Advertisement
ಇಂಗ್ಲೆಂಡ್‌ನ ಬ್ರಿಡ್‌ಪೋರ್ಟ್‌ನಲ್ಲೊಂದು ವಿಶೇಷ ಉತ್ಸವ ನಡೆಯುತ್ತೆ. ಅದರ ಹೆಸರು “ಟೋಪಿ ಉತ್ಸವ’. ಆ ದಿನದಂದು ಸ್ಥಳೀಯರು ತಮ್ಮ ಟೋಪಿಗಳನ್ನು ಅಲಂಕರಿಸಿ ಸಿದ್ಧಪಡಿಸಿಕೊಳ್ಳುವ ಪರಿ ನಿಜಕ್ಕೂ ಸೋಜಿಗ ಹುಟ್ಟಿಸುವಂಥದ್ದು. ಇಂಗ್ಲೆಂಡ್‌ನ ಬ್ರಿಡ್‌ಪೋರ್ಟ್ ಪಟ್ಟಣದಲ್ಲಿ ಪ್ರತೀ ವರ್ಷ ನಡೆಯುವ ಈ ಟೋಪಿ ಉತ್ಸವ ಮೇಲ್ನೋಟಕ್ಕೆ ತಮಾಷೆಯಾಗಿ ಕಂಡರೂ ಇದು ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಸಾರುವ ಉತ್ಸವವಾಗಿದೆ. 1986ರಿಂದಲೂ ಟೋಪಿ ಮಾರಾಟ ಹಾಗೂ ಗಂಡಸರ ಮೇಲುಡುಗೆಗಳನ್ನು ಮಾರುವ ಕಾರ್ಯದಲ್ಲಿ ನಿರತರಾಗಿರುವ ರೋಜರ್ ಸ್ನೂಕ್‌ರಿಂದ 2009ರಲ್ಲಿ ಮೊದಲಿಗೆ ಪ್ರಾರಂಭವಾದ ಈ ಉತ್ಸವವು ವರ್ಷದಿಂದ ವರ್ಷಕ್ಕೆ ಸಾಕಷ್ಟು ಜನಸಂದಣಿಯಿಂದ ಆಚರಿಸಲ್ಪಡುತ್ತಿದ್ದು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿದೆ.
ಪ್ರತೀ ವರ್ಷದ ಸೆಪ್ಟೆಂಬರ್ ತಿಂಗಳ ಮೊದಲನೇ ಶನಿವಾರದಂದು ಈ ಉತ್ಸವವನ್ನು ಆಯೋಜಿಸಲಾಗುತ್ತದೆ. ಆ ದಿನದಂದು ಸ್ಥಳಿಯರಷ್ಟೇ ಅಲ್ಲದೇ ಜಗತ್ತಿನೆಲ್ಲೆಡೆಯಿಂದ ಜನರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಆ ದಿನದಂದು ನಗರದಾದ್ಯಂತ ಟೋಪಿಗಳ ಪ್ರದರ್ಶನ, ರಿಯಾಯಿತಿ ದರದಲ್ಲಿ ಮಾರಾಟ ಅಲ್ಲದೇ ಟೋಪಿಗಳ ಹರಾಜು ಕ್ರಿಯೆಯೂ ಜರುಗುವವು. ನಗರದ ಪ್ರಸಿದ್ಧ “ಬುಕ್ಕೀ ಡೂ’ ಚೌಕದಲ್ಲಿ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಸೇರುವ ಜನರು ತಮ್ಮ ತಲೆಯ ಮೇಲೆ ವಿವಿಧ ಬಣ್ಣದ ಹಾಗೂ ಲಕ್ಷಣ ಮಾದರಿಯ ಟೋಪಿಗಳನ್ನು ಧರಿಸಿ ಮಿಂಚುತ್ತಾರೆ. ವಯಸ್ಸಿನ ಮಿತಿಯಿಲ್ಲದೆ ಒಂದೆಡೆ ಸೇರುವ ನಗರದ ಜನತೆ ಚಿತ್ರ ವಿಚಿತ್ರ ಟೋಪಿಗಳನ್ನು ಹಾಕಿಕೊಂಡು ´ೋಟೋ ತೆಗೆಸಿಕೊಳ್ಳುವುದಲ್ಲದೇ ತಮ್ಮ ಟೋಪಿಗಳನ್ನು ಪರಸ್ಪರ ಬದಲಿಸಿಕೊಂಡು ಸಂಭ್ರಮಿಸುತ್ತಾರೆ. ತಮ್ಮ ಸಾಕುನಾಯಿಗಳಿಗೂ ಟೋಪಿ ಹಾಕಿಸಿಕೊಂಡು ಕರೆತರುವ ಜನರು ಅವುಗಳನ್ನೂ ನಗರದ ಚೌಕದಲ್ಲಿ ಪ್ರದರ್ಶನ ಮಾಡುತ್ತಾರೆ. ಉತ್ತಮವಾಗಿ ಸಿಂಗರಿಸಲಾದ ಟೋಪಿಯನ್ನು ಧರಿಸಿದವರಿಗೆ ಬಹುಮಾನವೂ ಇದೆ. ಸಾಕುನಾಯಿಗಳಿಗೂ ಇಲ್ಲಿ ಬಹುಮಾನಗಳುಂಟು.
Related Articles
ಈ ಉತ್ಸವ ಬರೀ ತಮಾಷೆಗಷ್ಟೇ ಅಲ್ಲ. ಪರ್ಯಾಯ ಇಂಧನ, ಪರಿಸರ ಮಾಲಿನ್ಯ, ಭಯೋತ್ಪಾದನೆ ಮುಂತಾದ ಜಾಗತಿಕ ಸಮಸ್ಯೆಗಳ ಬಗೆಗಿನ ಸಂದೇಶ ಸಾರುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದೆ.
Advertisement
ಪ.ನಾ.ಹಳ್ಳಿ.ಹರೀಶ್ ಕುಮಾರ್, ತುಮಕೂರು