ಹೊಸದಿಲ್ಲಿ, /ಬೈನ್ಸಾ: ಮಧ್ಯ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಕನಿಷ್ಠ 100 ಮಂದಿ ಹೊಸಬರಿಗೆ ಟಿಕೆಟ್ ಕೊಡುವ ಇರಾದೆ ಯಲ್ಲಿ ರುವಂತೆಯೇ, ಅದೇ ಮಾದರಿಯ ನಿಲು ವನ್ನು ರಾಜಸ್ಥಾನದಲ್ಲಿಯೂ ಅನುಸರಿ ಸುವ ಸಾಧ್ಯತೆ ಇದೆ. ರಾಜಸ್ಥಾನದ ಹಾಲಿ ಇರುವ ವಿಧಾನಸಭೆಯಲ್ಲಿ 160 ಶಾಸಕರ ಪೈಕಿ 80-100 ಸ್ಥಾನಗಳಿಗೆ ಹೊಸಬರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖೀಸಿ “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಆ್ಯಪ್ ಮೂಲಕ ಮತ್ತು ಇತರ ಮೂಲಗಳಿಂದ ಶಾಸಕರ ಸಾಧನೆಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವರದಿ ತರಿಸಿಕೊಂಡಿದ್ದಾರೆ. ಜಾತಿ ಮತ್ತು ಸಮಾಜದಲ್ಲಿ ಹೊಂದಿರುವ ಪ್ರಭಾವದ ಜತೆಗೆ ಸಾಧನೆಯನ್ನೂ ಪರಿಗಣಿಸಲಿದೆ ಬಿಜೆಪಿ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ. ಮುಖ್ಯಮಂತ್ರಿ ವಸುಂಧರಾ ರಾಜೇ ಸಂಪುಟದಲ್ಲಿರುವ ಸಚಿವರೂ ಕೂಡ ಮತ್ತೂಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚಾಗಿದೆ.
42 ಮಂದಿಗೆ ಟಿಕೆಟ್: ಇನ್ನು ಮಧ್ಯಪ್ರದೇಶದಲ್ಲಿ ವಿಪಕ್ಷ ಕಾಂಗ್ರೆಸ್ 57 ಶಾಸಕರ ಪೈಕಿ 42 ಮಂದಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮಲ್‌ನಾಥ್ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸದೇ ಇರುವ ಇರಾದೆಯಲ್ಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ನಾಯಕರೊಬ್ಬರು ಹೇಳಿದ್ದಾರೆ. 230 ಸದಸ್ಯ ಬಲದ ವಿಧಾನಸಭೆ ನ.28ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ರೈತರ ಸಾಲ ಮನ್ನಾ: ತೆಲಂಗಾಣದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ 2 ಲಕ್ಷ ರೂ. ವರೆಗೆ ರೈತರ ಸಾಲ ಮನ್ನಾ ಮಾಡುವ ವಾಗ್ಧಾನ ಮಾಡಿ ದ್ದಾರೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ. ಭೈನ್ಸಾ ಎಂಬಲ್ಲಿ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೆ.ಚಂದ್ರಶೇಖರ ರಾವ್ ರೈತರಿಗೆ ಸುಳ್ಳು ಭರವಸೆ ಗಳನ್ನು ನೀಡುವ ಮೂಲಕ ಅವರ ಪರಿಸ್ಥಿತಿ ಕಠಿನಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ. ತೆಲಂಗಾಣದಲ್ಲಿ ಕೆಸಿಆರ್ ನೇತೃತ್ವದ ಸರಕಾರ, ದಿಲ್ಲಿಯಲ್ಲಿ ಮೋದಿ ನೇತೃತ್ವದ ಸರಕಾರ ತೊಲಗಿದ ತತ್‌ಕ್ಷಣ ಬದಲಾವಣೆ ಬರುತ್ತದೆ’ ಎಂದು ಹೇಳಿದ್ದಾರೆ ರಾಹುಲ್ ಗಾಂಧಿ. ಮುಖ್ಯಮಂತ್ರಿ ವ್ಯಾಪಕ ವಾಗಿ ಭ್ರಷ್ಟಾಚಾರ ನಡೆಸಿದ್ದಾರೆ. ಅದರಿಂದ ಅವರ ಕುಟುಂಬ ವರ್ಗಕ್ಕೆ ನೆರವಾಗಿದೆ ಎಂದು ಟೀಕಿಸಿದ್ದಾರೆ. ಡಿ.7ರಂದು ಅಲ್ಲಿ ಮತದಾನ ನಡೆಯಲಿದೆ.
2ನೇ ಪಟ್ಟಿ ಬಿಡುಗಡೆ: ಛತ್ತೀಸ್‌ಗಢದಲ್ಲಿ ಜನತಾ ಕಾಂಗ್ರೆಸ್ ಛತ್ತೀಸ್‌ಗಢ (ಜೆಸಿಸಿ) ಜತೆಗೆ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ 12 ಮಂದಿ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.