Advertisement
ಸೋಮವಾರ ನಡೆದ ಪುರುಷರ ಟ್ರ್ಯಾಪ್ ವಿಭಾಗದ ಅರ್ಹತಾ ಸುತ್ತಿನಲ್ಲಿ 7 ಶೂಟರ್‌ಗಳ ತಂಡದಲ್ಲಿದ್ದ ಪೃಥ್ವಿರಾಜ್ ಮೊದಲೆರಡು ಸುತ್ತಿನಲ್ಲಿ 50 ಅಂಕ ಸಂಪಾದಿಸಿದರು. ಚೆನೈ 49 ಅಂಕ ಹಾಗೂ ಮನಜೀತ್ ಸಿಂಗ್ ಸಧು 46 ಅಂಕ ಗಳಿಸಿದರು. ಅಗ್ರ 6 ಶೂಟರ್‌ಗಳು ಫೈನಲ್ ಪ್ರವೇಶಿಸುವ ಮುನ್ನ ಇನ್ನೂ 3 ಸುತ್ತಿನ ಅರ್ಹತಾ ಸ್ಪರ್ಧೆಗಳು ನಡೆಯಲಿವೆ. ಫೈನಲ್‌ನಲ್ಲಿ 2 ಟೋಕಿಯೊ ಒಲಿಂಪಿಕ್ಸ್ ಕೋಟಾಗಳು ದೊರೆಯಲಿವೆ.
ಭಾರತದ ವನಿತಾ ಟ್ರ್ಯಾಪ್ ತಂಡ ಅರ್ಹತಾ ಸುತ್ತಿನಲ್ಲಿ ಸೋಲನುಭವಿಸುವ ಮೂಲಕ ಕೂಟದಿಂದ ಹೊರಬಿದ್ದಿದೆ. ಇಟಲಿಯ ಮಾಜಿ ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ ಜೆಸ್ಸಿಕಾ ರೋಸಿ ಕೂಟದ ಮೊದಲ ಚಿನ್ನದ ಪದಕ ಗೆದ್ದು, 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಅವರು ವನಿತಾ ಟ್ರ್ಯಾಪ್ ವಿಭಾಗದ ಫೈನಲ್‌ನಲ್ಲಿ 45 ಅಂಕ ಪಡೆದು ಪ್ರಥಮ ಸ್ಥಾನ ಸಂಪಾದಿಸಿದರು. ಚೀನದ ಡೆಂಗ್ ವೈಯೂನ್ ಕಂಚಿನ ಪದಕ ಗೆಲ್ಲುವ ಮೂಲಕ ಇನ್ನೊಂದು ಒಲಿಂಪಿಕ್ ಕೋಟಾ ಸ್ಥಾನವನ್ನು ಪಡೆದರು. ಶಗುಣ್ ಚೌಧರಿ ಈ ಕೂಟದಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಶೂಟರ್ ಆಗಿದ್ದಾರೆ. ಅವರು ಒಟ್ಟು 125 ಅಂಕಗಳಲ್ಲಿ 116 ಅಂಕಗಳನ್ನು ಸಂಪಾದಿಸಿ 19ನೇ ಸ್ಥಾನ ಪಡೆದರು. ರಾಜೇಶ್ವರಿ ಕುಮಾರಿ 36, ವರ್ಷಾ ವರ್ಮನ್ 52ನೇ ಸ್ಥಾನದಲ್ಲಿ ಸ್ಪರ್ಧೆಯನ್ನು ಮುಗಿಸಿದರು.