Advertisement

Lok Sabha Election: ರಾಯಚೂರು-ಐದು ದಶಕಗಳ ಬಳಿಕ ಲಿಂಗಾಯತರ “ಕೈ’ಗೆ ಚುಕಾಣಿ!

03:56 PM Apr 03, 2024 | Team Udayavani |

ಉದಯವಾಣಿ ಸಮಾಚಾರ
ರಾಯಚೂರು: ಸರಿಸುಮಾರು ಒಂದು ವರ್ಷದಿಂದ ಖಾಲಿಯಾಗಿದ್ದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಎಂಎಲ್‌ಸಿ ಬಸವರಾಜ್‌ ಪಾಟೀಲ್‌ ಇಟಗಿ ನೇಮಕವಾಗಿದೆ. ಐದು ದಶಕಗಳ ಬಳಿಕ ಲಿಂಗಾಯತರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಪ್ರಬಲ ಸಮುದಾಯದ ಮತಬೇಟೆಗೆ ಮುಂದಾದಂತಿದೆ.

Advertisement

ಕಳೆದ ವಿಧಾನಸಭೆ ಚುನಾವಣೆ ವೇಳೆ ಜಿಲ್ಲಾಧ್ಯಕ್ಷರಾಗಿದ್ದ ಬಿ.ವಿ. ನಾಯಕ ರಾಜೀನಾಮೆ ನೀಡಿದ್ದರು. ಆದರೆ, ಪಕ್ಷದ ನಾಯಕರು ಚುನಾವಣೆ ಗುಂಗಿನಲ್ಲಿದ್ದ ಕಾರಣ ಜಿಲ್ಲಾಧ್ಯಕ್ಷರ ನೇಮಕಕ್ಕೆ ಉತ್ಸಾಹ ತೋರಲಿಲ್ಲ. ಚುನಾವಣೆ ಬಳಿಕ ನೇಮಕ ಮಾಡಲಾಗುವುದು ಎಂದೇ ಹೇಳಲಾಗಿತ್ತು. ಇದೇ ಕಾರಣಕ್ಕೆ ಅನೇಕ ನಾಯಕರು ತಮಗೇ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ಕಾದು ಕುಳಿತಿದ್ದರು.

ಕಾಲ ಕಳೆದರೂ ಜಿಲ್ಲಾಧ್ಯಕ್ಷರ ನೇಮಕಾತಿ ವಿಚಾರ ಮಾತ್ರ ನನೆಗುದಿಗೆ ಬೀಳುತ್ತಲೇ ಬಂದಿತು. ಇದು ಪಕ್ಷದೊಳಗೆ ಅನೇಕ ನಾಯಕರ ಅಸಮಾಧಾನಕ್ಕೂ ಕಾರಣವಾಗಿತ್ತು. ಲೋಕಸಭೆ ಚುನಾವಣೆಯನ್ನೂ ಜಿಲ್ಲಾಧ್ಯಕ್ಷರ ಅನುಪಸ್ಥಿತಿಯಲ್ಲೇ ನಡೆಸುವುದೇ ಎಂಬ ಟೀಕೆಗಳು ವ್ಯಕ್ತವಾಗಿದ್ದರಿಂದ ಕೊನೆಗೆ ಪಕ್ಷದ ವರಿಷ್ಠರು ಅಧ್ಯಕ್ಷರ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.

ಲಿಂಗಾಯತರ ಬೆಂಬಲದ ಲೆಕ್ಕಾಚಾರ: ಈಚೆಗೆ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕವಾದಾಗ ಹಾಲಿ ಶಾಸಕ ಡಾ| ಶಿವರಾಜ್‌ ಪಾಟೀಲ್‌ ಅವರಿಗೆ ಮಣೆ ಹಾಕುವ ಮೂಲಕ ಲಿಂಗಾಯತರಿಗೆ ಆದ್ಯತೆ ನೀಡಿತ್ತು. ಕಾಂಗ್ರೆಸ್‌ ಕೂಡ ಅದೇ ಹಾದಿ ತುಳಿದಿದ್ದು, ಲಿಂಗಾಯತ ಸಮುದಾಯದ ಬಸವರಾಜ್‌ ಪಾಟೀಲ್‌ ಇಟಗಿ ಅವರಿಗೆ ಅವಕಾಶ ನೀಡಿದೆ. ಆ ಮೂಲಕ ಲೋಕಸಭೆ ಸಮರದಲ್ಲಿ ಲಿಂಗಾಯತ ಮತ ಸೆಳೆಯುವ ಯತ್ನ ಮಾಡಲಾಗಿದೆ ಎನ್ನಲಾಗುತ್ತಿದೆ. ಏಕೆಂದರೆ ಕಾಂಗ್ರೆಸ್‌ ಕಳೆದ ಐದು ದಶಕಗಳಿಂದ ಬೇರೆ ಬೇರೆ ಸಮುದಾಯಗಳಿಗೆ ಆದ್ಯತೆ ನೀಡುತ್ತಲೇ ಬಂದಿದ್ದು, ಲಿಂಗಾಯತರಿಗೆ ಅವಕಾಶವನ್ನೇ ಕೊಟ್ಟಿರಲಿಲ್ಲ. 50 ವರ್ಷಗಳ ಹಿಂದೆ ಬಸವಂತ್ರಾಯ ಗೌಡ ಎನ್ನುವವರಿಗೆ ಅವಕಾಶ ನೀಡಿತ್ತು.

ಅಸಮಾಧಾನದ ಹೊಗೆ: ಈಗಾಗಲೇ ಪಕ್ಷದಲ್ಲಿ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹೆಜ್ಜೆ ಹೆಜ್ಜೆಗೂ ಪ್ರಾಬಲ್ಯ ಸಾಧಿಸುವ ನಿಟ್ಟಿನಲ್ಲಿ ಬಣಗಳ ಸೆಣಸಾಟ ನಡೆದಿದೆ. ಯಾವುದೇ ಹುದ್ದೆಗೆ ನೇಮಕವಾದರೂ ಯಾರ ಬಣಕ್ಕೆ ಒಲಿದಿದೆ ಎಂಬ ಚರ್ಚೆ ನಡೆಯುತ್ತಿದೆ. ಈಗಲೂ ಅದೇ ಪುನರಪಿಯಾಗಿದ್ದು, ಜಿಲ್ಲಾಧ್ಯಕ್ಷ ಸ್ಥಾನಾಕಾಂಕ್ಷಿಗಳಲ್ಲಿ ಅಸಮಾಧಾನದ ಹೊಗೆ ತೇಲಾಡುತ್ತಿದೆ. ಕೆಲ ನಾಯಕರು ಬಹಿರಂಗವಾಗಿಯೇ ತಮಗೆ ಜಿಲ್ಲಾಧ್ಯಕ್ಷ ಸ್ಥಾನ ಬೇಕು ಎಂದು ಕೇಳಿಕೊಂಡಿದ್ದರು. ಇನ್ನೂ ಕೆಲವರು ನಾವು ಪಕ್ಷದ ನಿಷ್ಠಾವಂತರಾಗಿ ಅನೇಕ ವರ್ಷ ಕೆಲಸ ಮಾಡಿಕೊಂಡು ಬಂದಿದ್ದು, ನಮಗೆ ಕೊಡಿಸುವಂತೆ ಪರೋಕ್ಷವಾಗಿ ಒತ್ತಾಯ ಕೂಡ ಮಾಡುತ್ತಿದ್ದರು.

Advertisement

ಇನ್ನೂ ಕೆಲವರು ಪಕ್ಷವೇ ನಮ್ಮ ಸೇವೆ ಗುರುತಿಸಿ ಕೊಡಬಹುದು ಎಂದೇ ನಿರೀಕ್ಷೆಯಲ್ಲಿದ್ದರು. ಆದರೆ, ಎಲ್ಲರ ಲೆಕ್ಕಾಚಾರ ತಲೆ ಕೆಳಗಾಗಿದೆ. ಮಲ್ಲಿಕಾರ್ಜುನ ಯದ್ದಲದಿನ್ನಿ, ಹಿರಿಯ ಮುಖಂಡರಾದ ಕೆ. ಶಾಂತಪ್ಪ, ರುದ್ರಪ್ಪ ಅಂಗಡಿ, ಶರಣಪ್ಪ ಮೇಟಿ, ಎಂ. ಈರಣ್ಣ, ಬಸನಗೌಡ ಬಾದರ್ಲಿ ಸೇರಿದಂತೆ ಅನೇಕರು ಆಕಾಂಕ್ಷಿಗಳಾಗಿದ್ದರು. ಆದರೆ, ಬಸನಗೌಡ ಬಾದರ್ಲಿ, ಕೆ. ಶಾಂತಪ್ಪ, ರಾಮಣ್ಣ ಇರಬಗೇರಾ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸುವ ಮೂಲಕ ಸಮಾಧಾನಪಡಿಸುವ ಕೆಲಸ ಮಾಡಲಾಗಿದೆ ಎನ್ನಲಾಗುತ್ತಿದೆ.

ಐದು ದಶಕಗಳ ಬಳಿಕ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ. ಚುನಾವಣೆಗೂ ಜಿಲ್ಲಾಧ್ಯಕ್ಷರ ನೇಮಕಕ್ಕೂ ಸಂಬಂಧವಿಲ್ಲ. ಆದರೂ ನಾವು ಎಲ್ಲರನ್ನೂ ಸಂಘಟನೆ ಮಾಡುವ ಮೂಲಕ ಪಕ್ಷಕ್ಕಾಗಿ ಶ್ರಮಿಸಲಾಗುವುದು. ನಾನು ಇನ್ನೂ ಅಧಿಕಾರ ಸ್ವೀಕರಿಸಿಲ್ಲ. ಪದಗ್ರಹಣದ ಬಳಿಕ ಎಲ್ಲರ ಜತೆಗೂಡಿ ಸಭೆ ನಡೆಸಲಾಗುವುದು.
*ಬಸವರಾಜ್‌ ಪಾಟೀಲ್‌ ಇಟಗಿ,
ಕಾಂಗ್ರೆಸ್‌ ನೂತನ ಜಿಲ್ಲಾಧ್ಯಕ್ಷ

* ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next