Advertisement

2021ರ ಕೊನೆಯ ಗ್ರಹಣ: ಡಿಸೆಂಬರ್ 4ರಂದು ಪೂರ್ಣ ಸೂರ್ಯಗ್ರಹಣ

01:04 PM Dec 03, 2021 | Team Udayavani |

ಡಿಸೆಂಬರ್‌ 4ರ ಶನಿವಾರ ಸೂರ್ಯ ಗ್ರಹಣ ಸಂಭವಿಸ ಲಿದ್ದು ಇದು ಈ ವರ್ಷದ ಕೊನೆಯ ಗ್ರಹಣವಾಗಿರಲಿದೆ. ಪೂರ್ಣ ಸೂರ್ಯ ಗ್ರಹಣದ ವಿದ್ಯಮಾನ ವಿಶೇಷವಾಗಿದ್ದು ಆ ಸಂದರ್ಭದಲ್ಲಿನ ಪ್ರಕೃತಿಯ ವೈಚಿತ್ರ್ಯಗಳನ್ನು ನೋಡು ವುದೇ ಒಂದು ಸೊಗಸು.

Advertisement

ಇನ್ನು ಖಗೋಳ ತಜ್ಞರಿಗಂತೂ ಗ್ರಹಣದ ಬಗೆಗೆ ಇನ್ನಷ್ಟು ಸಂಶೋಧನೆ, ಮಾಹಿತಿ ಕಲೆಹಾಕುವ ಕೌತುಕ. ಹಗಲಲ್ಲಿ ಒಮ್ಮೆಗೆ ಸೂರ್ಯನ ಬೆಳಕು ಮಸುಕಾದಾಗ, ವಾತಾವರಣ ತಂಪಾದಾಗ, ಸಂಜೆಯಾಯಿತೆಂದು ಭಾವಿಸಿ ಗೂಡು ಸೇರುವ ಪಕ್ಷಿಗಳು, ಗ್ರಹಣದ ಕೊನೆಗೆ ತೋರುವ ವಜ್ರದುಂಗುರ, ಭೂಮಿಯ ಮೇಲೆ ಸರ್ಪಗಳಂತೆ ಓಡುತ್ತಿರುವ ಸೌರ ಪಟ್ಟೆಗಳು ಇವೆ ಲ್ಲವನ್ನು ನೋಡಿದರೆ ಮಾತ್ರ ಅನುಭವಿಸಲು ಸಾಧ್ಯ. ಟೂರಿಸ್ಟ್‌ ಕಂಪೆನಿಗಳಿಗೆ ಇದೊಂದು ಸುಸಂದರ್ಭ. ಈಗಿನ ಗ್ರಹಣ ಹಡಗುಗಳಲ್ಲಿ ನೋಡಲು ಅನುಕೂಲ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣವಾಗುವುದು. ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದು ಸೂರ್ಯ ಕಿರಣಗಳನ್ನು ಪೂರ್ಣ ವಾಗಿ ಅಥವಾ ಆಂಶಿಕವಾಗಿ ತಡೆಯುತ್ತದೆ. ಈ ವಿದ್ಯಮಾನ ಅಮಾವಾಸ್ಯೆಯ ದಿನ ಸಂಭವಿಸುತ್ತದೆ. ಸೂರ್ಯ ಗ್ರಹಣಗಳಲ್ಲಿ ಮೂರು ವಿಧಗಳಿದ್ದು ಅವೆಂದರೆ ಪೂರ್ಣ, ಕಂಕಣ ಮತ್ತು ಆಂಶಿಕ.

ಇದನ್ನೂ ಓದಿ:ತನ್ನ ಕಾರು ತಡೆದರೆಂದು ಪೊಲೀಸರಿಗೆ ಅಮಾನತು ಬೆದರಿಕೆ ಹಾಕಿದ ಬಿಹಾರ ಸಚಿವ !

ಚಂದ್ರ ಭೂಮಿಯ ಸುತ್ತ ದೀರ್ಘ‌ ವೃತ್ತಾಕಾರದ ಪಥ ದಲ್ಲಿ ಚಲಿಸುವಾಗ ಒಮ್ಮೆ ಭೂಮಿಗೆ ಹತ್ತಿರವಾಗಿ, ಒಮ್ಮೆ ದೂರವಾಗುತ್ತದೆ. ಅಮಾವಾಸ್ಯೆಯ ದಿನ ಚಂದ್ರ ಭೂಮಿಗೆ ಹತ್ತಿರದಲ್ಲಿದ್ದರೆ ಚಂದ್ರನ ದಟ್ಟ ನೆರಳು ಭೂಮಿಯ ಯಾವ ಪ್ರದೇಶದಲ್ಲಿ ಬೀಳುತ್ತದೋ ಆ ಪ್ರದೇಶದಲ್ಲಿ ಸೂರ್ಯ ಸಂಪೂರ್ಣವಾಗಿ ಮರೆಯಾಗುತ್ತಾನೆ. ಇದೇ ಪೂರ್ಣ ಸೂರ್ಯ ಗ್ರಹಣ. ಚಂದ್ರನ ನೆರಳು ಬೀಳುತ್ತಿರುವ ಭೂಭಾಗಗಳಲ್ಲಿ ಸೂರ್ಯ ಭಾಗಶಃ ಮರೆಯಾಗುತ್ತಿದ್ದರೆ ಅದು ಆಂಶಿಕ ಸೂರ್ಯ ಗ್ರಹಣ. ಅಮಾವಾಸ್ಯೆಯ ದಿನ ಚಂದ್ರ ಭೂಮಿಗೆ ದೂರದಲ್ಲಿದ್ದು ಚಂದ್ರ ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡದೆ ಸೂರ್ಯ ಬಿಂಬದ ಅಂಚು ಬಳೆಯಾಕಾರದಲ್ಲಿ ಗೋಚರಿಸುವುದೇ ಕಂಕಣ ಸೂರ್ಯ ಗ್ರಹಣ.

Advertisement

ಗಾತ್ರದಲ್ಲಿ ಸೂರ್ಯ ಚಂದ್ರನಿಗಿಂತ 400ಪಟ್ಟು ದೊಡ್ಡ ದಿದ್ದರೂ ಚಂದ್ರ ಸೂರ್ಯನನ್ನು ಸಂಪೂರ್ಣವಾಗಿ ಮರೆ ಮಾಡಬಲ್ಲ. ಇದಕ್ಕೆ ಕಾರಣ ಸೂರ್ಯನು ಭೂಮಿ ಮತ್ತು ಚಂದ್ರನ ನಡುವಿನ ಅಂತರದ 400ಪಟ್ಟು ದೂರದಲ್ಲಿ ರುವುದು. ಇದರಿಂದಾಗಿ ಸೂರ್ಯ ಮತ್ತು ಚಂದ್ರ ಬಿಂಬಗಳು ಸಮನಾದ ಗಾತ್ರದಲ್ಲಿರುವಂತೆ ತೋರುತ್ತದೆ.

ಭೂಮಿ ಮತ್ತು ಚಂದ್ರನ ಪರಿಭ್ರಮಣ ಸಮತಲಗಳು 5 ಡಿಗ್ರಿ ಓರೆಯಾಗಿವೆ. ಹಾಗಾಗಿ ಪ್ರತೀ ಅಮಾವಾಸ್ಯೆಯಂದು ಸೂರ್ಯ ಗ್ರಹಣ ಸಂಭವಿಸುವುದಿಲ್ಲ. ಸಾಮಾನ್ಯವಾಗಿ ಸೂರ್ಯ ಗ್ರಹಣವು ಚಂದ್ರ ಗ್ರಹಣದ ಮೊದಲು ಅಥವಾ ಅನಂತರದ ಎರಡು ವಾರಗಳ ಅವಧಿಯಲ್ಲಿ ಸಂಭವಿಸುತ್ತದೆ. ನ. 19ರ ಚಂದ್ರ ಗ್ರಹಣದ ಅನಂತರ ಈ ಗ್ರಹಣ ಗೋಚರಿಸುತ್ತಿದೆ.

ಅಂಟಾಕ್ಟಿಕಾದಲ್ಲಿ ಪೂರ್ಣ ಸೂರ್ಯ ಗ್ರಹಣ ವೀಕ್ಷಣೆಗೆ ಲಭ್ಯವಾದರೆ ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕ, ದಕ್ಷಿಣ ಅಟ್ಲಾಂಟಿಕ್‌ ಮತ್ತು ಆಸ್ಟ್ರೇಲಿಯಾಗಳಲ್ಲಿ ಆಂಶಿಕ ಸೂರ್ಯ ಗ್ರಹಣ ಗೋಚರಿಸುತ್ತದೆ. ಭಾರತದಲ್ಲಿ ಈ ಗ್ರಹಣ ಗೋಚರವಾಗದು.

ನೇರ ವೀಕ್ಷಣೆಗೆ ಅವಕಾಶ: ನಾಸಾದವರ ಯೂಟ್ಯೂಬ್‌ ಮತ್ತು nasa.gov/live ಈ ತಾಣದಲ್ಲಿ ಹಾಗೂ CosmoSapiens ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಪೂರ್ಣ ಸೂರ್ಯ ಗ್ರಹಣದ ನೇರ ಪ್ರಸಾರ ಲಭ್ಯವಿದೆ. ಗ್ರಹಣದ ವಿವರಗಳನ್ನು timean3ate ಜಾಲತಾಣದಲ್ಲಿ ನೋಡಬಹುದು.

ಇದರಂತೆ ಭಾರತೀಯ ಕಾಲಮಾನದ ಪ್ರಕಾರ ಗ್ರಹಣ ಆರಂಭವಾಗುವ ಮೊದಲ ಸ್ಥಳದಲ್ಲಿ ಡಿ. 4ರ ಬೆಳಗ್ಗೆ ಗಂಟೆ 10:59ಕ್ಕೆ ಆಂಶಿಕ ಮತ್ತು ಮಧ್ಯಾಹ್ನ ಗಂಟೆ 12:30ಕ್ಕೆ ಪೂರ್ಣ ಸೂರ್ಯ ಗ್ರಹಣ ಆರಂಭವಾಗಲಿದೆ. ಗ್ರಹಣ ಕೊನೆಗೊಳ್ಳುವ ಪ್ರದೇಶದಲ್ಲಿ ಅಪರಾಹ್ನ ಗಂಟೆ 01:36ಕ್ಕೆ ಪೂರ್ಣ ಸೂರ್ಯ ಗ್ರಹಣ ಅಂತ್ಯವಾದರೆ 03:07 ಗಂಟೆಗೆ ಆಂಶಿಕ ಗ್ರಹಣ ಅಂತ್ಯವಾಗಲಿದೆ.

ಭಾರತದಲ್ಲಿ ಈ ಗ್ರಹಣವು ಗೋಚರಿಸದಿರುವುದರಿಂದ ಆಸಕ್ತರು ಯೂಟ್ಯೂಬ್‌ ಚಾನೆಲ್‌ ಮತ್ತು ಜಾಲತಾಣದಲ್ಲಿ ಗ್ರಹಣದ ನೇರ ವೀಕ್ಷಣೆ ಮಾಡಬಹುದಾಗಿದೆ.

– ಡಾ| ಕೆ.ವಿ.ರಾವ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next