ಶಿಕ್ಷಣ, ಮನೆಗೆಲಸ ಇವೆಲ್ಲದರ ನಡುವೆ ನನಗೆ ಪ್ರಕೃತಿ ಜತೆಗೊಂದಿಷ್ಟು ಸಮಯ ಕಳೆಯುವ ಹವ್ಯಾಸ, ಹಂಬಲ. ಮೂಲತಃ ಕಾಸರಗೋಡಿನಲ್ಲಿ ಹುಟ್ಟಿ ಬೆಳೆದ ನಾನು ಉನ್ನತ ಶಿಕ್ಷಣಕ್ಕಾಗಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದೆ. ಪ್ರತೀ ದಿನ ಬಸ್ ಪ್ರಯಾಣ ಹಿತವೆನಿಸಿದರೂ, ವಿಪರೀತ ಜನಸಂದಣಿ, ವಾಹನಗಳ ದಟ್ಟನೆಯ ಮಧ್ಯೆ ಏನೋ ಕಳೆದುಕೊಂಡಂತೆ, ನೆಮ್ಮದಿ ಕೆಡಿಸಿದಂತಿರುತ್ತಿತ್ತು.
ಹೀಗೆ ಒಂದು ದಿನ ರವಿವಾರ ಮನೆಮಂದಿ ಸೇರಿ ಸುತ್ತಾಡಿಕೊಂಡು ಬರೋಣವೆಂದು ನಾವು ಹೊರಟಿದ್ದು ಕಾಸರಗೋಡಿನ ಬೇಕಲ ಕೋಟೆಗೆ. ಮನೆಯಿಂದ ಕಾರಿನಲ್ಲಿ ಪ್ರಯಾಣ ಆರಂಭವಾಯಿತು. ದಾರಿ ಮಧ್ಯೆ ಪ್ರಕೃತಿ ಮನೋಹರ ಸೋಬಗನ್ನು ಆಸ್ವಾದಿಸುತ್ತಾ ಒಬ್ಬರನೊಬ್ಬರು ಕಾಲೆಳೆಯುತ್ತಾ ಹೊರಟೆವು.
ಹೇಗಿದೆ ಕೋಟೆ?
ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ಕೋಟೆಯು ಸ್ಥಳೀಯವಾಗಿ ಸಿಗುವ ಲ್ಯಾಟರೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಕೋಟೆಯು ಸುಮಾರು 12 ಮೀಟರ್ ಎತ್ತರದ ಬೃಹತ್ ಗೋಡೆಗಳನ್ನು ಹೊಂದಿದೆ. ಪ್ರದೇಶದಲ್ಲಿ ಸಮುದ್ರದಲೆಗಳ ಮೊರೆತ ಕಿವಿಗೆ ಇಂಪು ನೀಡುತ್ತದೆ. ಸಮುದ್ರ, ಸಮುದ್ರದ ಅಲೆಗಳು ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ. ಹೀಗೆ ಸಾಗಿದ ನಮ್ಮ ಪಯಣ ಓರ್ವ ಮಾರ್ಗದರ್ಶಕರ ಸಹಾಯದಿಂದ ಕೋಟೆಯ ಇತಿಹಾಸ ಜತೆಗೆ ಮತ್ತಿತರ ಮಾಹಿತಿಯನ್ನು ತಿಳಿದುಕೊಂಡೆವು. ಕಣ್ಣು ಹಾಯಿಸಿದಷ್ಟು ದೂರ ಹಸುರಿಂದ ತುಂಬಿದ್ದ ಪ್ರದೇಶ ಸ್ವರ್ಗದಂತೆ ಕಾಣುವುದಂತೂ ಸತ್ಯ.
ಇತಿಹಾಸ: ಬೇಕಲ್ ಕೋಟೆಯು ಕಾಸರಗೋಡು ಜಿಲ್ಲೆಯ (ಕೇರಳ) ಪಳ್ಳಿಕ್ಕರ ಗ್ರಾಮದಲ್ಲಿದೆ. ಇದು ಕೇರಳದ ಅತ್ಯುತ್ತಮ ಸಂರಕ್ಷಿತ ಕೋಟೆಗಳಲ್ಲಿ ಒಂದಾಗಿದೆ. ಕಾಸರಗೋಡು ಸುದೀರ್ಘ ಮತ್ತು ಸಮೃದ್ದ ಇತಿಹಾಸವನ್ನು ಹೊಂದಿದ್ದು, ವಿಜಯನಗರದ ಕಾಲದಿಂದಲೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬೇಕಲ ಕೋಟೆಯನ್ನು ಕೆಳದಿಯ ಶಿವಪ್ಪ ನಾಯಕ(1650 ) ನಿರ್ಮಿಸಿದರು. ಹಾಗೆಯೇ ಕೋಲತಿರಿ ರಾಜರ ಕಾಲದಲ್ಲಿ ಈ ಕೋಟೆಯು ಅಸ್ತಿತ್ವದಲ್ಲಿತ್ತು, ಕೋಲತಿರಿ
ಮತ್ತು ವಿಜಯನಗರ ಸಾಮ್ರಾಜ್ಯದ ಅವನತಿಯ ಬಳಿಕ ಈ ಪ್ರದೇಶವು ಇಕ್ಕೇರಿ ನಾಯಕರ ನಿಯಂತ್ರಣಕ್ಕೆ ಒಳಪಟ್ಟಿತು, ಬಳಿಕ ಈ ಕೋಟೆಯನ್ನು ಪುನರ್‌ನಿರ್ಮಿಸಲಾಗಿದೆ ಎನ್ನಲಾಗಿದೆ.
1763ರಲ್ಲಿ ಬೇಕಲ ಕೋಟೆಯು ಹೈದರ್ ಆಲಿಯ ವಶಕ್ಕೊಳಪಟ್ಟಿತ್ತು. ಟಿಪ್ಪು ಸುಲ್ತಾನ್ ಮಲಬಾರ್ ವಶಪಡಿಸಿಕೊಳ್ಳಲು ಸೇನಾ ದಂಡಯಾತ್ರೆಯನ್ನು ಕೈಗೊಂಡ ಸಂದರ್ಭ ಬೇಕಲ್ ಪ್ರಮುಖ ಸೇನಾ ಕೇಂದ್ರವಾಗಿ ಕಾರ್ಯನಿರ್ವಹಿಸಿತ್ತು. 1799ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡುವಾಗ ಟಿಪ್ಪು ಸುಲ್ತಾನನ ಮರಣದೊಂದಿಗೆ ಮೈಸೂರಿನ ನಿಯಂತ್ರಣ ಕೊನೆಗೊಂಡ ತರುವಾಯ ಈ ಕೋಟೆಯು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಯ ಅಧೀನಕ್ಕೊಳಪಟ್ಟಿತು ಎಂದು ಇತಿಹಾಸ ತಿಳಿಸುತ್ತದೆ.
ಅದೆಷ್ಟೇ ಕಷ್ಟ, ಒತ್ತಡ, ಮನಸ್ತಾಪಗಳಿರಲಿ ಒಂದು ಬಾರಿ ಪ್ರಕೃತಿಯ ಮಡಿಲು ಸೇರಿದಾಕ್ಷಣ ಸಿಗುವ ಖುಷಿ ದುಡ್ಡುಕೊಟ್ಟು ದುಬಾರಿ ವಸ್ತು ಖರೀದಿಸಿದರೂ ಸಿಗದು.
ಕಾವ್ಯಾ ಪ್ರಜೇಶ್
ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು