Advertisement

ರಕ್ತನಾಳ ಹೆಪ್ಪುಗಟ್ಟುವಿಕೆ ತಡೆಗೆ ಉಪಕರಣ

11:43 AM Nov 30, 2018 | |

ಬೆಂಗಳೂರು: ಕೋಮಾ ಸ್ಥಿತಿ ತಲುಪಿರುವ ರೋಗಿಗಳು ರಕ್ತನಾಳ ಹೆಪ್ಪುಗಟ್ಟುವಿಕೆ (ಡೀಪ್‌ ವೇಯ್ನ ಥ್ಯಾಂಬೋಸಿಸ್‌) ಸಮಸ್ಯೆಗೆ ಎದುರಾಗದಂತೆ ಇಂಟರ್‌ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್ ಇನ್ಫಾರ್ಮೇಷನ್‌ ಟೆಕ್ನಾಲಜಿ ಹಾಗೂ ನಿಮ್ಹಾನ್ಸ್‌ ಸಂಸ್ಥೆಗಳು ರೋಬೋಟಿಕ್‌ ಉಪಕರಣಗಳನ್ನು ಅಭಿವೃದ್ಧಿಪಡಿಸಿವೆ.

Advertisement

ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ವಿಜ್ಞಾನ ಇಲಾಖೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ “ಇನ್ನೋವೇಷನ್‌ ಅಂಡ್‌ ಇಂಪ್ಯಾಕ್ಟ್’ ಘೋಷವಾಕ್ಯದಡಿ ಗುರುವಾರ ಆರಂಭವಾದ ಮೂರು ದಿನಗಳ “ಬೆಂಗಳೂರು ಟೆಕ್‌ ಸಮಿಟ್‌’ ಕಾರ್ಯಕ್ರಮದಲ್ಲಿ ರೋಬೋಟಿಕ್‌ ಯಂತ್ರೋಪಕರಣಗಳು ಅನಾವರಣಗೊಂಡಿದ್ದು, ರಕ್ತನಾಳ ಹೆಪ್ಪುಗಟ್ಟುವಿಕೆ ತಡೆಯುವ ಉಪಕರಣಗಳು ಗಮನ ಸೆಳೆದವು.

ಅಪಘಾತ, ಪಾರ್ಶ್ವವಾಯು, ಮೆದುಳು ಜ್ವರ ಕಾಣಿಸಿಕೊಂಡ ಸಂದರ್ಭಗಳಲ್ಲಿ ರೋಗಿಗಳು ಕೋಮಾ ಸ್ಥಿತಿ ತಲುಪುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ಅರವಳಿಕೆ (ಅನಸ್ತೀಶಿಯಾ) ನೀಡುವ ವೇಳೆ ಯಡವಟ್ಟಾದರೂ ರೋಗಿಗಳು ಕೋಮಾ ಸ್ಥಿತಿ ತಲುಪುವ ಅಪಾಯವಿರುತ್ತದೆ. ರೋಗಿಗಳು ಕೋಮಾ ಸ್ಥಿತಿ ತಲುಪಿದಾಗ ಅವರ ಕೈ-ಕಾಲುಗಳಲ್ಲಿ ಚಲನೆ ಸ್ಥಗಿತಗೊಳ್ಳುತ್ತದೆ. 

ಫಿಸಿಯೋ ಥೆರಪಿಸ್ಟ್‌ಗಳು ಚಿಕಿತ್ಸೆ ನೀಡಿದರೂ ಹೆಚ್ಚು ಸಮಯ ಕೈ-ಕಾಲುಗಳು ಒಂದೇ ಕಡೆ ಚಲನೆಯಿಲ್ಲದೆ ಇರುವುದರಿಂದ ರಕ್ತನಾಳ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಒಂದೊಮ್ಮೆ ರೋಗಿಯು ಕೋಮಾ ಸ್ಥಿತಿಯಿಂದ ಚೇತರಿಸಿಕೊಂಡರೂ, ಕೈ-ಕಾಲುಗಳ ಚಲನೆಯಿಲ್ಲದೆ ಕಾಣಿಸಿಕೊಳ್ಳುವ ರಕ್ತನಾಳ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಮತ್ತೆ ಆಸ್ಪತ್ರೆ ಸೇರಬೇಕಾಗುತ್ತದೆ.

ಅಂತಹ ರೋಗಿಗಳ ಅನುಕೂಲಕ್ಕಾಗಿ ಐಐಐಟಿ ಬೆಂಗಳೂರು ಹಾಗೂ ನಿಮ್ಹಾನ್ಸ್‌ ಸಂಸ್ಥೆಗಳ ಸರ್ಜಿಕಲ್‌ ಆಂಡ್‌ ಅಸಿಸ್ಟೀವ್‌ ರೋಬೋಟಿಕ್ಸ್‌ ಲ್ಯಾಬ್‌ನಲ್ಲಿ ರಕ್ತನಾಳ ಹೆಪ್ಪುಗಟ್ಟುವಿಕೆ ತಡೆಯುವ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೈಗಳಿಗೆ ಅಂತ್ರೋಮೆಟ್ರಿಕ್‌ ಅಸೆಸ್ಟೀವ್‌ ಎಲೆಕ್ಟ್ರೋಮೆಕಾನಿಕಲ್‌ ಡಿವೈಸ್‌ ಹಾಗೂ ಕಾಲುಗಳಿಗೆ ಡಿವಿಟಿ ಪ್ರೋಫಿಲ್ಯಾಕ್ಸಿಸ್‌ ಡಿವೈಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

Advertisement

ಮೆದುಳಿನ ಸಮಸ್ಯೆ ತಿಳಿಸುತ್ತೆ ಹೆಲ್ಮೆಟ್‌: ಸರ್ಕಾರದ ಸಹಯೋಗದಲ್ಲಿ ಮಷೀನ್‌ ಇಂಟಿಲಿಜೆನ್ಸ್‌ ಆಂಡ್‌ ರೋಬೋಟಿಕ್ಸ್‌ ಸೆಂಟರ್‌ ಸಂಸ್ಥೆ ಮೆದುಳಿನ ಸಮಸ್ಯೆಗಳನ್ನು ತಿಳಿಯುವ ಹೆಲ್ಮೆಟ್‌ ತಯಾರಿಸಿದ್ದು, ಈ ಹೆಲ್ಮೆಟ್‌ ಮೆದುಳಿನಲ್ಲಿರುವ ಎಲೆಕ್ಟ್ರಾನಿಕ್‌ ತರಂಗಗಳ ಆಧಾರದ ಮೇಲೆ ಮೆದುಳಿನ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಈ ಚಿತ್ರಗಳನ್ನು ಕಂಪ್ಯೂಟರ್‌ನಲ್ಲಿ ಪರಿಶೀಲನೆಗೆ ಒಳಪಡಿಸಿದಾಗ ಮೆದುಳಿನ ಯಾವ ಭಾಗದಲ್ಲಿ ತೊಂದರೆಯಾಗಿದೆ ಎಂಬುದು ಸುಲಭವಾಗಿ ತಿಳಿಯಲಿದ್ದು, ಇದರಿಂದಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.  

ಉಪಕರಣಗಳು ಕಾರ್ಯನಿರ್ವಹಣೆ ಹೇಗೆ?: ಎರಡು ರೀತಿಯ ಉಪಕರಣಗಳನ್ನು ರೋಗಿಯ ಕೈ-ಕಾಲುಗಳಿಗೆ ಅವಳವಡಿಸಲಾಗುತ್ತದೆ. ಈ ರೋಬೋಟಿಕ್‌ ಉಪಕರಣಗಳು ವ್ಯಕ್ತಿಯ ಹೃದಯ ಬಡಿತಕ್ಕೆ ಅನುಗುಣವಾಗಿ ಕೈ-ಕಾಲುಗಳಿಗೆ ಚಲನೆ ನೀಡುತ್ತವೆ. ಜತೆಗೆ ರಕ್ತನಾಳ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸುತ್ತವೆ. ಈ ಉಪಕರಣಗಳನ್ನು ಬಳಸಿದ ರೋಗಿಯು ಕೋಮಾದಿಂದ ಚೇತರಿಸಿಕೊಂಡ ನಂತರವೂ ಆರೋಗ್ಯವಾಗಿಬಹುದು ಎನ್ನುತ್ತಾರೆ ಐಐಐಟಿ ಬೆಂಗಳೂರು ಸಂಸ್ಥೆಯ ವ್ಯವಸ್ಥಾಪಕಿ ಕಲ್ಪನಾ.

Advertisement

Udayavani is now on Telegram. Click here to join our channel and stay updated with the latest news.

Next