ಉಡುಪಿ: ಯಕ್ಷಗಾನ ರಂಗದಲ್ಲಿ ಹಿಮ್ಮೇಳ ಮುಮ್ಮೇಳಗಳ ಸರ್ವಾಂಗ ಪರಿಚಿತ ಕಲಾ ಸಂಚಯ ತೋನ್ಸೆ ಜಯಂತ ಕುಮಾರ್ ಎಂದು ಬಹು ಶ್ರುತ ವಿದ್ವಾಂಸ ಡಾ| ಪ್ರಭಾಕರ್ ಜೋಶಿ ಅವರು ಹೇಳಿದರು.
ಅವರು ಉಡುಪಿ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನೆರವೇರಿದ, ಇತ್ತೀಚೆಗೆ ನಿಧನ ಹೊಂದಿದ ಯಕ್ಷಗಾನ ಗುರು ಭಾಗವತ ತೋನ್ಸೆ ಜಯಂತ್ ಕುಮಾರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿ ಮಾತನಾಡಿದರು. ವೃತ್ತಿಪರ ಆಟ ಕೂಟಗಳೆರಡಕ್ಕೂ ಒಪ್ಪುವ ಉಚ್ಛ ಸ್ಥಾನದ ಭಾಗವತಿಕೆಯ ಸಿದ್ಧಿ ಅವರಲ್ಲಿತ್ತು ಎಂದರು.
ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ಯಕ್ಷಗಾನ ಕಲಾವಿದ ಎಂ. ಎಲ್. ಸಾಮಗ, ಸಾಲಿಗ್ರಾಮ ಮಕ್ಕಳ ಮೇಳ ನಿರ್ದೇಶಕ ಎಚ್. ಶ್ರೀಧರ ಹಂದೆ, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಯಕ್ಷಗಾನ ಶಿಕ್ಷಕ ಜಿ. ಸದಾನಂದ ಐತಾಳ್, ನೇಜಾರು ಭಗವತೀ ತೀಯಾ ಸಮಾಜದ ಅಧ್ಯಕ್ಷ ಪ್ರಶಾಂತ್ ಸಾಲಿಯಾನ್, ಹಿರಿಯ ಶಿಷ್ಯವರ್ಗದಲ್ಲಿ ಎಂ. ಪದ್ಮನಾಭ, ಬಿ. ಕೇಶವ ರಾವ್ ನುಡಿ ನಮನ ಸಲ್ಲಿಸಿದರು.
ಮೇಳಗಳ ಯಜಮಾನ ಕಿಶನ್ ಹೆಗ್ಡೆ , ಮಂದರ್ತಿ ದೇಗುಲದ ಧರ್ಮದರ್ಶಿ ಧನಂಜಯ ಶೆಟ್ಟಿ, ವಿಮರ್ಶಕ ಉದಯಕುಮಾರ್ ಶೆಟ್ಟಿ, ಕಲಾವಿದ ಐರೋಡಿ ಗೋವಿಂದಪ್ಪ, ಸಮಾಜ ಗಣ್ಯರಾದ ಸಸಿಹಿತ್ಲು ಕ್ಷೇತ್ರದ ರಾಮಪ್ಪ ಮಾಸ್ತರ್, ಅಣ್ಣಯ್ಯ ಗುರಿಕಾರ್, ಸುಂದರ ಗುರಿಕಾರ್, ಗೋಪಾಲ ಗುರಿಕಾರ್ ಉಪಸ್ಥಿತರಿದ್ದರು.
ದಯಾನಂದ ಕರ್ಕೇರ ಸ್ವಾಗತಿಸಿ, ನಿರೂಪಿಸಿದರು. ತೋನ್ಸೆ ಪುಷ್ಕಳ ಕುಮಾರ್ ವಂದಿಸಿದರು. ದಿವಂಗತರ ಮಕ್ಕಳು ಹಾಗೂ ಕುಟುಂಬಸ್ಥರು ಸಹಕರಿಸಿದರು.