Advertisement

ಧಾರಾಕಾರ ಮಳೆ: ನಾಲ್ವರು ಸಾವು

09:52 AM Oct 05, 2017 | |

ಬೆಂಗಳೂರು: ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಸಿಡಿಲು ಬಡಿದು ಇಬ್ಬರು ಯುವಕರು ಹಾಗೂ ಮಹಿಳೆ ಮೃತಪಟ್ಟರೆ, ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದು ಅರಣ್ಯ ರಕ್ಷಕನೊಬ್ಬ ಅಸುನೀಗಿದ್ದಾನೆ.

Advertisement

ಬುಧವಾರ ಮಧ್ಯಾಹ್ನ ಯಾದಗಿರಿಯ ವಡಗೇರಾದ ಬೆಂಡೆಬೆಂಬಳಿ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಉಸ್ಮಾನಪಾಶಾ ಜಮಾಲಸಾಬ (20) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಸಮೀಪದ ಕುಮನೂರು ಗ್ರಾಮದಲ್ಲಿ ಎತ್ತುಗಳನ್ನು ಮೇಯಿಸಲೆಂದು ಹೋದ
ಸುರೇಶ ಸಣ್ಣ ಸೂಗಪ್ಪ ಮಡಿವಾಳ (26) ಸಿಡಿಲು ಬಡಿದು ಮೃತನಾಗಿದ್ದಾನೆ. ಎರಡೂ ಪ್ರಕರಣಗಳು ವಡಗೇರಾ ಠಾಣೆಯಲ್ಲಿ ದಾಖಲಾಗಿವೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಹೆಬ್ಟಾಳ ಗ್ರಾಮದ ಮಂಜವ್ವ ರುದ್ರಪ್ಪ ಬನಹಟ್ಟಿ(40) ಎಂಬುವರು ಹೊಲದ ಕೆಲಸಕ್ಕೆ ಹೋದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. 

 ಧಾರಾಕಾರ ಮಳೆಗೆ ಮಂಗಳವಾರ ರಾತ್ರಿ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದು ಚಿತ್ರದುರ್ಗ ಜಿಲ್ಲೆ ಸಿರಿಗೆರೆಯ ಮೆದಕೇರಿಪುರ ಕಾವಲಿನ ದೊಡ್ಡಿಗನಾಳ್‌- ಹೊಸಹಟ್ಟಿ ಗ್ರಾಮದ ಅರಣ್ಯ ರಕ್ಷಕ ರಾಮದಾಸ್‌ (55) ಮೃತಪಟ್ಟಿದ್ದಾರೆ. ಕೆಲಸ ಮುಗಿಸಿ ಮನೆಗೆ ಮರಳುವ ವೇಳೆ ಹಳ್ಳ ದಾಟುವಾಗ ಹಳ್ಳದಲ್ಲಿದ್ದ ಬಳ್ಳಿ ಕಾಲಿಗೆ ಸುತ್ತಿಕೊಂಡು ಬಿದ್ದಿದ್ದಾರೆ. ಬಳ್ಳಿಯಿಂದ ಕಾಲನ್ನು ಬಿಡಿಸಿಕೊಳ್ಳಲಾಗದೇ ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಸಮೀಪದ ಯು. ಹೊಸಳ್ಳಿ ಗ್ರಾಮದ ಜಮೀನೊಂದರಲ್ಲಿ ಕಾರ್ಮಿಕರು ಬುಧವಾರ ಬೆಳಗ್ಗೆ ಹತ್ತಿ ಬಿಡಿಸುತ್ತಿದ್ದ ವೇಳೆ ಸಿಡಿಲು ಬಡಿದು ಐವರು ಕಾರ್ಮಿಕರು ತೀವ್ರ ಗಾಯಗೊಂಡಿದ್ದಾರೆ.

ನಾಲ್ಕೈದು ದಿನ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಮುಂದಿನ ನಾಲ್ಕೈದು ದಿನಗಳ ಕಾಲ ಇದು ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ. ಮೇಲ್ಮೆ ಸುಳಿಗಾಳಿ ಅರಬ್ಬಿ ಸಮುದ್ರದ ಪೂರ್ವ ದಿಕ್ಕಿನ ಕೇಂದ್ರದಲ್ಲಿ ಚಲಿಸುತ್ತಿರುವುದರಿಂದ ರಾಜ್ಯದಲ್ಲಿ ಮಳೆ ಮುಂದುವರಿದಿದ್ದು, ಇನ್ನೂ ನಾಲ್ಕರಿಂದ ಐದು ದಿನಗಳ ಇದೇ ರೀತಿ ಮಳೆ ಬೀಳುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಮಾಹಿತಿ ನೀಡಿದೆ. ಕರಾವಳಿ ಭಾಗದಲ್ಲಿ ಮುಂಗಾರು ಸ್ವಲ್ಪ ಮಟ್ಟಿಗೆ ತಗ್ಗಿದೆ. ಆದರೆ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಮಳೆ ಬೀಳಲಿದೆ ಎಂದು ಪ್ರಕಟಣೆ ತಿಳಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next