Advertisement

ಮೈಕೆಲ್‌ ಜಾಕ್ಸನ್‌, ಡೆಟ್ರಾಯಿಟ್‌, ಬೆಂಕಿಪುರ…

08:35 AM Apr 16, 2023 | Team Udayavani |

“ಮಾನ್ಯುಮೆಂಟ್‌ ಟು ಮೈಕೆಲ್‌ ಜಾಕ್ಸನ್‌” ಸೆರ್ಬಿಯಾ ದೇಶದ ಚಿತ್ರ. ಡಾರ್ಕೊ ಲಂಗೊಲೊವ್‌ ಇದರ ನಿರ್ದೇಶಕ. ಚಿತ್ರಕಥೆಯೂ ಆತನದ್ದೇ. ಕಥಾವಸ್ತು ಕೊಂಚ ವಿಶಿಷ್ಟವೆನಿಸಿತ್ತು.

Advertisement

ಹಿನ್ನೆಲೆ- ಸೆರ್ಬಿಯಾದ ಪುಟ್ಟ ಹಳ್ಳಿ. ದೊಡ್ಡ ವೃತ್ತ. ಸುತ್ತ ಮುತ್ತಲೂ ಒಂದಿಷ್ಟು ಅಂಗಡಿಗಳು, ಮತ್ತೂಂದಿಷ್ಟು ಮನೆಗಳು, ಒಂದು ಹಳೆಯ ವಿಮಾನ ನಿಲ್ದಾಣ..ಇಷ್ಟಕ್ಕೇ ಊರು ಮುಗಿಯುತ್ತದೆ.

ಅಂಕ ಒಂದು- ಊರು ಖಾಲಿಯಾಗತೊಡಗಿದೆ. “ಈ ಊರಿನಲ್ಲಿ ಭವಿಷ್ಯವಿಲ್ಲ. ಬೇರೆ ನಗರಕ್ಕೆ ವಲಸೆಯೇ ಸೂಕ್ತ” ಎಂದೆನಿಸಿದೆ ಅಲ್ಲಿನವರಿಗೆ. ಹಾಗಾಗಿ ಮಾಸ್ಕೋ ಸಹಿತ ಬೇರೆ ದೇಶಗಳ ನಗರಗಳು ಅತೀ ಸುಂದರವಾಗಿ ಕಾಣಿಸತೊಡಗಿವೆ.

ಅಂಕ ಎರಡು- ಮತ್ತೂಂದೆಡೆ ಕಮ್ಯುನಿಸಂನ ಪತನ ಎಂಬುದರ ದ್ಯೋತಕವೋ ಎಂಬಂತೆ ಊರಿನ ವೃತ್ತದಲ್ಲಿ ನಿಲ್ಲಿಸಲಾಗಿದ್ದ ಕಮ್ಯುನಿಸ್ಟ್‌ ನಾಯಕನ ಪ್ರತಿಮೆಯನ್ನು ತೆಗೆಯಲು ಮೇಯರ್‌ ಒಳಗೊಂಡ ಕೌನ್ಸಿಲ್‌ ನಿರ್ಧರಿಸುತ್ತದೆ.

ಅಂಕ ಮೂರು- ಊರಿನಲ್ಲಿನ ಕ್ಷೌರಿಕನೊಬ್ಬ (ಕಥಾನಾಯಕ) ನಿಗೆ ಊರೂ ಉಳಿಸಿಕೊಳ್ಳಬೇಕು ಹಾಗೂ ಪತ್ನಿಯ ಒಲವನ್ನು ಗಳಿಸಿಕೊಳ್ಳಬೇಕಾದ ಅನಿವಾರ್ಯ. ಅವಳೂ ಹೊಸ ದಾರಿಯನ್ನು ಹುಡುಕುತ್ತಿರುವವಳು. ಅವಳಮ್ಮ ಅದಕ್ಕಾಗಿ ಯೋಜನೆ ಸಿದ್ಧಪಡಿಸುತ್ತಿದ್ದಾಳೆ. ಮಾಸ್ಕೋಗೆ ತೆರಳಲು ಇವಳಿಗೂ ಆಸೆಯಿದೆ.

Advertisement

ಕಥೆಯ ಓಟ ಹೀಗೆ. ಕಥಾನಾಯಕ ಒಂದು ವಿಲಕ್ಷಣ ವೆನಿಸಬಹುದಾದ ಆದರೆ ವಿನೂತನವೆನಿಸುವಂಥ ಯೋಜನೆಗೆ ಮುಂದಾಗುತ್ತಾನೆ. ಊರನ್ನು ಒಂದು ಪ್ರವಾಸಿ ತಾಣವಾಗಿ ರೂಪಿಸಿದರೆ ಉದ್ಯೋಗವೂ ಸಾಧ್ಯ, ಆದಾಯವೂ ಸಾಧ್ಯ. ಮತ್ತೆ ಊರು ನಳನಳಿಸಲು ಸಾಧ್ಯ. ಆಗ ಊರೂ ಸಾಯುವುದಿಲ್ಲ, ಪತ್ನಿಯೂ ತೊರೆಯುವುದಿಲ್ಲ ಎನಿಸುತ್ತದೆ.

ಅದಕ್ಕೆ ಪಾಪ್‌ ತಾರೆ ಮೈಕೆಲ್‌ ಜಾಕ್ಸನ್‌ನ ಪ್ರತಿಮೆಯನ್ನು ಊರಿನಲ್ಲಿ ಸ್ಥಾಪಿಸುವ ಆಲೋಚನೆಯನ್ನು ಎಲ್ಲರ ಮುಂದಿಡುತ್ತಾನೆ. ಕಮ್ಯುನಿಸ್ಟ್‌ ನಾಯಕನ ಪ್ರತಿಮೆ ತೆರವಾದ ಸ್ಥಳದಲ್ಲಿ ಸಂಗೀತಗಾರನ ಪ್ರತಿಮೆ ಸ್ಥಾಪನೆ. ಆ ಮೂಲಕ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಬಹುದು ಎಂದು ಕೌನ್ಸಿಲ್‌ಗೆ ಮನವರಿಕೆ ಮಾಡಿಕೊಡುತ್ತಾನೆ. ಮೇಯರ್‌ಗೆ ಇದು ವಿಚಿತ್ರವೆನಿಸಿದರೂ, ಕೆಲವು ನಾಗರಿಕರ ಆಗ್ರಹಕ್ಕೆ ಮಣಿಯುತ್ತಾನೆ. ಕಥಾನಾಯಕನ ಗೆಳೆಯ ಮಾಜಿ ಪೈಲಟ್‌ ಸಹ ಬೆಂಬಲಿಸುತ್ತಾನೆ. ಈ ಪೈಲಟ್‌ಗೆ ಮುಚ್ಚಿರುವ ಏರ್‌ಪೋರ್ಟ್‌ನ್ನು ತೆರೆಯುವ ಆಸೆ. ಊರಿನ ಧಾರ್ಮಿಕ ಮುಖಂ ಡನೂ ಕಥಾನಾಯಕನ ಆಲೋಚನೆಯನ್ನು ಸಮರ್ಥಿಸುತ್ತಾನೆ ತನ್ನದೇ ಕಾರಣಕ್ಕಾಗಿ. ಅಂಗವೈಕಲ್ಯ ಹೊಂದಿರುವ ಅವನ ಮಗಳು ಮೈಕೆಲ್‌ ಜಾಕ್ಸನ್‌ನ ಅಭಿಮಾನಿ. ಒಮ್ಮೆ ಜಾಕ್ಸನ್‌ನ ಕೈ ಕುಲುಕಬೇಕೆಂಬುದೇ ಅವಳ ಬದುಕಿನಾಸೆ.

ಕೊನೆಗೂ ಮೇಯರ್‌ ಒಪ್ಪಿಗೆ ನೀಡುತ್ತಾನೆ. ಊರಿನ ಕಲಾವಿದನೊಬ್ಬ ಪ್ರತಿಮೆ ರೂಪಿಸಲೂ ಒಪ್ಪಿಕೊಳ್ಳುತ್ತಾನೆ. ಮೇಯರ್‌ ಮತ್ತು ಇನ್ನು ಕೆಲವು ಭ್ರಷ್ಟಚಾರಿ ಅಧಿಕಾರಿಗಳ ಆಲೋಚನೆ ಬೇರೆ ಇರುತ್ತದೆ. ಆ ಮುಚ್ಚಲಾದ ಏರ್‌ಪೋರ್ಟ್‌ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಬೇಕೆಂದಿರುತ್ತಾರೆ. ಆಗ ದುರಾಲೋಚನೆಯಿಂದ ಹೊಸ ಯೋಜನೆ ಕೈ ಗೂಡ ದಂ ತಾಗಲು ಮೇಯರ್‌ ಕೆಲವು ಕಿಡಿಗೇಡಿಗಳನ್ನು ಎತ್ತಿ ಕಟ್ಟುತ್ತಾನೆ. ಈ ಮಧ್ಯೆ ಮೈಕೆಲ್‌ ಜಾಕ್ಸನ್‌ ಪ್ರತಿಮೆ ಸುದ್ದಿ ಕೇಳಿ ಪ್ರವಾಸಿಗರು ಬರತೊಡಗುತ್ತಾರೆ. ಕಥಾನಾಯಕನ ಕನಸು ಬಣ್ಣ ಪಡೆದು ಕೊಳ್ಳತೊಡಗುತ್ತದೆ. ಇದರ ಬೆನ್ನಿಗೇ ಕಿಡಿಗೇಡಿಗಳು ಬಂಡವಾಳಶಾಹಿ ದೇಶದ ಸಂಗೀತಗಾರನ ಪ್ರತಿಮೆ ನಮ್ಮ ಸಂಸ್ಕೃತಿಗೆ ಪೂರಕವಾದುದಲ್ಲ ಎಂದು ವಿರೋಧಿ ಸತೊಡಗುತ್ತಾರೆ.

ಪ್ರತಿಮೆ ಅನಾವರಣದ ದಿನ. ಸ್ವತಃ ಮೈಕೆಲ್‌ ಜಾಕ್ಸನ್‌ ಪ್ರತಿಮೆ ಅನಾವರಣಗೊಳಿಸುತ್ತಾರೆ ಎಂದು ಪ್ರಚಾರ ಮಾಡ ಲಾಗುತ್ತದೆ. ನಾಗರಿಕರಿಗೆ ಕುತೂಹಲ ಹೆಚ್ಚಾಗುತ್ತದೆ. ಆಗ ಮೇಲೊಂದು ಹೆಲಿಕಾಪ್ಟರ್‌ ಶಬ್ದ ಕೇಳಿಸತೊಡಗುತ್ತದೆ. ಅದರಿಂದ ಹಗ್ಗ ಹಿಡಿದು ಕಥಾನಾಯಕ ಜಾಕ್ಸನ್‌ ರೀತಿ ವೇಷ ಧರಿಸಿ ಕೆಳಗಿಳಿಯತೊಡಗುತ್ತಾನೆ. ಜನರೆಲ್ಲ ಜಾಕ್ಸನ್‌ ಎಂದು ತಿಳಿದು ಹೋ ಎಂದು ಸಂಭ್ರಮಿಸತೊಡಗುತ್ತಾರೆ. ಅಷ್ಟರಲ್ಲಿ ಕಿಡಿಗೇಡಿಗಳು ಅವನತ್ತ ಕಲ್ಲುಗಳನ್ನು ಬೀಸತೊಡಗುತ್ತಾರೆ. ಒಂದು ಕಲ್ಲು ಕಥಾನಾಯಕನಿಗೆ ತಗುಲಿ ದೊಪ್ಪನೆ ಬಿದ್ದು ಸಾಯುತ್ತಾನೆ. ಅಂತಿಮವಾಗಿ ಜಾಕ್ಸನ್‌ ಬದಲು ಕಥಾನಾಯಕನ ಪ್ರತಿಮೆ ಅನಾವರಣಗೊಳ್ಳುತ್ತದೆ. ಪತ್ನಿ ಊರಲ್ಲೇ ಉಳಿಯುತ್ತಾಳೆ, ಊರೂ ಉಳಿಯುತ್ತದೆ. ಇಡೀ ಕಥೆಗೆ ವಿಡಂಬನೆಯ ಬಣ್ಣವಿದೆ.

ಈ ಕಥೆಯ ಹಿನ್ನೆಲೆಯಲ್ಲೂ ಕೈಗಾರೀಕರಣ, ಉದಾರೀಕರಣ, ಚರಿತ್ರೆ, ರಾಜಕಾರಣ ಎಲ್ಲವೂ ತಳಕು ಹಾಕಿಕೊಂಡಿವೆ. ಅವುಗಳ ಬಗ್ಗೆ ಇಲ್ಲಿ ಚರ್ಚಿಸುವುದಿಲ್ಲ. ಆದರೆ ಕಥಾನಾಯಕನ ಅದಮ್ಯ ಪ್ರೀತಿ, ಇಚ್ಛಾಶಕ್ತಿ ಹಾಗೂ ಪ್ರಾಮಾಣಿಕತೆ ಇಷ್ಟವಾಗುತ್ತದೆ.

20ನೇ ಶತಮಾನದ ಆರಂಭ. ಡೆಟ್ರಾಯಿಟ್‌ ನಗರ ಹೆಸರು ವಾಸಿಯಾದದ್ದು ಆಟೋಮೊಬೈಲ್‌ ಕ್ಷೇತ್ರದ ರಾಜಧಾನಿ ಯೆಂಬಂತೆ. ಫೋರ್ಡ್‌ ಕಂಪೆನಿಯಿಂದ ಹಿಡಿದು ಹಲವಾರು ಆಟೋಮೊಬೈಲ್‌ ಕ್ಷೇತ್ರದ ಪ್ರತ್ಯಕ್ಷ ಹಾಗೂ ಪರೋಕ್ಷ ಕೈಗಾರಿಕೆಗಳು ಆರಂಭವಾದವು. ಕೈಗಾರಿಕೆಗಳ ಟೌನ್‌ಶಿಪ್‌ಗ್ಳು ಸ್ಥಾಪನೆಯಾದವು. ಕಾರ್ಮಿಕರ ಕಾಲನಿಗಳು ತಲೆ ಎತ್ತಿದವು. ಆಟೋಮೊಬೈಲ್‌ನೊಂದಿಗೆ ಶಿಪ್ಪಿಂಗ್‌ ಉದ್ಯಮವೂ ಬಂದಿತು. ಉದ್ಯೋಗ ಕಾಶಿ ಎನಿಸತೊಡಗಿತು. ಕಾರ್ಖಾನೆಗಳು ತುಂಬಿ ಹೋದವು. ಹಾಗೆಯೇ ಕಾರ್ಮಿಕರ ಸೌಲಭ್ಯಗಳಿಗಾಗಿ ಚಳವಳಿಗಳು ನಡೆದವು. ಹೀಗೆ ಕಾಲ ಸಾಗಿ 70ರ ದಶಕದತ್ತ ಬರುವಷ್ಟರಲ್ಲಿ ಆಟೋ ಮೊಬೈಲ್‌ ಕ್ಷೇತ್ರವೇ ಪುನರ್‌ ರೂಪಗೊಳ್ಳತೊಡಗಿದುದೂ ಸಹಿತ ಹಲವು ಕಾರಣಗಳಿಗೆ ಕೈಗಾರಿಕೆಗಳಿಗೆ ಬೀಗ ಬೀಳತೊಡಗಿತು. ಹೊಳಪು ಕಳೆದುಕೊಳ್ಳ ತೊಡಗಿತು. ಉದ್ಯೋಗ ಅರಸಿ ಬೇರೆ ನಗರಗಳತ್ತ ಕಾರ್ಮಿಕರ ವಲಸೆ ಆರಂಭವಾಯಿತು. ಎಲ್ಲ ಕಾರಣಗಳಿಗೆ ತನ್ನ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಕಳೆದುಕೊಂಡಿತು. ತನ್ನ ಕಿರೀಟ ಕಳಚಿಕೊಂಡು ಕಳಾಹೀನವಾಯಿತು. ಈಗ ಮತ್ತೆ ಹೊಸ ಸ್ವರೂಪ ಪಡೆಯುತ್ತಿರುವುದು ಬೇರೆ ಮಾತು.

ನಮ್ಮ ಊರಿಗೆ ಬರೋಣ. ಅದೇ 20ರ ದಶಕದ ಆರಂಭದ ಕಥೆ. ಭದ್ರಾವತಿ ಶಿವಮೊಗ್ಗ ಜಿಲ್ಲೆಯ ಪ್ರಮುಖ ಕೈಗಾರಿಕ ನಗರ. ಬೆಂಕಿಪುರ ಎಂದಿದ್ದದ್ದು ಭದ್ರಾವತಿಯಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನಪಯೋಗಿ ಕಾರ್ಯಗಳಲ್ಲಿÉ ಒಂದಾಗಿ 1918ರಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್‌) ಹಾಗೂ 1937ರಲ್ಲಿ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಆರಂಭವಾದವು. ಭದ್ರಾ ನದಿ ಹಾಗೂ ಕಬ್ಬಿಣ ಅದಿರಿನ ಕೆಮ್ಮಣ್ಣುಗಂಡಿ ನಗರವನ್ನು ಸಲಹಿದವು ಎನ್ನಬಹುದು.

ಸರ್‌.ಎಂ. ವಿಶ್ವೇಶ್ವರಯ್ಯನವರು ಮುಂದೆ ನಿಂತು ಕಾರ್ಖಾನೆಗಳ ಸ್ಥಾಪನೆಗೆ ಕಾರಣರಾದರು. ಅತ್ಯಂತ ಉತ್ಕೃಷ್ಟ ಉತ್ಪನ್ನಗಳಿಗೆ ಎರಡೂ ಕಾರ್ಖಾನೆಗಳು ಹೆಸರುವಾಸಿಯಾದವು. ಸಾವಿರಾರು ಮಂದಿಗೆ ಉದ್ಯೋಗ ದೊರಕಿತು. ಕಾರ್ಮಿಕರ ಕಾಲನಿಗಳು,ಅಧಿಕಾರಿಗಳ ವಸತಿಗೃಹಗಳು ಸ್ಥಾಪನೆಯಾದವು. ಸ್ಥಳೀಯ ಆರ್ಥಿಕತೆಗೆ ಶಕ್ತಿ ಒದಗಿತು. ಒಂದು ಸಮೃದ್ಧ ಪಟ್ಟಣವಾಗಿ ಬೆಳೆಯತೊಡಗಿತು. ಉದ್ಯೋಗ ವಲಸೆ ನಿಂತಿತು. ಯುವಜನರಿಗೂ ಪೂರಕ ಉದ್ಯಮಗಳಲ್ಲಿ ಅವಕಾಶ ಸಿಕ್ಕಿತು. ಅಮೆರಿಕದ ಡೆಟ್ರಾಯಿಟ್‌ ಕುಸಿಯುವಾಗ ಈ ಕಾರ್ಖಾನೆಗಳು ಸುಮಾರು 20 ಸಾವಿರ ಕಾರ್ಮಿಕರಿಗೆ ಬದುಕು ಕಟ್ಟಿಕೊಟ್ಟಿದ್ದವು..

ಹೀಗೆ ಸಾಗುತ್ತಿದ್ದ ಕಾಲ ಮಗ್ಗುಲು ಬದಲಿಸಿತು. ಕಾರ್ಖಾನೆಯ ಆಡಳಿತವೂ ಮೈಸೂರು ಸಂಸ್ಥಾನದಿಂದ ರಾಜ್ಯ ಸರಕಾರಕ್ಕೆ‌ ಹಸ್ತಾಂತರಗೊಂಡಿತು. ಸರಕಾರದ ಕೆಲವು ಅವೈಜ್ಞಾನಿಕ ತೀರ್ಮಾನಗಳಿಂದ ಕಾರ್ಖಾನೆಗಳು ನಷ್ಟದ ಹಾದಿ ಹಿಡಿದವು. ಬಳಿಕ ಕೇಂದ್ರ ಸರಕಾರದ ಹೆಗಲಿಗೆ ವರ್ಗಾ ಯಿಸಲಾಯಿತು. ದೊಡ್ಡಣ್ಣ ಮನೆಯ ನಿರ್ವಹಣೆಯನ್ನು ಕೈಗೊಂಡರೆ ಪರಿಸ್ಥಿತಿ ಸರಿಯಾಗಬಹುದೆಂದುಕೊಂಡದ್ದು ಸುಳ್ಳಾಯಿತು. ಕೇಂದ್ರದ ಭಾರತೀಯ ಉಕ್ಕು ಪ್ರಾಧಿಕಾರ ಕಾರ್ಖಾನೆ ಮುಚ್ಚಲು ಸಲಹೆ ನೀಡಿದೆ. ಸರಕಾರಗಳ ಇಚ್ಛಾಶಕ್ತಿಯ ಕೊರತೆ, ಜನಪ್ರತಿನಿಧಿಗಳ ಅನಾಸಕ್ತಿ, ಭ್ರಷ್ಟಾಚಾರ-ಎಲ್ಲವೂ ಸೇರಿ ಈಗ ಭದ್ರಾವತಿಯೂ ಡೆಟ್ರಾಯಿಟ್‌ ಸ್ಥಿತಿಗೆ ತಲುಪುತ್ತದೆ.

ಈ ಹಂತದಲ್ಲಿ ಕಥಾನಾಯಕ ನೆನಪಾಗುತ್ತಾನೆ. ಪ್ರತೀ ಊರುಗಳಲ್ಲಿಯೂ ಅಂಥ ಕಥಾನಾಯಕರು ಇರುತ್ತಾರೆ. ಹಾಗೆಯೇ ಅಂಥ ಮೇಯರ್‌ (ಆಡಳಿತಗಾರರು) ಇರುತ್ತಾರೆ. ದುರಂತವೆಂದರೆ ಅಂಥ ಕಥಾನಾಯಕರೇ ಮೇಯರ್‌ಗಳಾಗಿರುವುದಿಲ್ಲ !

~ ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next