ಕೋವಿಡ್ ವೈರಸ್ ಸೋಂಕು ಇಡೀ ಜಗತ್ತಿಗೆ ವ್ಯಾಪಿಸಿದ್ದಕ್ಕೆ ಚೀನ ಸರಕಾರವನ್ನೇ ಹೊಣೆಗಾರನನ್ನಾಗಿ ಮಾಡುವ ಸಂಬಂಧ ಅಮೆರಿಕ 18 ಅಂಶಗಳ ಯೋಜನೆಯೊಂದನ್ನು ಸಿದ್ಧಪಡಿಸಿದೆ.
ವಿಶೇಷವೇನೆಂದರೆ ಚೀನದ ಹೆಡೆಮುರಿಕಟ್ಟಲು ಭಾರತದೊಂದಿಗೆ ಮಿಲಿಟರಿ ಒಪ್ಪಂದ ಮಾಡಿಕೊಳ್ಳುವ ಅಂಶವೂ ಇದರಲ್ಲಿ ಸೇರಿದೆ.
ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಆರಂಭದಿಂದ ಸುಳ್ಳು ಹೇಳುತ್ತಾ ಬಂದ ಚೀನ, ವೈರಾಣು ವ್ಯಾಪಿಸುವುದಕ್ಕೆ ಹಲವು ಸತ್ಯಗಳನ್ನು ದುರುದ್ದೇಶಪೂರ್ವಕವಾಗಿ ಮುಚ್ಚಿಡುವ ಮೂಲಕ ಜಗತ್ತಿಗೆ ವಂಚನೆ ಮಾಡಿದೆ ಎಂದಿರುವ ಸೆನೆಟರ್ ಥಾಮ್ ಟಿಲ್ಲಿಸ್, ಚೀನ ಮಾಡಿದ ಈ ಮೋಸದಿಂದ ಇಂದು ಲಕ್ಷಾಂತರ ಅಮೆರಿಕನ್ನರು, ಜಗತ್ತಿನಾದ್ಯಂತ ಕೋಟ್ಯಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜತೆಗೆ ಅಮೆರಿಕದ ತಂತ್ರಜ್ಞಾನ, ಉದ್ಯೋಗಗಳನ್ನು ಕದ್ದಿರುವ ಚೀನ, ನಮ್ಮ ಮಿತ್ರರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಬೆದರಿಕೆ ಹಾಕುತ್ತಿದೆ. ಈ ನಿಟ್ಟಿನಲ್ಲಿ ಮಾರಣಾಂತಿಕ ಸೋಂಕು ಜಗತ್ತಿಗೆ ವ್ಯಾಪಿಸಲು ಚೀನ ಸರಕಾರವನ್ನೇ ಹೊಣೆಯಾಗಿಸಲು ಅಮೆರಿಕ 18 ಅಂಶಗಳ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ.
ಉತ್ಪಾದನಾ ಸರಪಳಿಯಿಂದ ಚೀನವನ್ನು ಹೊರಗಿಡುವುದು ಮತ್ತು ಭಾರತ, ವಿಯೆಟ್ನಾಮ್ ಹಾಗೂ ತೈವಾನ್ ಜತೆ ಮಿಲಿಟರಿ ಒಪ್ಪಂದ ಮಾಡಿಕೊಳ್ಳುವುದು ಈ ಯೋಜನೆಯ ಪ್ರಮುಖ ಅಂಶಗಳಾಗಿವೆ.