Advertisement

BJP ವರಿಷ್ಠರು ಮೌನವಾಗಿದ್ದಾರೆಂದರೆ ಏನೋ ದೊಡ್ಡದೇ ನಡೆಯಲಿದೆ: ಯತ್ನಾಳ

06:12 PM Oct 04, 2023 | keerthan |

ವಿಜಯಪುರ : ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ. ಹುಬ್ಬಳ್ಳಿಯಲ್ಲಿ ಸ್ವಯಂ ಗೆಲ್ಲಲಾಗದ ಜಗದೀಶ ಶೆಟ್ಟರ ಸೋತವರನ್ನೇ ಕಾಂಗ್ರೆಸ್ ಪಕ್ಷಕ್ಕೆ ಕರೆದೊಯ್ಯುತ್ತಿದ್ದಾರೆ, ಎಷ್ಟು ಜನರನ್ನು ಕರೆದೊಯ್ಯುತ್ತಾರೆ ಕರೆದೊಯ್ಯಲಿ, ವೇಸ್ಟ್ ಬಾಡಿಗಳೆಲ್ಲ ಹೋಗಲಿ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದ್ದಾರೆ.

Advertisement

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಾವೇ ಗೆಲ್ಲಲಾಗದ ಶೆಟ್ಟರ್ ಆಪರೇಷನ್ ಹಸ್ತದ ಜವಾಬ್ದಾರಿ ಹೊರಲು ಮುಂದಾಗಿದ್ದಾರೆ ಎಂದು ಛೇಡಿಸಿದ ಯತ್ನಾಳ, ಲಕ್ಷ್ಮಣ ಸವದಿ ಅವರು ಪಕ್ಷ ತೊರೆದುದರಿಂದ ಬಿಜೆಪಿ ಸೋತಿಲ್ಲ. ಬದಲಾಗಿ ನಮ್ಮ ಸರ್ಕಾರ ಅಂತಿಮ ಘಳಿಗೆಯಲ್ಲಿ ತರಾತುರಿಯಲ್ಲಿ ಘೋಷಿಸಿ ಮೀಸಲಾತಿ ಘೋಷಿಸಿದ್ದು, ಜನರಿಗೆ ಮನವರಿಕೆ ಮಾಡಿಕೊಡಲಾಗಲಿಲ್ಲ ಎಂದು ವಿಧಾನಸಭೆ ಚುನಾವಣೆ ಸೋಲನ್ನು ವಿಮರ್ಶಿಸಿದರು.

ನಮ್ಮ ಸರ್ಕಾರದಲ್ಲಿನ ಕೆಲವು ಲೋಪಗಳು ದೊಡ್ಡ ಮಟ್ಟದಲ್ಲಿ ಪ್ರಚಾರವಾಗಿ, ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳು ಜನರನ್ನು ಬೇಗ ತಲುಪಿದವು. ಹೀಗಾಗಿ ಬಿಜೆಪಿ ಸೋಲು ಅನುಭವಿಸಿತೇ ಹೊರತು, ಈ ಮಹಾತ್ಮರು ಕಾಂಗ್ರೆಸ್ ಸೇರಿದ್ದಕ್ಕೆ ನಮಗೆ ಸೋಲಾಗಿಲ್ಲ ಎಂದು ಜಗದೀಶ ಶಟ್ಟರ ಹಾಗೂ ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದರು.

ಎಲ್ಲವನ್ನೂ ಉಚಿತವಾಗಿ ಕೊಟ್ಟರೆ ದುಡಿಯುವ ಜನರೇ ಇಲ್ಲವಾಗಿ ಸಮಸ್ಯೆಯಾಗುತ್ತದೆ. ಇಷ್ಟಕ್ಕೂ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಉಚಿತ ಲಸಿಕೆ ನೀಡಿದಂತಹ ಕಾರ್ಯಕ್ರಮಗಳು ಜನರನ್ನು ತಲುಪಬೇಕು ಎಂದರು.

ಕಾಂಗ್ರೆಸ್ ಪಕ್ಷಕ್ಕಿಂತ ಮೊದಲು ನಾವೇ ಬಡತನ ರೇಖೆಗಿಂತ ಕಡಿಮೆ ಇರುವ ಎಲ್ಲ ಕುಟುಂಬಗಳಿಗೆ 3 ಸಾವಿರ ರೂ. ನೀಡುವ ಘೋಷಣೆ ಮಾಡಬೇಕೆಂದು ವರಿಷ್ಟರಲ್ಲಿ ಮನವಿ ಮಾಡಿದ್ದೆವು. ಆದರೆ ಇಂಥ ಯೋಜನೆಗಳ ಘೋಷಣೆಯಿಂದ ದೇಶ ಆರ್ಥಿಕ ನಾಶವಾಗಲಿದೆ ಎಂದು ಪ್ರಧಾನಿ ಮೋದಿ ಸೇರಿದಂತೆ ಇತರೆ ನಾಯಕರು ನಿರಾಕರಿಸಿದರು ಎಂದು ವಿವರಿಸಿದರು.

Advertisement

ಲೋಕಸಭಾ ಚುನಾವಣೆ ಹಿನ್ನಲೆ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ನಡೆಯುತ್ತಿವೆ. ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರುವುದಾಗಿ ಘೋಷಿಸಿರಬಹುದು. ಆದರೆ ಅವರ ಕ್ಷೇತ್ರದಲ್ಲಿ ಅದಾಗಲೇ ಕಾಂಗ್ರೆಸ್ ಶಾಸಕರಿದ್ದು, ಅಲ್ಲಿಗೆ ಹೋಗಿ ರಾಮಣ್ಣ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:12 ಕೋಟಿಯಿಂದ 2000 ಕೋಟಿ:ರಾಜಮೌಳಿ ಸಿನಿಮಾ ಕಲೆಕ್ಷನ್ ಎಷ್ಟು?ಇವರು ಬಾಕ್ಸ್ ಆಫೀಸ್ ‘ಬಾಹುಬಲಿ’

ಇಷ್ಟಕ್ಕೂ 75 ವರ್ಷ ಅಧಿಕಾರ ಅನುಭವಿಸಿದವರು ಈಗಲೂ ಆಧಿಕಾರ ಬೇಕೆಂದರೆ ಹೇಗೆ, ಹಳಬರು ಬದಲಾಗಿ ಹೊಸಬರಿಗೆ ಅವಕಾಶ ನೀಡಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ಇವರು ಬಿಜೆಪಿ ತೊರೆದರೆ ಅಲ್ಲಿಂದ ಬಿಜೆಪಿ ಪಕ್ಷಕ್ಕೆ ಹೊಸ ಮಂದಿ ಬರುತ್ತಾರೆ, ಹೊಸ ತಲೆಮಾರಿನ ಜನರು ಭವಿಷ್ಯದಲ್ಲಿ ಶಾಸಕರಾದರೆ ಕ್ರಿಯಾಶೀಲ ಹಾಗೂ ಉತ್ತಮವಾಗಿ ಕೆಲಸ ಮಾಡುತ್ತಾರೆ. ದೇಶ, ಧರ್ಮ ಬೇಡದವರು ಬಿಜೆಪಿ ತೊರೆಯುತ್ತಾರೆ ಎಂದು ಅಸಮಾಧಾನ ಹೊರ ಹಾಕಿದರು.

ಬಿಜೆಪಿಯಲ್ಲಿ ವಿರೋಧ ಪಕ್ಷ ನಾಯಕನ ಆಯ್ಕೆಯನ್ನು ಬೇಗ ಮುಗಿಸುವಂತೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಬಿಜೆಪಿ ನಾಯಕರು ವಿಧಾನಸಭೆ ವಿಪಕ್ಷದ ನಾಯಕನ ನೇಮಕದ ವಿಷಯದಲ್ಲಿ ಮೌನವಾಗಿದ್ದಾರೆ ಎಂದರೆ ಏನೋ ದೊಡ್ಡದು ನಡೆದಿದೆ. ವಿರೋಧ ಪಕ್ಷ ಬೇಡವೇ ಬೇಡ, ಒಮ್ಮೆಲೇ ಮುಖ್ಯಮಂತ್ರಿ ಮಾಡೋಣ ಎಂಬುದು ಇದ್ದರೆ ಎಂದು ಪ್ರಶ್ನಿಸುವ ಮೂಲಕ ರಾಜಕೀಯವಾಗಿ ಹೊಸ ಅನುಮಾನ ಹುಟ್ಟುಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next