“ಸಂವಿಧಾನವೇ ಶ್ರೇಷ್ಠ. ಇದರಡಿಯಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು’ ಎನ್ನುತ್ತಾ ಈರೇಗೌಡ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂದೆ ಕರ್ಪೂರ ಹಚ್ಚಿ, ದೇವರಿಗೆಂದು ತಂದಿದ್ದ ಹೂವನ್ನು ಅಲ್ಲೇ ಇಟ್ಟು ಕೈ ಮುಗಿದು, ಇದೇ ನನ್ನ ಪೂಜೆ ಎನ್ನುತ್ತಾನೆ…- ಇದು ಈ ವಾರ ತೆರೆಕಂಡಿರುವ “ತೋತಾಪುರಿ-2′ ಚಿತ್ರದ ಒಂದು ಅರ್ಥಪೂರ್ಣ ದೃಶ್ಯ.
ಕೇವಲ ಇದೊಂದೇ ಅಲ್ಲ, ಇಂತಹ ಅರ್ಥಪೂರ್ಣವಾದ ಹಾಗೂ ಇವತ್ತಿನ ಸಂದರ್ಭಕ್ಕೆ ಹೆಚ್ಚು ಕನೆಕ್ಟ್ ಆಗುವ ಹಲವು ದೃಶ್ಯಗಳಿವೆ. ಅಲ್ಲಿಗೆ “ತೋತಾಪುರಿ’ ಮೊದಲ ಭಾಗ ನೋಡಿ, “ಡಬಲ್ ಮೀನಿಂಗ್‌ಗೆಂದೇ ಸಿನಿಮಾ ಮಾಡಿದ್ದಾರೆ’ ಎಂದು ಮುನಿಸಿಕೊಂಡಿದ್ದವರಿಗೆ “ತೋತಾಪುರಿ-2′ ಚಿತ್ರ ಖುಷಿ ಕೊಡಬಹುದು. ಹಾಗಂತ ಈ ಚಿತ್ರದಲ್ಲಿ ಡಬಲ್ ಮೀನಿಂಗ್, ಪೋಲಿ ಮಾತುಗಳು ಇಲ್ಲವೇ ಇಲ್ಲ ಎಂದಲ್ಲ. ಪಡ್ಡೆಗಳನ್ನು ಖುಷಿಪಡಿಸಲು, ಶಿಳ್ಳೆ ಚಪ್ಪಾಳೆ ಗಿಟ್ಟಿಸಲು, ಊಟದ ಮಧ್ಯೆ ಇರುವ ಜೀರಿಗೆ ಮೆಣಸಿನ ತರಹ ಒಂದಷ್ಟು ಡೈಲಾಗ್ಸ್‌ಗಳಿವೆ. ಆದರೆ, ಈ ಬಾರಿ ಅದನ್ನೇ ಸಿನಿಮಾ ಮಾಡಿಲ್ಲ. ಬದಲಾಗಿ ಒಂದೊಳ್ಳೆಯ ಕಥೆಯೂ ಇಲ್ಲಿ ತೆರೆದುಕೊಳ್ಳುತ್ತದೆ.
ಮೊದಲ ಭಾಗದ ಕೊನೆಯಲ್ಲಿ ಬಂದು ದರ್ಶನ ನೀಡಿದ ನಟ ಧನಂಜಯ್ ಇಲ್ಲಿ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಅವರದು ಲವ್‌ಟ್ರ್ಯಾಕ್ ಆದರೆ, ಜಗ್ಗೇಶ್ ಕಾಮಿಡಿ ಮೂಲಕ ನಗಿಸುತ್ತಾ ಹೋಗಿದ್ದಾರೆ. ಆ ಮಟ್ಟಿಗೆ “ತೋತಾಪುರಿ-2′ ಡಬಲ್ ರುಚಿ ಕೊಡುವ ಸಿನಿಮಾ. ಮಾಸ್-ಕ್ಲಾಸ್ ಎಲ್ಲವನ್ನು ಒಟ್ಟಿಗೆ ತನ್ನ “ಒಡಲಲ್ಲಿ’ ಹಾಕಿಕೊಂಡಿರುವ ಈ ಸಿನಿಮಾದಲ್ಲಿ ಜಾತಿ-ಧರ್ಮ ಮುಖ್ಯವಲ್ಲ. ಮನುಷ್ಯ ಸಂಬಂಧವಷ್ಟೇ ಮುಖ್ಯ ಎಂಬ ಸಂದೇಶವೂ ಇದೆ. ಅದನ್ನು ಹಲವು ಅರ್ಥಪೂರ್ಣ ದೃಶ್ಯಗಳ ಮೂಲಕ ಹೇಳಲಾಗಿದೆ.
ಚಿತ್ರದಲ್ಲಿ ಎರಡು ಲವ್‌ಟ್ರ್ಯಾಕ್‌ಗಳಿವೆ. ಅವೆರಡಕ್ಕೂ ಬೇರೆ ಬೇರೆ ಹಿನ್ನೆಲೆಗಳಿವೆ. ಕಾಮಿಡಿ ಜೊತೆಗೆ ಹಲವು ಗಂಭೀರ ವಿಚಾರಗಳೊಂದಿಗೆ ಸಾಗುವ ಸಿನಿಮಾ “ತೋತಾಪುರಿ’. ಹಾಗಂತ ಇಲ್ಲಿ ಗಂಭೀರ ದೃಶ್ಯಗಳು ತುಂಬಾ ಹೊತ್ತು ಕಾಡುತ್ತವೆ ಎನ್ನುವಂತಿಲ್ಲ. ಏಕೆಂದರೆ ಅದರ ಬೆನ್ನಲ್ಲೇ ಕಾಮಿಡಿ ದೃಶ್ಯವೊಂದು ಬಂದು ಕಿರುನಗೆಗೆ ಕಾರಣವಾಗುತ್ತವೆ.
ನಟ ಜಗ್ಗೇಶ್ ಹಾಗೂ ಧನಂಜಯ್ ಈ ಸಿನಿಮಾದ ಹೈಲೈಟ್. ಇಬ್ಬರು ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಅದಿತಿ, ಸುಮನ್, ವೀಣಾ ಸುಂದರ್, ದತ್ತಣ್ಣ, ಹೇಮಾದತ್ ಸೇರಿದಂತೆ ಇತರರು ಕಥೆಗೆ ಪೂರಕವಾಗಿದ್ದಾರೆ. ಫ್ರೆಂಡ್ಸ್ ಜೊತೆ ಫನ್‌ಟೈಮ್‌ಗೆ “ತೋತಾಪುರಿ-2′ ಸವಿಯಬಹುದು.
ಆರ್.ಪಿ. ರೈ