Advertisement

ಸಾಂಬಾರ ಉದ್ದಿಮೆ ಸಾಮ್ರಾಜ್ಯ ಕಟ್ಟಿದ ಟಾಂಗಾವಾಲಾ

10:40 PM Dec 04, 2020 | mahesh |

ಮಹಾಶಯ ಧರ್ಮಪಾಲ ಗುಲಾಟಿ ಎಂಬ ದಿಲ್ಲಿಯ ಟಾಂಗಾವಾಲಾ ಹುಡುಗನೊಬ್ಬ ಸಾಹ ಸೋದ್ಯಮಿಯಾಗಿ ವಾರ್ಷಿಕ 2 ಸಾವಿರ ಕೋಟಿ ರೂ.ಗಳ ವ್ಯವಹಾರ ನಡೆಸುವ ಬೃಹತ್‌ ಸಂಸ್ಥೆ ಕಟ್ಟಿದ್ದು ನಿಜಕ್ಕೂ ರೋಚಕ ಕಥೆ. ಕೈಗಾರಿಕೆ ಕಟ್ಟುವುದಕ್ಕೆ ದೊಡ್ಡ ಬಂಡವಾಳ ಬೇಕು, ಸಾಕಷ್ಟು ಪರಿಣತಿ ಬೇಕು, ಪ್ರಭಾವಿ ಜನರ ಬೆಂಬಲ ಬೇಕು ಎಂದು ಇತ್ಯಾದಿ ಇತ್ಯಾದಿ ಸಮಸ್ಯೆಗಳ ದೊಡ್ಡ ಪಟ್ಟಿ ಮಾಡಿ ಹೇಳುವ ಯುವಕರೆಲ್ಲ ಒಮ್ಮೆ ಗುಲಾಟಿ ಬದುಕಿನ ಗಾಥೆ ತಿಳಿದುಕೊಳ್ಳಬೇಕು. ವ್ಯಕ್ತಿತ್ವ ವಿಕಸನ ಕುರಿತು ದೊಡ್ಡ ಪಾಠ ಮಾಡುವವರು ಗುಲಾಟಿಯವ ರ ಸಾಧನೆ ಅರಿತುಕೊಳ್ಳಬೇಕು.

Advertisement

ಅಡುಗೆಗೆ ಉಪಯೋಗಿಸುವ ಎಂಡಿಎಚ್‌ಮಸಾಲೆ, ಟಿವಿ ಜಾಹೀರಾತಿನಲ್ಲಿ “ಅಸಲಿ ಮಸಾಲೆ -ಸಚ್‌ ಸಚ್‌ ಎಂಡಿಎಚ್‌’ ಎಂಬ ಹಾಡನ್ನು ಎಲ್ಲರೂ ಕೇಳಿದ್ದಾರೆ. ಹಾಡಿನೊಂದಿಗೆ ಕೆಂಪು ಪೇಟಾ ಧರಿಸಿದ, ಮುಖದ ತುಂಬ ಆಕರ್ಷಕ ಕಳೆ ತುಂಬಿಕೊಂಡಿರುವ ತುಂಬ ವಯಸ್ಸಾದ ತಾತ ಕಾಣಿಸುತ್ತಾರೆ. ಇವರೇ ಆ ಮಸಾಲಾ ಸಾಮ್ರಾಜ್ಯ ಕಟ್ಟಿದ ದೊರೆ. ಎಲ್ಲರೂ ಇವರನ್ನು ಮಸಾಲಾ ಕಿಂಗ್‌ ಎಂದು ಪ್ರೀತಿ ಯಿಂದ ಕರೆಯುತ್ತಾರೆ.

1947ರಲ್ಲಿ ನಡೆದ ದೇಶ ವಿಭಜನೆ ಕಾಲಕ್ಕೆ ಗುಲಾಟಿ ತಮ್ಮದೆಲ್ಲವನ್ನೂ ಪಾಕಿಸ್ಥಾನದಲ್ಲಿ ಬಿಟ್ಟು ದಿಲ್ಲಿಗೆ ವಲಸೆ ಬಂದು ನಿರಾಶ್ರಿತರ ಶಿಬಿರದಲ್ಲಿ ನೆಲೆಸಿದರು. ಆಗ ಅವರ ಜೇಬಿನಲ್ಲಿ ಕೇವಲ 1,500ರೂ.ಗಳು ಮಾತ್ರ ಇದ್ದವು. ಇದೇ ಹಣ ಹಾಕಿ ಒಂದು ಟಾಂಗಾ ಖರೀದಿಸಿದರು. ಉಪಜೀವನಕ್ಕಾಗಿ ಟಾಂಗಾ ಓಡಿಸತೊಡಗಿದರು. ಅವರಿಗೆ ಹಿಂದಿ ಭಾಷೆ ಚೆನ್ನಾಗಿ ಬರುತ್ತಿರಲಿಲ್ಲ. ಗಿರಾಕಿಗಳ ಜತೆ ಸಂವಾದ ಸಾಧ್ಯವಾಗಲಿಲ್ಲ. ಉಳಿದ ಟಾಂಗಾವಾಲಾಗಳು ಕಿರಿಕಿರಿ ಕೊಡತೊಡಗಿದರು. ಹಾಸ್ಯ ಮಾಡಿ ನಗ ತೊಡಗಿದರು. ತುಂಬ ನೊಂದ ಗುಲಾಟಿ, ಕೇವಲ 200 ರೂ.ಗೆ ಟಾಂಗಾ ಕುದುರೆಯನ್ನು ಮಾರಾಟ ಮಾಡಿದರು. ಮತ್ತೆ ನಿರಾಶ್ರಿತರ ಶಿಬಿರ ಸೇರಿ ದಿನ ಕಳೆಯತೊಡಗಿದರು.

ಟಾಂಗಾ ಮಾರಾಟ ಹಣದಲ್ಲಿ ಒಂದು ಪುಟ್ಟ ಮಸಾಲೆ ಮಾರಾಟದ ಅಂಗಡಿ ತೆರೆದರು. ಮಸಾಲೆ ಮಾರಾಟದಲ್ಲಿ ದೊಡ್ಡ ಮ್ಯಾಜಿಕ್‌ ಮಾಡಬಹುದು ಎಂಬ ಕನಸು ಅವರಲ್ಲಿ ಮೂಡಿತು. 1959ರಲ್ಲಿ ದಿಲ್ಲಿಯ ಕೀರ್ತಿ ನಗರದಲ್ಲಿ ಸ್ವಂತ ಉತ್ಪಾದನ ಘಟಕ ಆರಂಭಿಸಿದರು. ಮಸಾಲೆ ಉತ್ಪಾದನೆಗೆ ಉದ್ಯಮ ಸ್ವರೂಪ ನೀಡತೊಡಗಿದರು. ದಿಲ್ಲಿಯ ನಾಲ್ಕು ಕಡೆ ಮಾರಾಟ ಮಳಿಗೆ ಶುರು ಮಾಡಿದರು. ಅನಂತರ ಹಿಂತಿರುಗಿ ನೋಡಲಿಲ್ಲ. ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ಎಂಡಿಎಚ್‌ ಮಸಾಲೆ ಜನಪ್ರಿಯತೆ ಗಳಿಸಿದವು. ಚೀನ-ಜಪಾನ್‌ ದೊಡ್ಡ ಪ್ರಮಾಣದಲ್ಲಿ ಎಂಡಿ ಎ ಚ್‌ ಮಸಾಲೆಗೆ ಬೇಡಿಕೆ ಸಲ್ಲಿಸಿದವು.

ಕೇವಲ ಐದನೇ ತರಗತಿವರೆಗೆ ಓದಿದ ಗುಲಾಟಿ ಇದನ್ನು ನಡೆಸಿಕೊಂಡು ಹೋಗುವುದಕ್ಕೆ ತಜ್ಞರು, ಅನುಭವಿಗಳು, ಉತ್ತಮ ಕಾರ್ಮಿಕರು ಬೇಕು ಎನ್ನುವುದನ್ನು ಅರಿತುಕೊಂಡವರು. ಜಾಣ್ಮೆಯಿಂದ ಒಳ್ಳೆಯ ಸಿಬಂದಿ ನೇಮಕ ಮಾಡಿಕೊಂಡು ಧಾರಾಳವಾಗಿ ಸಂಬಳ ಕೊಡತೊಡಗಿದರು. ಕೆನಡಾ, ಜಪಾನ್‌, ಬ್ರಿಟನ್‌, ಯುಎಇ ಮತ್ತು ಅರಬ್‌ ದೇಶಗಳಿಗೆ ಎಂಡಿಎಚ್‌ ಮಸಾಲೆ ರಫ್ತು ಆಗತೊಡಗಿತು.

Advertisement

ಗುಲಾಟಿ ಜನರ ಮನಸ್ಸನ್ನು ಅರಿತುಕೊಳ್ಳುವ ಜಾಣ್ಮೆ ಹೊಂದಿದ್ದರು. ಎಲ್ಲರಿಗೂ ಇಷ್ಟವಾಗುವಂತೆ ಮಸಾಲೆ ಉತ್ಪನ್ನಗಳನ್ನು ಸುಂದರವಾಗಿ ಪ್ಯಾಕ್‌ ಮಾಡುವ ವ್ಯವಸ್ಥೆ ಮಾಡಿದರು. ಇಂದು 62 ಶ್ರೇಣಿಗಳಲ್ಲಿ 150 ವಿಧಧ ಪ್ಯಾಕೆಟ್‌ಗಳಲ್ಲಿ ಮಸಾಲೆ ಉತ್ಪನ್ನಗಳು ದೊರೆಯುತ್ತಿವೆ. ನಾನಾ ಕಡೆಗಳಲ್ಲಿ 15 ಉತ್ಪಾದನ ಘಟಕಗಳನ್ನು ಹೊಂದಿವೆ. ಮಸಾಲೆಗೆ ಅಗತ್ಯವಿರುವ ಸಾಂಬಾರು ಪದಾರ್ಥಗಳ ಸಂಗ್ರಹ, ಉತ್ಪಾದನೆ, ಸಾಗಣೆ, ವಿತರಣೆ, ಮಾರಾಟದ ತನಕ ವ್ಯವಸ್ಥಿತ ನೆಟ್‌ವ ರ್ಕ್‌ ನ ಕಂಪೆನಿಗಳನ್ನು ಸ್ಥಾಪಿಸಿದರು

ಮುಧೋಳ ಸಕ್ಕರೆ, ಬ್ಯಾಡಗಿ ಮೆಣಸಿನಕಾಯಿ
ಗುಲಾಟಿ ಅವರು ಕರ್ನಾಟಕದ ಮುಧೋಳ ಮತ್ತು ಬ್ಯಾಡಗಿ ಬಗ್ಗೆ ಬಹಳ ಪ್ರೀತಿ ಹೊಂದಿದ್ದರು. ಈ ಪ್ರದೇಶದ ಗಣ್ಯರ ಸಂಪರ್ಕವನ್ನು ಅವರು ಹೊಂದಿದ್ದರು. ತಮ್ಮ ಉತ್ಪಾದನೆಗಳಿಗೆ ಬೇಕಾಗುವ ಸಕ್ಕರೆಯನ್ನು ಮುಧೋಳ ತಾಲೂಕು ಸಕ್ಕರೆ ಕಾರ್ಖಾನೆಗಳಿಂದ ನಿಯಮಿತವಾಗಿ ಖರೀದಿ ಸುತ್ತಿದ್ದರು. ಅದೇ ರೀತಿ ಹಾವೇರಿ ಜಿಲ್ಲೆಯ ಬ್ಯಾಡಗಿ ಯಿಂದ ಮೆಣಸಿನಕಾಯಿ ಖರೀದಿಸುತ್ತಿದ್ದರು. ಮುಧೋಳಕ್ಕೆ ಭೇಟಿ ನೀಡಿದಾಗ ಆಲಮಟ್ಟಿ, ಕೂಡಲ ಸಂಗಮ ಸೇರಿದಂತೆ ಇಲ್ಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಿದ್ದರು.

ಸಂಶೋಧನೆಗೆ ಆದ್ಯತೆ
ಸಾಂಬಾರ ಪದಾರ್ಥಗಳ ವೈಜ್ಞಾನಿಕ ಅಧ್ಯಯ ನಕ್ಕೆ ಅವರು ವಿಶೇಷ ಮಹತ್ವ ಕೊಟ್ಟಿದ್ದರು. ದೇಶದ ಕೃಷಿ ವಿಶ್ವವಿದ್ಯಾನಿಲಯಗಳೊಂದಿಗೆ ಒಪ್ಪಂದ ಮಾಡಿ ಕೊಂಡು ಮಸಾಲೆ ಉತ್ಪನ್ನಗಳನ್ನು ಬೆಳೆಯುವುದಕ್ಕೆ ವ್ಯವಸ್ಥೆ ಮಾಡಿದ್ದರು. ಮಸಾಲೆ ಪದಾರ್ಥಗಳ ಬಳಕೆ ಅದರಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮ ಮುಂತಾದ ಸಂಗತಿಗಳ ಬಗ್ಗೆ ಅಧ್ಯಯನಕ್ಕೆ ಅವರು ವ್ಯವಸ್ಥೆ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದ ಅನೇಕ ಪುಸ್ತಕ, ಕೈಪಿಡಿಗಳನ್ನು ಎಲ್ಲ ಪ್ರಮುಖ ಭಾಷೆಗಳಲ್ಲಿ ಪ್ರಕಟಿಸಿದ್ದರು.

ಜೇನುತುಪ್ಪ ಉತ್ಪಾದನೆಗೆ ನಿರಾಕರಣೆ
ಜೇನುತುಪ್ಪ ಉತ್ಪಾದಿಸಲು ಗುಲಾಟಿ ಅವರಿಗೆ ಕೆಲವರು ಸಲಹೆ ಮಾಡಿದರು. ನೈಸರ್ಗಿಕ ಜೇನು ತುಪ್ಪ ಉತ್ಪಾದನೆ ಕಠಿನ ಕೆಲಸ. ಕೃತಕವಾಗಿ ಸಿದ್ದಪಡಿಸಿ ಗ್ರಾಹಕರಿಗೆ ಮೋಸ ಮಾಡುವುದು ಸಮಾಜ ದ್ರೋಹ. ಅಹಾರ ವಸ್ತುಗಳಲ್ಲಿ ನಕಲಿ ಮಾರುಕಟ್ಟೆ ಪ್ರವೇಶಿಸಿರುವುದು ನೋವಿನ ಸಂಗತಿ ಎಂದು ಅವರು ಮೇಲಿಂದ ಮೇಲೆ ಹೇಳುತ್ತಿದ್ದರು. ಉದ್ದಿಮೆ ಉದ್ದೇಶ ಬರೀ ಲಾಭವಲ್ಲ. ಅಲ್ಲಿ ಸೇವೆ, ಪ್ರಾಮಾಣಿ ಕತೆಗೆ ಹೆಚ್ಚಿನ ಗೌರವವಿದೆ ಎನ್ನುವುದನ್ನು ಅವರು ಹೇಳುತ್ತಿದ್ದರು.

ಹಣ ಗಳಿಸುವ ಯಂತ್ರವಲ್ಲ
ನಾನು ಹಣ ಸಂಪಾದಿಸುವ ಯಂತ್ರ ಅಲ್ಲ; ಗಳಿಸಿದ ಸಂಪತ್ತೆಲ್ಲ ಸಮಾಜದ್ದು. ಹಂಚಿ ತಿಂದರೆ ಭಯವಿಲ್ಲ ಎಂದು ಸದಾ ಗುಲಾಟಿ ಹೇಳುತ್ತಿದ್ದರು. ಅವರು ಬದುಕಿನುದ್ದಕ್ಕೂ ತುಂಬ ಸರಳ ಜೀವನ ನಡೆಸಿದರು. ಪ್ರತೀ ದಿನ ಕಾರ್ಮಿಕರೊಂದಿಗೆ ಕುಳಿತು ಊಟ ಮಾಡುತ್ತಿದ್ದರು. ಹರಟುತ್ತಿದ್ದರು. ಕಾರ್ಮಿಕ ರನ್ನು ತಮ್ಮ ಉದ್ಯಮದ ಪಾಲುದಾರರು ಎಂದು ಕರೆಯುತ್ತಿದ್ದರು. ದೊಡ್ಡ ಕಂಪೆನಿಯನ್ನು ಕಟ್ಟಿದ ಗುಲಾಟಿ ಅವರು 2017ರಲ್ಲಿ ದೇಶದಲ್ಲೇ ಅತೀ ಹೆಚ್ಚು ಸಂಬಳ ಪಡೆಯುತ್ತಿದ್ದ ಸಿಇಒ ಆಗಿದ್ದರು. ಮೂರು ವರ್ಷದ ಹಿಂದೆ 21 ಕೋಟಿ ರೂ. ವೇತನದ ಶೇ. 90ಕ್ಕೂ ಹೆಚ್ಚು ಪಾಲನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದರು. ಮಹಾಶಯ್‌ ಚುನ್ನಿಲಾಲ ಚಾರಿಟೆಬಲ್‌ ಟ್ರಸ್ಟ್‌ ಅಡಿಯಲ್ಲಿ ದಿಲ್ಲಿಯಲ್ಲಿ 250 ಹಾಸಿಗೆಗಳ
ಆಸ್ಪತ್ರೆ, 20 ಶಾಲೆಗಳನ್ನು ಆರಂಭಿಸಿದರು.

“”ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು ಹಾಗೂ ಅದಕ್ಕಾಗಿ ಪರಿಶ್ರಮಪಡುವುದು ನನ್ನ ಸ್ವಭಾವವಾಗಿದೆ” ಎಂದು ಗುಲಾಟಿ ಹೇಳುತ್ತಿದ್ದರು. 2019ರಲ್ಲಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇಂತಹ ಮಹಾನ್‌ ಉದ್ಯಮಿ ಮಹಾಶಯ ಧರ್ಮಪಾಲ ಗುಲಾಟಿ ತಮ್ಮ 97ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ಅವರು ಕಟ್ಟಿದ ಮಸಾಲೆ ಟೇಸ್ಟ್‌ ಸದಾ ಜನರ ನಾಲಿಗೆ ಮೇಲೆ ಉಳಿಯಲಿದೆ.

ಮುರುಗೇಶ್‌ ನಿರಾಣಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next