Advertisement

ಉಪ ಚುನಾವಣೆ ಅಭ್ಯರ್ಥಿಗಳ ಕುರಿತು ನಾಳೆ ಚರ್ಚೆ : ಅರುಣ್ ಸಿಂಗ್

10:51 PM Mar 19, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಭ್ಯರ್ಥಿಗಳ ಕುರಿತು ನಾಳೆ (ಶನಿವಾರ) ಚರ್ಚೆ ಮಾಡಲಾಗುವುದು. ಚರ್ಚೆಯ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಬಿಜೆಪಿ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗುವುದು. ಕೇಂದ್ರ ಸಮಿತಿಯು ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಪ್ರಭಾರಿ ಅರುಣ್ ಸಿಂಗ್ ತಿಳಿಸಿದರು.

Advertisement

ನಗರದ ಕೆ.ಕೆ. ಗೆಸ್ಟ್ ಹೌಸ್‍ನಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಶಾಸಕ ಶ್ರೀ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳನ್ನು ನಾನಾಗಲೀ, ನಮ್ಮ ಕಾರ್ಯಕರ್ತರಾಗಲೀ ಗಂಭೀರವಾಗಿ ಪರಿಗಣಿಸುವುದಿಲ್ಲ. ಯತ್ನಾಳ್ ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಅವರು ಮಾತನಾಡುತ್ತಲೇ ಇರುತ್ತಾರೆ ಎಂದು ಈ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಕರ್ನಾಟಕ ಭೇಟಿಯ ವೇಳೆ ಕಾಂಗ್ರೆಸ್ಸಿಗರು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸುವ ಕುರಿತು ಸುಳ್ಳು ಹೇಳಿದ್ದರು ಎಂದು ಅವರು ಆರೋಪಿಸಿದರು.

ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಮುಖಂಡರು ಸಿ.ಡಿ. ವಿಚಾರದಲ್ಲಿ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ಸಿ.ಡಿ. ಪ್ರಕರಣದಲ್ಲಿ ಆರೋಪ ಕೇಳಿಬಂದ ಕೂಡಲೇ ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಆರೋಪ ಕೇಳಿಸಿದೊಡನೆ ರಾಜೀನಾಮೆ ಪಡೆಯುವ ಕ್ರಮ ನಮ್ಮಲ್ಲಿ ಮಾತ್ರ ಇದೆ. ಕಾಂಗ್ರೆಸ್ ಈ ರೀತಿ ಮಾಡುವುದಿಲ್ಲ. ಆದರೂ, ಕಾಂಗ್ರೆಸ್ ಪಕ್ಷದವರು ರಾಜಕೀಯವಾಗಿ ಸಿ.ಡಿ. ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಇದನ್ನೂ ಓದಿ:ವಿಜಯಪುರ ಬಿಎಸ್ಎನ್ಎಲ್ ಕಚೇರಿ ಮೇಲೆ ಸಿಬಿಐ ದಾಳಿ

Advertisement

ಆರೋಪ ಬಂದೊಡನೆ ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಷಡ್ಯಂತ್ರ ಹೆಣೆಯುವುದು, ಸುಳ್ಳು ಹೇಳುವುದು ಮತ್ತು ಭ್ರಷ್ಟಾಚಾರ ಮಾಡುವುದು ಕಾಂಗ್ರೆಸ್ಸಿಗರ ಜಾಯಮಾನವೇ ಆಗಿದೆ ಎಂದರು,

ತಮ್ಮ ವಿಚಾರ ಟಿ.ವಿ.ಗಳಲ್ಲಿ ಪ್ರಸಾರ ಮಾಡದಂತೆ ಆರು ಸಚಿವರು ಕೋರ್ಟ್‍ನಿಂದ ತಡೆಯಾಜ್ಞೆ ತಂದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಆರು ಸಚಿವರು ಕೋರ್ಟಿಗೆ ಹೋದರೆ ಕಾಂಗ್ರೆಸ್‍ಗೆ ಏನು ಸಮಸ್ಯೆ ಇದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್‍ನ ದೊಡ್ಡ ದೊಡ್ಡ ನಾಯಕರೇ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು,

ಆರು ಸಚಿವರು ತಮ್ಮ ವಿರುದ್ಧ ತೇಜೋವಧೆ ಆಗುವ ಸಾಧ್ಯತೆಯನ್ನು ಗಮನಿಸಿ ಕೋರ್ಟ್ ಮೊರೆ ಹೋಗಿದ್ದಾರೆ. ಅವರ ವಿರುದ್ಧದ ಷಡ್ಯಂತ್ರ ತಡೆಯಲು ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next