ಏಕ ಪಕ್ಷೀಯ ತೀರ್ಮಾನ ತಗೆದುಕೊಂಡು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.ಇದು ಸರಿಯಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆ ನಡುವೆ ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌,ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡುವ ಸಂಬಂಧ ಅಭಿಪ್ರಾಯ ಮೂಡಿಸಲು ಐವರು ಸಚಿವರ ತಂಡ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಕುರಿತು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ನನ್ನೊಂದಿಗೆ ಮಾತನಾಡಿಲ್ಲ, ನಾನೂ ಕೂಡ ಅವರೊಟ್ಟಿಗೆ ಈ ಬಗ್ಗೆ ಚರ್ಚಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಅಷ್ಟಕ್ಕೂ ಅಭಿಪ್ರಾಯ ಮೂಡಿಸುವುದು ಸರ್ಕಾರದ ಕೆಲಸವಲ್ಲ. ನಾನೊಬ್ಬ ಸಚಿವನಾಗಿ ಆ ಕೆಲಸ ಮಾಡಲಿಕ್ಕೂ ಬರುವುದಿಲ್ಲ. ವಿವಾದ ಮೈಮೇಲೆ ಎಳೆದುಕೊಳ್ಳುವುದು ನನಗೆ ಮೊದಲಿಂದಲೂ ಇಷ್ಟ ಇಲ್ಲ. ಆದ್ದರಿಂದ ಪ್ರವಾಸ ಮಾಡುವ ಅಗತ್ಯವಿಲ್ಲ ಅನ್ನುವುದು ನನ್ನ ವೈಯುಕ್ತಿ ಅಭಿಪ್ರಾಯ. ಹಾಗಂತ ಈ ವಿಚಾರದಲ್ಲಿ ಅನಗತ್ಯ ಗೊಂದಲ ನಿರ್ಮಾಣ ಆಗುವುದು ಅಥವಾ ಸಮಾಜದಲ್ಲಿ ಒಡಕು ಉಂಟಾಗುವುದನ್ನೂ ಸರ್ಕಾರ ಬಯಸುವುದಿಲ್ಲ. ಅಲ್ಲದೇ ಈ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷದ ಅಥವಾ ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ. ವಾಸ್ತವ ಗೊತ್ತಿಲ್ಲದೇ ಬಿಜೆಪಿಯವರು ಆಧಾರರಹಿತ ಮಾತುಗಳನ್ನಾಡುತ್ತಿದ್ದಾರೆ. ಧರ್ಮದ ವಿಚಾರ ಬಂದಾಗ ಪಕ್ಷ ಬರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪಕ್ಷಾತೀತ ಒಗ್ಗಟ್ಟು ಪ್ರದರ್ಶಿಸಬೇಕಾಗುತ್ತದೆ ಎಂದರು

Advertisement

ಸರ್ವ ಒಪ್ಪಿತ ನಿಲುವು: ವೀರಶೈವ-ಲಿಂಗಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಬೇಕು ಅನ್ನುವುದು ಇಡೀ ಸಮಾಜದ ಒಕ್ಕೊರಲ ಹಾಗೂ ಸರ್ವಸಮ್ಮತವಾದ ಒಪ್ಪಿತ ನಿಲುವು. ಹಾಗಾಗಿ ಈ ಬಗ್ಗೆ ರಾಜ್ಯ ಪ್ರವಾಸ ಮಾಡಿ ಅಭಿಪ್ರಾಯ ಮೂಡಿಸುವ ಅವಶ್ಯಕತೆ ಇಲ್ಲ. ವೀರಶೈವ ಮಹಾಸಭೆ 40 ವರ್ಷಗಳ ಹಿಂದೆಯೇ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಬೇಕು ಎಂದು ಮನವಿ ಮಾಡಿತ್ತು. ಇದು ಇದ್ದಕ್ಕಿಂದ್ದಂತೆ ಈಗ ಹುಟ್ಟಿಕೊಂಡ ವಿಷಯ ಅಲ್ಲ. ಇತ್ತಿಚಿಗೆ ವೀರಶೈವ ಮಹಾಸಭಾದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಈ ವಿಷಯ ಪ್ರಸ್ತಾಪ ಆದಾಗ, ಎಲ್ಲರದ್ದೂ ಒಕ್ಕೊರಲ ಅಭಿಪ್ರಾಯ ಆಗಿದ್ದರೆ, ಪ್ರತ್ಯೇಕ ಧರ್ಮದ ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಾನು ತಯಾರಿದ್ದೇನೆ ಎಂದು ಹೇಳಿದ್ದರು. ಕೆಲವರು ಪರ-ವಿರುದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಅದೆಲ್ಲವೂ ಅವರವರ ವೈಯುಕ್ತಿಕ ಅಭಿಪ್ರಾಯ. ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು ಅನ್ನುವುದು ಇಡೀ ಸಮಾಜದ ಒಮ್ಮತದ ಅಭಿಪ್ರಾಯವಾಗಿದೆ.  ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು ಅನ್ನುವುದು ನನ್ನ ಬಲವಾದ ಪ್ರತಿಪಾದನೆ ಆಗಿದೆ ಎಂದು ಶರಣಪ್ರಕಾಶ್‌ ಪಾಟೀಲ್‌ ಇದೇ ವೇಳೆ ತಿಳಿಸಿದರು.

“ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ವೀರಶೈವ ಮಹಾಸಭಾ 40 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಣಯದಲ್ಲಿ ಮಾತೆ ಮಹಾದೇವಿಯವರೂ ಒಬ್ಬ ಭಾಗಿದಾರರು. ಇದು ವೀರಶೈವ ಮಹಾಸಭಾದ ಸಭೆಯ ನಡಾವಳಿಯಲ್ಲಿ ದಾಖಲಾಗಿದೆ. ಆದರೆ, ಇಂದು ಲಿಂಗಾತಯಕ್ಕೆ ಮಾತ್ರ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಬೇಕು ಎಂದು ಅವರು ಯಾವ ಅರ್ಥದಲ್ಲಿ ಹೇಳುತ್ತಿದ್ದಾರೆ ನನಗೆ ಗೊತ್ತಿಲ್ಲ’.
– ಡಾ. ಶರಣಪ್ರಕಾಸ ಪಾಟೀಲ್‌, ವೈದ್ಯಕೀಯ ಶಿಕ್ಷಣ ಸಚಿವ.

“ವೀರಶೈವ-ಲಿಂಗಾಯತ ಹಿಂದೂ ಧರ್ಮದ ಭಾಗ ಅಲ್ಲ. ಪತ್ಯೇಕ ಧರ್ಮ ಆಗುವ ಎಲ್ಲ ಗುಣಲಕ್ಷಣಗಳು ವೀರಶೈವ-ಲಿಂಗಾಯತಕ್ಕಿದೆ. ಇಲ್ಲ ಅನ್ನುವವರು ಚರ್ಚೆಗೆ ಬರಲಿ. ರಾಜಕೀಯ ಲಾಭಕ್ಕಾಗಿ ಅಥವಾ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಪ್ರತ್ಯೇಕ ಧರ್ಮದ ಬೇಡಿಕೆ ಇದೆ ಅನ್ನುವುದು ತೀರಾ ಸಣ್ಣತನದ ಆಲೋಚನೆ. ಮುಂದಿನ ಪೀಳಿಗೆಯನ್ನು ಬಸವತತ್ವ ಮತ್ತು ವಚನ ಪರಂಪರೆಯೊಂದಿಗೆ ಜೋಡಿಸಿಡಲು ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಲೇಬೇಕಾಗಿದೆ’.
– ಡಾ. ಶರಣಪ್ರಕಾಶ್‌ ಪಾಟೀಲ್‌, ವೈದ್ಯಕೀಯ ಶಿಕ್ಷಣ ಸಚಿವ.

ಸಂಪುಟದಲ್ಲೂ ಪ್ರತ್ಯೇಕ ಧರ್ಮದ ಮಾನ್ಯತೆ ಚರ್ಚೆ
ಬೆಂಗಳೂರು
: ವೀರಶೈವ- ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಂಬಂಧ ಎದ್ದಿರುವ ವಿವಾದ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ಗಂಭೀರ ಚರ್ಚೆ ನಡೆಯಿತು ಎಂದು ಮೂಲ ಗಳು ತಿಳಿಸಿವೆ.

ವಿವಾದದಿಂದ ಕಾಂಗ್ರೆಸ್‌ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ತೊಂದರೆಯಾಗಬಹುದಾ ಎಂಬ ಆತಂಕವನ್ನು ಕೆಲವರು
ವ್ಯಕ್ತಪಡಿಸಿದರು. ಆದರೆ, ರಾಜ್ಯ ಸರ್ಕಾರ ಸ್ವಯಂ ಪ್ರೇರಿತ ವಾಗಿ ಆ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ವೀರಶೈವ ಮಹಾಸಭಾ ಸೇರಿ ಆ ಸಮುದಾಯದ ನಾಯಕರೇ ಪ್ರಸ್ತಾವನೆ ಸಲ್ಲಿಸಿದ್ದು, ಅದನ್ನು ಪರಿಶೀಲನೆ ಮಾಡಲಾಗುವುದು ಎಂದರೆ ತಪ್ಪೇನಿಲ್ಲ ಎಂಬ ಸಮಜಾಯಿಷಿ ಕೆಲವರಿಂದ ಬಂತು ಎನ್ನಲಾಗಿದೆ. ಒಟ್ಟಾರೆ, ವಿಷಯ ಯಾವ ಸ್ವರೂಪ ಪಡೆದುಕೊಳ್ಳಲಿದೆ. ಮಠಾಧೀಶರು ಹಾಗೂ ಸಮುದಾಯದವರು ಯಾವ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಗಮನಿಸಿ ಕಾದು ನೋಡೋಣ ಎಂದು ವಿಷಯಕ್ಕೆ ತೆರೆ ಎಳೆಯಲಾಯಿತು ಎಂದು ಹೇಳಲಾಗಿದೆ.

“ಬಹುಸಂಖ್ಯಾತರ ಅಭಿಪ್ರಾಯದಂತೆ ಕ್ರಮ’
ಬೆಂಗಳೂರು:
ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ ಸಿಗಬೇಕು ಎಂದು ಬಯಸುವುದರಲ್ಲಿ ತಪ್ಪೇನೂ ಇಲ್ಲ.ಸಮುದಾಯದ ಮಠಾಧಿಪತಿಗಳು, ಮುಖಂಡರು,ಪ್ರಮುಖರ ಅಭಿಪ್ರಾಯ ಪಡೆದು ಬಹುಸಂಖ್ಯಾತರ ಅಭಿಪ್ರಾಯಕ್ಕೆ ಪೂರಕವಾಗಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಎಚ್‌. ಆಂಜನೇಯ ಹೇಳಿದರು. ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರ ಸಂಬಂಧ ಮುಖ್ಯಮಂತ್ರಿ ಕಚೇರಿಯಿಂದ ಪತ್ರ ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು. ಇದು ಭಾವನಾತ್ಮಕ ವಿಚಾರವಾಗಿದ್ದು, ಎಲ್ಲರ ಅಭಿಪ್ರಾಯ, ಸಲಹೆಯನ್ನು ಸರ್ಕಾರ ಪಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next