Advertisement

ಶಬರಿಮಲೆ: ಮತ್ತೆ ಸುಪ್ರೀಂಗೆ

04:10 AM Oct 09, 2018 | Karthik A |

ಹೊಸದಿಲ್ಲಿ/ತಿರುವನಂತಪುರ : ಶಬರಿಮಲೆ ಅಯ್ಯಪ್ಪ ದೇಗುಲವನ್ನು ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ತೀರ್ಪಿಗೆ ಕೇರಳದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಕಾನೂನು ಹೋರಾಟ ಆರಂಭವಾಗಿದೆ. ಸೋಮವಾರ ಒಂದೇ ದಿನ ತೀರ್ಪಿನ ಮರುಪರಿಶೀಲನೆ ಕೋರಿ 4 ಅರ್ಜಿಗಳು ಸಲ್ಲಿಕೆಯಾಗಿವೆ. ಇದೇ ವೇಳೆ ರಾಜಕೀಯ ಪಕ್ಷಗಳಿಂದಲೂ ಪರ- ವಿರೋಧದ ವಾಗ್ವಾದ ಬಿರುಸಾಗಿ ನಡೆದಿದೆ. ಶನಿ ಶಿಂಗಣಾಪುರ ದೇಗುಲಕ್ಕೆ, ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರು ಪ್ರವೇಶಿಸಬಹುದೆಂದು ಬಾಂಬೆ ಹೈಕೋರ್ಟ್‌ ತೀರ್ಪು ನೀಡಿದ್ದಾಗ ಅನುಷ್ಠಾನಗೊಳಿಸಿದ್ದ ಬಿಜೆಪಿ ಈಗ ಏಕೆ ವಿರೋಧಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರಶ್ನಿಸಿದ್ದಾರೆ.

Advertisement

ನಾಲ್ಕು ಅರ್ಜಿಗಳು
ಕೇರಳ ಸರಕಾರ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದ ಬೆನ್ನಲ್ಲೇ ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಸ್ಥೆ, ಪಂದಳ ರಾಜ ಮನೆತನ, ದೇಗುಲದ ಮುಖ್ಯ ಅರ್ಚಕರು, ನಾಯರ್‌ ಸರ್ವಿಸ್‌ ಸೊಸೈಟಿ ತೀರ್ಪು ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿವೆ. ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಸ್ಥೆ ಅಧ್ಯಕ್ಷೆ ಶೈಲಜಾ ವಿಜಯನ್‌ ಮಾತನಾಡಿ, ತೀರ್ಪು ಸ್ವೀಕಾರಾರ್ಹವಲ್ಲ ಮತ್ತು ವಿವೇಚನಾ ರಹಿತ. ಹಿಂದೂ ಭಾವನೆಗೆ ವ್ಯತಿರಿಕ್ತ ವಾಗಿದೆ ಎಂದು ಅರಿಕೆ ಮಾಡಿಕೊಂಡಿದ್ದಾರೆ. ಪಂದಳ ರಾಜ ಮನೆತನದ ಶಶಿಕುಮಾರ್‌ ವರ್ಮಾ ಮಾತನಾಡಿ, ನಮ್ಮ ಅರ್ಜಿಯನ್ನು ಮಾನ್ಯ ಮಾಡಿ ಸುಪ್ರೀಂ ಕೋರ್ಟ್‌ ಪರಿಹಾರ ಸೂಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಪ್ರದಾಯಗಳಿಗೆ ಧಕ್ಕೆ
ಅಯ್ಯಪ್ಪ ದೇಗುಲದ ಮುಖ್ಯ ಅರ್ಚಕ ಮೋಹನಾರು ಕಂದರಾರು, ಕೇರಳ ಸರಕಾರದ ಜತೆ ಮಾತುಕತೆ ನಡೆಸಿ ಪ್ರಯೋಜನವಿಲ್ಲ ಎಂದಿದ್ದಾರೆ. ಮಹಿಳಾ ಪೊಲೀಸರ ನಿಯೋಜನೆ ಬಗ್ಗೆ ಪೊಲೀಸ್‌ ಮಹಾನಿರ್ದೇಶಕ ಲೋಕನಾಥ್‌ ಬೆಹರ ಹೇಳಿಕೆಯನ್ನು ಟೀಕಿಸಿರುವ ಅವರು, ಮಹಿಳಾ ಪೊಲೀಸರು ದೇಗುಲ ಆವರಣ ಪ್ರವೇಶಿಸಿದರೆ ಪಾವಿತ್ರ್ಯ ಕೆಡಲಿದೆ ಎಂದಿದ್ದಾರೆ.

ಅಧ್ಯಾದೇಶ ಜಾರಿಗೊಳಿಸಿ: ಶಬರಿಮಲೆ ಪಾವಿತ್ರ್ಯ ರಕ್ಷಣೆಗಾಗಿ ಅಧ್ಯಾದೇಶ ಹೊರಡಿಸಬೇಕೆಂದು ತೆಲಂಗಾಣದಲ್ಲಿರುವ ದೇಗುಲ ರಕ್ಷಣಾ ಸಮಿತಿಯ ಅಧ್ಯಕ್ಷ ಎಂ.ವಿ. ಸುಂದರ ರಾಜನ್‌ ಹೇಳಿದ್ದಾರೆ.

ನಾಳೆಯಿಂದ ಬಿಜೆಪಿ ಯಾತ್ರೆ
ಕೇರಳ ಬಿಜೆಪಿ ಘಟಕ ಬುಧವಾರದಿಂದ ‘ಅಯ್ಯಪ್ಪ ದೇಗುಲ ರಕ್ಷಿಸಿ’ ಎಂಬ ಐದು ದಿನಗಳ ಯಾತ್ರೆಯನ್ನು ಪಂದಳದಿಂದ ತಿರುವನಂತಪುರದವರೆಗೆ ನಡೆಸುವುದಾಗಿ ಘೋಷಿಸಿದೆ. ಕೊಚ್ಚಿಯಲ್ಲಿ ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಮಾತನಾಡಿ, ಎಲ್‌ಡಿಎಫ್ ಸರಕಾರ ಹಿಂದೂಗಳನ್ನು ಒಡೆಯಲು ಮುಂದಾಗಿದೆ ಎಂದು ದೂರಿದ್ದಾರೆ. ಸುಪ್ರೀಂ ತೀರ್ಪು ಜಾರಿಗೆ ಆತುರ ತೋರುವ ಮೂಲಕ ಇಂಥ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಕೇರಳದ ಮತ್ತೂಬ್ಬ ಬಿಜೆಪಿ ನಾಯಕ ಪಿ.ಪಿ. ಮುಕುಂದನ್‌, ಪ್ರಧಾನಿ ಮೋದಿಗೆ ಪತ್ರ ಬರೆದು ವಿವಾದ ಪರಿಹರಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸಬೇಕೆಂದು ಕೋರಿದ್ದಾರೆ.

Advertisement

ಒಗ್ಗಟ್ಟು ನಾಶಕ್ಕೆ ಯತ್ನ
ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದಿರುವ ಕೇರಳ ಸಿಎಂ ಪಿಣರಾಯಿ ವಿಜಯನ್‌, ಶನಿ ಶಿಂಗಣಾಪುರ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂಬ ಬಾಂಬೆ ಹೈಕೋರ್ಟ್‌ ತೀರ್ಪನ್ನು ಅನುಷ್ಠಾನಿಸಿದ್ದ ಬಿಜೆಪಿ ಶಬರಿಮಲೆ ತೀರ್ಪಿಗೇಕೆ ವಿರೋಧಿಸುತ್ತಿದೆ? ಪರಿಸ್ಥಿತಿಯ ಲಾಭ ಪಡೆದು ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಹಾಳುಗೆಡವಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮುಂದಾಗಿವೆ ಎಂದು ದೂರಿದ್ದಾರೆ. ಹಿಂದೆ ಋತುಮತಿ ಸ್ತ್ರೀಯರು ಅಡುಗೆ ಮನೆಗೂ ಪ್ರವೇಶಿಸುವಂತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪ್ರಗತಿಪರ ತೀರ್ಪನ್ನು ಎಲ್ಲರೂ ಸ್ವೀಕರಿಸಬೇಕು. ಕೋಮುವಾದಿಗಳ ಜತೆಗೆ ಕಾಂಗ್ರೆಸ್‌ ಸೇರಿಕೊಂಡರೆ ನಾಶವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಶಬರಿಮಲೆ ದೇಗುಲ 
ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಅಂಶಗಳಿಂದ ನೋವು ಉಂಟಾಗಿದೆ. ಶತಮಾನಗಳಿಂದ ಇರುವ ಸಂಪ್ರದಾಯದ ಉಲ್ಲಂಘನೆ ಸರಿಯಲ್ಲ.
– ಅಶ್ವತಿ ತಿರುನಾಳ್‌ ಗೌರಿ ಲಕ್ಷ್ಮೀಬಾಯಿ, ತಿರುವಾಂಕೂರು ರಾಜವಂಶಸ್ಥೆ

ಯುಡಿಎಫ್ ಅಯ್ಯಪ್ಪ ಭಕ್ತರ ಪರವಾಗಿದೆ. ಅವರ ಭಾವನೆಗಳಿಗೆ ಧಕ್ಕೆ ಮಾಡುವ ಯಾರಿಗೂ ಬೆಂಬಲ ನೀಡುವುದಿಲ್ಲ. ಜತೆಗೆ ಶಬರಿಮಲೆಯನ್ನು ರಣಕ್ಷೇತ್ರವನ್ನಾಗಿ ಮಾಡಲು ಅವಕಾಶ ಕೊಡುವುದಿಲ್ಲ.
– ರಮೇಶ್‌ ಚೆನ್ನಿತ್ತಲ, ಕೇರಳ ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next