Advertisement

ನಾಳೆಯಿಂದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ

06:15 AM Mar 22, 2018 | Team Udayavani |

ಬೆಂಗಳೂರು : ಯಾವುದೇ ಗೊಂದಲ ಇಲ್ಲದೇ ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ಣಗೊಂಡಿದ್ದು, ಮಾ.23ರಿಂದ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ.

Advertisement

ರಾಜ್ಯದ 2,817 ಕೇಂದ್ರಗಳಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ 8,54,424 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ ಮೂಲಕವೇ ಪಡೆದಿದ್ದು, ಪರೀಕ್ಷೆಯ ಪ್ರವೇಶ ಪತ್ರವನ್ನು ಆನ್‌ಲೈನ್‌ ಮೂಲಕವೇ ಹಂಚಿಕೆ ಮಾಡಲಾಗಿದೆ.

ವಿದ್ಯಾರ್ಥಿಗಳ ಸಾಧನೆ ಮತ್ತು ಟ್ರ್ಯಾಕಿಂಗ್‌ ವ್ಯವಸ್ಥೆ(ಎಸ್‌ಎಟಿಎಸ್‌) ಜಾರಿಗೆ ಬಂದ ನಂತರ ನಡೆಯುತ್ತಿರುವ ಮೊದಲ ಪರೀಕ್ಷೆ ಇದಾಗಿದೆ. ಖಾಸಗಿ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ನೋಂದಾಣಿ ಕಡ್ಡಾಯ ಮಾಡಲಾಗಿದೆ.

ರಾಜ್ಯದ 14,385 ಪ್ರೌಢ ಶಾಲೆಗಳಲ್ಲಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಲಿದ್ದು, 1,011 ಕ್ಲಸ್ಟರ್‌ ಕೇಂದ್ರ ಹಾಗೂ 1807 ನಾನ್‌ ಕ್ಲಸ್ಟರ್‌ ಕೇಂದ್ರಗಳಿವೆ. 45 ಕೇಂದ್ರಗಳನ್ನು ಸೂಕ್ಷ್ಮ ಮತ್ತು 23 ಅತಿ ಸೂಕ್ಷ್ಮ ಕೇಂದ್ರಗಳನ್ನು ಗುರುತಿಸಲಾಗಿದೆ.

2817 ಪರೀಕ್ಷಾ ಕೇಂದ್ರಗಳಿಗೂ ಸಿಸಿಟಿವಿ ಅಳವಡಿಸಲಾಗಿದೆ. ಸುರಕ್ಷತೆ ದೃಷ್ಠಿಯಿಂದ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲು ಬಳಸುವ  ವಾಹನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಮಾರ್ಗಾಧಿಕಾರಿಗಳೊಂದಿಗೆ ಪೊಲೀಸ್‌ ಅಧಿಕಾರಿಗಳು ಇರಲಿದ್ದಾರೆ. ಪರೀಕ್ಷಾ ಮೇಲ್ವಿಚಾರಕರು ಸೇರಿದಂತೆ ಎಲ್ಲಾ ಸಿಬ್ಬಂದಿಗೂ ಗುರುತಿನ ಚೀಟಿ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು ಮೊಬೈಲ್‌ ಬಳಸುವುದನ್ನು ನಿಷೇಧಿಸಲಾಗಿದೆ.

Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಭದ್ರತೆಗಾಗಿ ವಿಭಾಗೀಯ ಮಟ್ಟದ ಅಧಿಕಾರಿಗಳನ್ನು ಜಿಲ್ಲಾ ವೀಕ್ಷಕರಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ 2,043 ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರಾಗಿ ನೇಮಿಸಲಾಗಿದೆ. 406 ಡಯಟ್‌ ಉಪನ್ಯಾಸಕರನ್ನು ಜಾಗೃತ ದಳದ ಸದಸ್ಯರನ್ನಾಗಿ ನೇಮಿಸಿದೆ.

2,817 ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಸ್ಥಾನಿಕ ಜಾಗೃತ ದಳವನ್ನು ಸಹ ನೇಮಿಸಲಾಗಿದೆ. ವಿದ್ಯಾರ್ಥಿ ಮತ್ತು ಪಾಲಕರ ಗೊಂದಲಗಳ ನಿವಾರಣೆಗಾಗಿ ಸಹಾಯವಾಣಿ ಕೇಂದ್ರ ಕಾರ್ಯನಿರ್ವಹಿಸಲಿದೆ. 080-23310075-76 ಸಂಖ್ಯೆಗೆ ಬೆಳಗ್ಗೆ 10 ರಿಂದ ಸಂಜೆ 7.30ರ ವರೆಗೆ ಕರೆ ಮಾಡಬಹುದು ಎಂದು ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಳಾ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next