ಶ್ರೀನಗರ : ಮಹತ್ತರ ಸೀಮೋಲ್ಲಂಘನೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಇಬ್ಬರು ಉನ್ನತ ಹಿಜ್ಬುಲ್ ಮುಜಾಹಿದೀನ್ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಇಬ್ಬರು ಉಗ್ರರಲ್ಲಿ ಒಬ್ಟಾತನನ್ನು ಮನಾನ್ ಬಶೀರ್ ವಾನಿ ಎಂದು ಗುರುತಿಸಲಾಗಿದ್ದು ಈತನ ಮಾಜಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದಾನೆ.
ಉಗ್ರ ಮನಾನ್ ವಾನಿ ಆಲೀಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ಪಿಎಚ್‌ಡಿ ಅಧ್ಯಯನಕ್ಕೆ ನೋಂದಾವಣೆ ಮಾಡಿಕೊಂಡಿದ್ದ; ಈ ವರ್ಷ ಜನವರಿಯಲ್ಲಿ ಆತ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದ.
ಹಂದ್ವಾರಾದಲ್ಲಿ ಉಗ್ರರಿಬ್ಬರ ಹತ್ಯೆ ನಡೆದಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಉಗ್ರರ ಸಾವಿಗೆ ವಿಷಾದಿಸಿರುವುದಾಗಿ ವರದಿಯಾಗಿದೆ. ವಾನಿ ಹತ್ಯೆಗೆ ವಿಷಾದಿಸಿದ ಮೆಹಬೂಬ, ”ಶಾಂತಿ ಮಾತುಕತೆ ಮೂಲಕ ಕಾಶ್ಮೀರ ಕಣಿವೆಯಲ್ಲಿನ ರಕ್ತಪಾತವನ್ನು ಕೊನೆಗೊಳಿಸಬೇಕಾಗಿದೆ” ಎಂದು ಹೇಳಿದರು.
27ರ ಹರೆಯದ ವಾನಿ, ಇನ್ನಿಬ್ಬರು ಉಗ್ರರೊಂದಿಗೆ ಅಡಗಿಕೊಂಡಿದ್ದಾನೆ ಎಂಬ ಖಚಿತ ಗುಪ್ತಚರ ಮಾಹಿತಿಯನ್ನು ಅನುಸರಿಸಿ ಉತ್ತರ ಕಾಶ್ಮೀರದ ಹಂದ್ವಾರಾದ ಸಾತ್‌ಗಂದ್ ನಲ್ಲಿ ಇಂದು ನಸುಕಿನ ಎನ್‌ಕೌಂಟರ್‌ನಲ್ಲಿ ವೇಳೆ ನಡೆಸಲಾಗಿತ್ತು. ಬೆಳಗ್ಗೆ 11 ಗಂಟೆಯ ತನಕವೂ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಕಾಳಗ ನಡೆದಿತ್ತು.
ಎನ್‌ಕೌಂಟರ್ ವೇಳೆ ಜಮ್ಮು ಕಾಶ್ಮೀರ ಪೊಲೀಸರು ಪದೇ ಪದೇ ಮೈಕ್‌ನಲ್ಲಿ ಉಗ್ರರಿಗೆ ಶರಣಾಗುವಂತೆ ಕೇಳಿಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಗುಂಡಿನ ಸದ್ದು ನಿಂತಾಗ ಪೊಲೀಸರು ಉಗ್ರರ ಶೋಧ ಕಾರ್ಯಾಚರಣೆ ಆರಂಭಿಸಿದರು. ಆಗ ಮತ್ತೆ ಉಗ್ರರು ಪೊಲೀಸರ ಮೇಲೆ ಗುಂಡೆಸೆಯಲು ಆರಂಭಿಸಿದಾಗ ಭದ್ರತಾ ಪಡೆಗಳು ಗುಂಡಿನ ಪ್ರತ್ಯುತ್ತರ ನೀಡಿದರು.