Advertisement

Katpadi – ಶಿರ್ವ: ರಸ್ತೆ ಗುಂಡಿಗೆ ತೇಪೆ

06:31 PM Oct 23, 2024 | Team Udayavani |

ಕಟಪಾಡಿ: ಕಟಪಾಡಿಯಿಂದ ಶಿರ್ವಕ್ಕೆ ಸಂಪರ್ಕ ರಸ್ತೆಯ ಸುಭಾಸ್‌ನಗರ ಸಮೀಪ ರಸ್ತೆ ಗುಂಡಿಗೆ ಮಂಗಳವಾರ ಬೆಳಗ್ಗೆ ತೇಪೆ ಹಾಕಿ ಗುಂಡಿ ಮುಚ್ಚಲಾಯಿತು.

Advertisement

ಕಟಪಾಡಿ, ಕುರ್ಕಾಲು, ಶಂಕರ ಪುರದಿಂದ ಶಿರ್ವ ಸಂಪರ್ಕ ರಸ್ತೆಯ ಸುಭಾಶ್‌ನಗರ ಸಮೀಪದಲ್ಲಿನ ರಸ್ತೆ ಗುಂಡಿಗೆ ಆಕ್ರೋಶಭರಿತ ನಾಗರಿಕರಿಂದ ವಾಹನ ಸವಾರರ ಎಚ್ಚರಿಕೆಗಾಗಿ ಅಳವಡಿಸಲಾಗಿದ್ದ ಬಾಳೆ ಗಿಡವನ್ನು ತೆರವುಗೊಳಿಸಿ ಮಂಗಳವಾರ ಬೆಳ್ಳಂಬೆಳಗ್ಗೆಯೇ ವೆಟ್‌ಮಿಕ್ಸ್‌ ಅಳವಡಿಸಿ ಗುಂಡಿಗೆ ತೇಪೆ ಹಾಕಿದ್ದಾರೆ.

ಈ ರಸ್ತೆ ಗುಂಡಿಯಲ್ಲಿ ರವಿವಾರ ರಾತ್ರಿಯ ವೇಳೆಯಲ್ಲಿ ದ್ವಿಚಕ್ರ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದು, ನಾಗರಿಕರು ಬಾಳೆಗಿಡವನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆಯು ಸೋಮವಾರ ಬೆಳಗ್ಗಿನ ವೇಳೆಯಲ್ಲಿ ಬೆಳಕಿಗೆ ಬಂದಿತ್ತು.

ಈ ರಸ್ತೆಯ ಹೊಂಡಗುಂಡಿಗಳ ಬಗ್ಗೆ ಎಚ್ಚರಿಸುವ ಜನಾಕ್ರೋಶದ ವರದಿಯನ್ನು ಉದಯವಾಣಿ ಸುದಿನ ಪ್ರಕಟಿಸಿತ್ತು. ಪ್ರಮುಖ ರಸ್ತೆಯ ಈ ಗುಂಡಿಗಳಲ್ಲಿ ನಿರಂತರ ಅವಘಡಗಳು ಸಂಭವಿಸುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸಿದರೆ ಆಸ್ಪತ್ರೆಗೆ ದಾಖಲು ಗ್ಯಾರಂಟಿ ಎಂಬಂತೆ ಕಟುವಾದ ಶಬ್ದಗಳಲ್ಲಿ ಅಸಹನೆ, ಆಕ್ರೋಶಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿತ್ತು. ಬಾಳೆಗಿಡವು ಗೊನೆ ಹಾಕುವ ಮುನ್ನವೇ ಇಲಾಖಾಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತು ರಸ್ತೆಗುಂಡಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಿ ಎಂದೂ ಒತ್ತಾಯಿಸಿದ್ದರು.

ವೈರಲ್‌ ಸಾಂಗ್‌ ಹುಟ್ಟಿದ ಕಟಪಾಡಿ -ಕುರ್ಕಾಲು – ಶಂಕರಪುರದಿಂದ ಶಿರ್ವ ಸಂಪರ್ಕ ರಸ್ತೆಯ ಹೊಂಡಗಳು ಶಾಶ್ವತ ಮುಕ್ತಿಗಾಗಿ ಕಾಯುತ್ತಿದ್ದು, ಲೋಕೋಪಯೋಗಿ ಇಲಾಖೆ, ಜನಪ್ರತಿನಿಧಿಗಳು ಎಚ್ಚೆತ್ತು ತುರ್ತಾಗಿ ಈ ರಸ್ತೆಯನ್ನು ಸುಗಮ ಸಂಚಾರಕ್ಕೆ ಸುವ್ಯವಸ್ಥಿತಗೊಳಿಸುವಂತೆ ನಿತ್ಯ ಸಂಚಾರಿಗಳು ಮತ್ತೆ ಆಗ್ರಹಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next