ಗಂಗಾವತಿ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಐದು ದಿನಗಳ ಕಠಿಣ ಲಾಕ್ ಡೌನ್ ಗೆ ಗಂಗಾವತಿ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಔಷಧಿ ಅಂಗಡಿ, ರಸಗೊಬ್ಬರ ಹಾಗೂ ಕೃಷಿ ಸಂಬಂಧಿತ ಕಚೇರಿಗಳು ಎಂದಿನಂತೆ ತೆರೆದಿವೆ. ಇಸ್ಲಾಂಪೂರ ರಸ್ತೆಯಲ್ಲಿ ಸಂಚಾರಿ ಪೊಲೀಸರು ಬೈಕ್ ಸವಾರರ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವುದು ಕಂಡು ಬಂತು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳುವವರನ್ನು ಅಧಿಕ ಸಮಯ ನಿಲ್ಲಿಸಿದ್ದರಿಂದ ರೋಗಿಗಳ ಸಂಬಂಧಿಕರು ಬೇಗನೆ ಬಿಡುವಂತೆ ಮನವಿ ಮಾಡಿಕೊಳ್ಳುವುದು ಕಂಡು ಬಂತು.
ಮಹಾವೀರ ವೃತ್ತ,ಗಾಂಧಿ ಚೌಕ್, ಓಎಸ್ ಬಿ ರಸ್ತೆ ಡೇಲಿ ಮಾರ್ಕೆಟ್ ಇಸ್ಲಾಂಪೂರ ರಸ್ತೆ ಸಿಬಿಎಸ್ಬಗಂಜ್, ಜುಲೈ ನಗರ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ನಗರಸಭೆ ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಪ್ರತಿ ವೃತ್ತದಲ್ಲಿ ಬಿಗಿಕ್ರಮ ಕೈಗೊಂಡಿದ್ದರು.
ಆದರೆ ಓಎಸ್ ಬಿ ರಸ್ತೆಯ ಒಂದೆರಡು ಬಟ್ಟೆ ಅಂಗಡಿಗಳ ಹತ್ತಿರ ಜನರು ನಿಂತಿರುವುದು ಕಂಡು ಬಂತು. ಅವರನ್ನು ಅಧಿಕಾರಿಗಳು ಪ್ರಶ್ನಿಸಿದಾಗ ಬ್ಯಾಂಕ್ ಗೆ ಬಂದಿರುವುದಾಗಿ ತಿಳಿಸಿದ್ದು ಅನುಮಾನ ಮೂಡಿಸಿತು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಬ್ಯಾಂಕ್ ಗಳ ಶಾಖೆಗಳಿವೆ. ಕಠಿಣ ಲಾಕ್ ಡೌನ್ ಸಂದರ್ಭದಲ್ಲಿ ಬ್ಯಾಂಕ್ ವಿಮಾ ಕಚೇರಿಗಳು ಕಾರ್ಯ ನಿರ್ವಾಹಿಸುತ್ತಿಲ್ಲ. ಕೆಲ ಬಟ್ಟೆ ಅಂಗಡಿಯವರು ಗ್ರಾಹಕರನ್ನು ಮೊಬೈಲ್ ಕರೆ ಮಾಡಿ ಕರೆಸಿ ಬಟ್ಟೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಒಂದೆರಡು ವಾಣಿಜ್ಯ ವಹಿವಾಟು ಹೊರತುಪಡಿಸಿ ಗಂಗಾವತಿ ಸಂಪೂರ್ಣ ಬಂದ್ ಆಗಿದೆ.