Advertisement

“ಅಗ್ರ ಕ್ರಮಾಂಕ ಕ್ಲಿಕ್‌ ಆಗಬೇಕು’: ಕೆಎಲ್‌ ರಾಹುಲ್‌

04:37 PM May 17, 2022 | Team Udayavani |

ಮುಂಬಯಿ: ಸದ್ಯ ಸಾಗುತ್ತಿರುವ ಐಪಿಎಲ್‌ ಕೂಟದಲ್ಲಿ ಹೊಸ ತಂಡವಾದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಸತತ ಎರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಈ ಸೋಲಿನಿಂದ ಬೇಸರಗೊಂಡಿರುವ ಲಕ್ನೋ ನಾಯಕ ಕೆಎಲ್‌ ರಾಹುಲ್‌ ಅವರು ಮುಂದಿನ ಪಂದ್ಯಗಳಲ್ಲಿ ನಮ್ಮ ಅಗ್ರ ಕ್ರಮಾಂಕದ ಆಟಗಾರರು ಇನ್ನಷ್ಟು ಉತ್ತಮ ನಿರ್ವಹಣೆ ನೀಡಬೇಕೆಂದು ಹೇಳಿದ್ದಾರೆ.

Advertisement

ಲಕ್ನೋ ತಂಡವು ರವಿವಾರದ ಪಂದ್ಯದಲ್ಲಿ ರಾಜಸ್ಥಾನ್‌ಗೆ 24 ರನ್ನುಗಳಿಂದ ಸೋತಿದೆ. ಲಕ್ನೋ ತಂಡವು ಈ ಕೂಟದಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತಿರುವುದು ಇದೇ ಮೊದಲ ಸಲವಾಗಿದೆ. ಇದರಿಂದಾಗಿ ಅಂಕಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವುದು ಸ್ವಲ್ಪಮಟ್ಟಿಗೆ ಕಷ್ಟಸಾಧ್ಯವಾಗಿದೆ. ಲಕ್ನೋ ತಂಡವು ಬುಧವಾರದ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಎದುರಿಸಲಿದೆ. ಅಗ್ರ ಎರಡರಲ್ಲಿ ಸ್ಥಾನ ಪಡೆಯಬೇಕಾದರೆ ಈ ಪಂದ್ಯದಲ್ಲಿ ಲಕ್ನೋ ಗೆಲ್ಲಬೇಕಾಗಿದೆ.

ನಾನು ಸುಳ್ಳು ಹೇಳುವುದಿಲ್ಲ, ನಿಜವಾಗಿಯೂ ಸ್ವಲ್ಪಮಟ್ಟಿನ ಒತ್ತಡವನ್ನು ಎದುರಿಸುತ್ತಿದ್ದೇವೆ. ಈ ಸ್ಪರ್ಧೆಯಲ್ಲಿ ಯಾವುದೂ ಸುಲಭವಾಗಿ ಬರುವುದಿಲ್ಲ. ನಾವು ಕಠಿನ ಪ್ರಯತ್ನಪಡುವ ಮೂಲಕ ಎಲ್ಲವನ್ನೂ ಕಲಿಯಬೇಕಾಗಿದೆ ಎಂದು ರಾಹುಲ್‌ ಹೇಳಿದರು.

ಒಂದು ವೇಳೆ ರಾಜಸ್ಥಾನ ವಿರುದ್ಧ ಜಯಸಿದ್ದರೆ ನಾವು ಆರಾಮವಾಗಿ ಕುಳಿತುಕೊಳ್ಳಬಹುದಿತ್ತು ಮತ್ತು ಪ್ಲೇ ಆಫ್ ಗೆ ತೇರ್ಗಡೆಯಾದ ಖುಷಿಯಲ್ಲಿ ಅಂತಿಮ ಲೀಗ್‌ ಪಂದ್ಯದಲ್ಲಿ ಮುಕ್ತ ಮನಸ್ಸಿನಿಂದ ಆಡಬಹುದಿತ್ತು ಎಂದು ರಾಜಸ್ಥಾನ ವಿರುದ್ಧದ ಪಂದ್ಯದ ಬಳಿಕ ಹೇಳಿದರು.

ಗೆಲ್ಲಲು 179 ರನ್‌ ಗಳಿಸುವ ಸವಾಲು ಪಡೆದಿದ್ದ ಲಕ್ನೋ ತಂಡವು ಒಂದು ಹಂತದಲ್ಲಿ 29 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿದ್ದರಿಂದ ನಾವು ಒತ್ತಡದಲ್ಲಿ ಸಿಲುಕಿದೆವು ಎಂದರು. ಮಾರ್ಕಸ್‌ ಸ್ಟೋಯಿನಿಸ್‌ ಅವರನ್ನು ಕೆಳಗಿನ ಕ್ರಮಾಂಕದಲ್ಲಿ ಆಡಿಸಿದ ಬಗ್ಗೆ ವಿವರಣೆಯನ್ನು ಕೂಡ ರಾಹುಲ್‌ ನೀಡಿದರು.

Advertisement

ಪರಿಸ್ಥಿತಿಗೆ ಯಾರು ಹೊಂದಿಕೊಳ್ಳುತ್ತಾರೆ ಎಂಬುದನ್ನು ಪ್ರಯತ್ನಿಸಲು ನಾವು ಆಟಗಾರರನ್ನು ಉಪಯೋಗಿಸಿದೆವು. ಅಂತಹ ಪ್ರಯತ್ನಕ್ಕೆ ನಾವು ಮಾರ್ಕಸ್‌ ಅವರನ್ನು ಉಪಯೋಗಿಸಿಕೊಂಡೆವು. ಅವರು ಯಾವುದೇ ಪರಿಸ್ಥಿತಿಯಲ್ಲೂ ತಂಡವನ್ನು ಆಧರಿಸುತ್ತಾರೆಂಬ ನಂಬಿಕೆ ನಮಗಿದೆ ಎಂದು ರಾಹುಲ್‌ ತಿಳಿಸಿದರು.

ನಾವು ಪ್ರತಿಯೊಬ್ಬರಿಗೂ ವಿಭಿನ್ನ ಪಾತ್ರವನ್ನು ವಹಿಸಿದ್ದೇವೆ. ಯಾವ ಓವರಿನಲ್ಲಿ ಕೆಲವು ಔಟ್‌ ಆಗುತ್ತಾರೆ ಮತ್ತು ಯಾರು ಆಟಲಿಕ್ಕೆ ಇಳಿಯುತ್ತಾರೆ ಎಂಬುದನು ಅವಲಂಭಿಸಿ ಆಟಗಾರರ ಪಾತ್ರವನ್ನು ನಿರ್ಣಯಿಸಲಾಗುತ್ತದೆ. ಹಾಗಾಗಿ ಬ್ಯಾಟಿಂಗ್‌ ನಿಯಮವನ್ನು ನಾವು ಬಹಳಷ್ಟು ಹಗುರಗೊಳಿಸಿದ್ದೇವೆ. ಈ ನಿಮಯದಂತೆ ನಾವು ಸ್ಟೋಯಿನಿಸ್‌ ಅವರನ್ನು ಆಯ್ಕೆ ಮಾಡಿದ್ದೆವು. ಅವರು ನಮ್ಮ ತಂಡದ ಫಿನಿಶರ್‌ ಆಟಗಾರರಲ್ಲಿ ಒಬ್ಬರು ಎಂದು ರಾಹುಲ್‌ ವಿವರಿಸಿದರು.

ಇಂತಹ ಪ್ರಮುಖ ಆಟಗಾರರಿಗೆ ಕ್ರೀಸ್‌ನ ಇನ್ನೊಂದು ತುದಿಯಲ್ಲಿರುವ ಆಟಗಾರ ಉತ್ತಮ ಬೆಂಬಲ ನೀಡಿದರೆ ಉತ್ತಮ. ಅವರಿಇಗೆ ಮತ್ತು ತಂಡಕ್ಕೆ ಅಗ್ರ ಕ್ರಮಾಂಕದ ಆಟಗಾರರು ಅಮೋಘವಾಗಿ ಆಡಿ ಪಂದ್ಯವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡರೆ ಯಾವುದೇ ತೊಂದರೆಯಿಲ್ಲ. ಸ್ಟೋಯಿನಿಸ್‌ ಮತ್ತು ಹೋಲ್ಡರ್‌ ಅವರಿಗೆ ಉತ್ತಮ ಬೆಂಬಲ ನೀಡುವವರು ಸಿಕ್ಕಿದರೆ ಪಂದ್ಯದ ಗತಿ ಬದಲಾಗುವ ಸಾಧ್ಯತೆಯಿದೆ. ದುರದೃಷ್ಟವಶಾತ್‌ ಅವರಿಗೆ ಉತ್ತಮ ಬೆಂಬಲ ಸಿಕ್ಕಿಲ್ಲ ಎಂದು ರಾಹುಲ್‌ ತಿಳಿಸಿದರು.

ಲಕ್ನೋ ವಿರುದ್ಧ ಗೆದ್ದ ರಾಜಸ್ಥಾನ್‌ ತಂಡವು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ತಂಡದ ಯಾವುದೇ ಆಟಗಾರ ಅರ್ಧಶತಕ ಹೊಡೆಯದಿದ್ದರೂ ರಾಜಸ್ಥಾನ್‌ ತಂಡವು ಉತ್ತಮ ಮೊತ್ತವನ್ನು ಪೇರಿಸಿತ್ತು. ಇದು ನಮ್ಮ ತಂಡದ ಸಾಮರ್ಥ್ಯ. ಈ ಪಂದ್ಯದಲ್ಲಿ ಗೆದ್ದಿರುವುದನ್ನು ನೋಡಿದರೆ ತಂಡದ ಪ್ರತಿಯೊಬ್ಬ ಆಟಗಾರ ಗೆಲುವಿಗಾಗಿ ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ಆಟಗಾರರು 10-20 ರನ್‌ ಗಳಿಸಿದ್ದರೂ ಗೆಲುವಿಗೆ ಇದು ನಿರ್ಣಾಯಕ ಎಂದು ನಾಯಕ ಸಂಜು ಸ್ಯಾಮ್ಸನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next