ಬಾಗೇಪಲ್ಲಿ: ರಾಜ್ಯ ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮಗೆ ಟಿಕೆಟ್ ನೀಡಿದರೆ ಮೇ ನಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಆರ್.ಮನೋಹರ್ ತಿಳಿಸಿದರು. ತಾಲೂಕಿನ ಕದಿರನ್ನಗಾರಿಪಲ್ಲಿ, ಐವಾರ‌್ಲಪಲ್ಲಿ, ಗುರ್ರಾಲದಿನ್ನ ಹಾಗೂ ಸಾಯಿಬಾಬಾ ಮಂದಿರ ಬಳಿ ಗುರುವಾರ ಹೈಮಾಸ್ಟ್ ದೀಪಗಳಿಗೆ ಚಾಲನೆ ನೀಡಿ ಮಾತನಾಡಿದರು.
ತನಗೆ ರಾಜಕೀಯವಾಗಿ ಜನ್ಮ ನೀಡಿದ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳ ಜನರನ್ನು ಎಂದೂ ಮರೆಯುವುದಿಲ್ಲ. ವಿಧಾನಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಈ ಎರಡು ತಾಲೂಕುಗಳ ಮತದಾರರು ತನ್ನ ಪರ ಹೆಚ್ಚಾಗಿ ಮತ ಚಲಾಯಿಸಿ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದ್ದಾರೆ. ಈಗ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರು, ಅಭಿಮಾನಿಗಳು ತನ್ನ ಮೇಲೆ ಒತ್ತಡ ತರುತ್ತಿದ್ದಾರೆಂದರು.
ಈ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅನೇಕರು ಆûಾಂಕ್ಷಿಗಳಿದ್ದಾರೆ. ಅವರನ್ನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಂಡು ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೋ ಕಾದು ನೋಡಬೇಕಾಗಿದೆ. ಫೆ.17ಕ್ಕೆ ರಾಜ್ಯ ಜೆಡಿಎಸ್ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು ಆಗ ಟಿಕೆಟ್ ಯಾರಿಗೆ ಎಂದು ಖಾತ್ರಿಯಾಗುತ್ತದೆ ಎಂದು ಹೇಳಿದರು.
ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನಲ್ಲಿ ಸರ್ಕಾರದಿಂದ ಬಂದಿರುವ ಅನುದಾನವನ್ನು ತಾನು ಪ್ರಾಮಾಣಿಕವಾಗಿ ವಿತರಣೆ ಮಾಡಿದ್ದೇನೆ. ತಾಲೂಕಿನಲ್ಲಿ ಬಸ್ ತಂಗುದಾಣ, ಹೈಮಾಸ್ಟ್ ದೀಪ, ಶುದ್ಧ ನೀರಿನ ಘಟಕ ಸೇರಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ. ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ರಸ್ತೆಗಳೇ ಇಲ್ಲವಾಗಿದೆ. ಹಾಲಿ ಇರುವ ರಸ್ತೆಗಳು ಹಳ್ಳ ಗುಣಿಗಳಿಂದ ಕೂಡಿದ್ದು ಸಂಚಾರಕ್ಕೆ ಯೋಗ್ಯವಲ್ಲವಾಗಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹ ಬೇಡ. ಮುಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಚಿತ. ಕರ್ನಾಟಕ ಜನರು ಬಿಜೆಪಿ ಮತ್ತು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಲಿದ್ದಾರೆಂದರು. ಜೆಡಿಎಸ್ ರಾಜ್ಯ ಮುಖಂಡ ಸಿ.ಆರ್.ಗೋಪಿ, ತಾಪಂ ಸದಸ್ಯ ಕೆ.ಎನ್.ರಾಮಕೃಷ್ಣಾರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ಎ.ವಿ.ಪೂಜಪ್ಪ,
ಮಾಜಿ ಸದಸ್ಯ ಸಿ.ಡಿ.ಗಂಗುಲಪ್ಪ, ವಿಧಾನಸಭೆ ಕ್ಷೇತ್ರದ ಉಸ್ತುವಾರಿ ಕೋನಪ್ಪರೆಡ್ಡಿ, ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಲಕ್ಷಿನಾರಾಯಣ, ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ಡು ಹಾಗೂ ಮುಖಂಡರಾದ ಶ್ರೀನಿವಾಸ(ಜಿನ್ನಿ) ಗೂಳೂರು ಲಕ್ಷಿನಾರಾಯಣ, ಪ್ರದೀಪ್, ಎ.ಸೂರ್ಯನಾರಾಯಣರೆಡ್ಡಿ, ಪುರಸಭೆ ಮಾಜಿ ಸದಸ್ಯ ಮಹಮದ್ ನೂರುಲ್ಲಾ ಮತ್ತಿತರರಿದ್ದರು.