ಢಾಕಾ: ಮುಂದಿನ ವರ್ಷ ಅಕ್ಟೋಬರ್-ನವೆಂಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಗ್ಗೆ ಇಷ್ಟು ಬೇಗನೇ ಯೋಚಿಸಬೇಕಿಲ್ಲ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೂ ಮೊದಲು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರೋಹಿತ್, “ವಿಶ್ವಕಪ್‌ಗಾಗಿ ತಮ್ಮ ಯೋಜನೆಗಳ ಬಗ್ಗೆ ತನಗೆ ಮತ್ತು ಕೋಚ್ ರಾಹುಲ್ ದ್ರಾವಿಡ್ ಗೆ ಒಂದು ಲೆಕ್ಕಾಚಾರವಿದೆ ಎಂದರು.
“ಇದೀಗ ಬಾಂಗ್ಲಾದೇಶದಲ್ಲಿ ಸರಣಿ ಗೆಲ್ಲುವತ್ತ ಗಮನ ಹರಿಸಬೇಕಿದೆ. ನಾವು ಪ್ರತಿ ಬಾರಿ ಆಟ ಆಡುವಾಗಲೂ ಅದು ಭವಿಷ್ಯದಲ್ಲಿ ಬರಲಿರುವ ಯಾವುದೋ ಒಂದು ದೊಡ್ಡ ಕೂಟದ ತಯಾರಿಯಾಗಿರುತ್ತದೆ. ಆದರೆ ವಿಶ್ವಕಪ್‌ಗೆ ಇನ್ನೂ 8-9 ತಿಂಗಳುಗಳಿವೆ. ನಾವು ಈಗಲೇ ಅಷ್ಟು ಮುಂದಕ್ಕೆ ಯೋಚಿಸಲು ಸಾಧ್ಯವಿಲ್ಲ” ರೋಹಿತ್ ಹೇಳಿದ್ದಾರೆ.
ಇದನ್ನೂ ಓದಿ:ವಿಭಜನೆಯ ನಂತರ ಸನಾತನ ಧರ್ಮದ ಅನುಯಾಯಿಗಳು ಮಾತ್ರ ಉಳಿಯಬೇಕಿತ್ತು: ಗಿರಿರಾಜ್ ಸಿಂಗ್
“ನಾವು ತಂಡವಾಗಿ ಏನು ಮಾಡಬೇಕು, ನಾವು ಎಲ್ಲಿ ಸುಧಾರಿಸಬಹುದು ಎಂಬುದರ ಮೇಲೆ ನಾವು ಕಣ್ಣಿಡುತ್ತೇವೆ. ವಿಶ್ವಕಪ್ ಬಗ್ಗೆ ಹಲವು ವಿಷಯಗಳ ಬಗ್ಗೆ ಯೋಚಿಸಲು ಪ್ರಾರಂಭಿಸದಿರುವುದು ನಮಗೆ ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾವು ವಿಶ್ವಕಪ್ ಬರುವವರೆಗೆ ಉತ್ತಮ ಕ್ರಿಕೆಟ್ ಆಡುತ್ತೇವೆ. ಆದರೆ ಮೊದಲು, ನಾವು ಸರಣಿ ಗೆಲ್ಲುವತ್ತ ಗಮನ ಹರಿಸುತ್ತೇವೆ. ನಾವು ಒಂದೊಂದು ಪಂದ್ಯವನ್ನು ನೋಡುತ್ತಿದ್ದೇವೆ, ಆ ಆಟದಲ್ಲಿ ನಾವು ಹೇಗೆ ಚೆನ್ನಾಗಿ ಆಡಬಹುದು ಎಂದು ನೋಡುತ್ತಿದ್ದೇವೆ. ತುಂಬಾ ಮುಂದಕ್ಕೆ ಯೋಚಿಸುವುದು ಕೆಲವೊಮ್ಮೆ ಸಹಾಯ ಮಾಡುವುದಿಲ್ಲ” ಎಂದು ರೋಹಿತ್ ಶರ್ಮಾ ಹೇಳಿದರು.
ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯ ಇಂದು ಢಾಕಾದಲ್ಲಿ ನಡೆಯಲಿದೆ.