ನಂಜನಗೂಡು: ರಾಜ್ಯದಲ್ಲೇ ಅತಿ ದೊಡ್ಡ ದೇವಾಲಯ ಎಂಬ ಖ್ಯಾತಿ ಪಡೆದಿರುವ ನಂಜನಗೂಡು ಶ್ರೀಕಂಠೇಶ್ವರನ ಪಂಚ ಮಹಾರಥೋತ್ಸವ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಮಂಗಳವಾರ ಬೆಳಗ್ಗೆ 6.40 ರಿಂದ 7.00 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಪಂಚ ಮಹಾರಥೋತ್ಸವ ನಡೆಯಲಿದ್ದು, ದೇಗುಲದ ಅರ್ಚಕ ವೃಂದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ, ನಂಜುಂಡೇಶ್ವರ ದಂಪತಿಗಳ ಉತ್ಸವ ಮೂರ್ತಿಗಳ ರಥಾರೋಹಣ ನಡೆಸಿ ಗಣಪತಿ ರಥಕ್ಕೆ ಮಹಾಮಂಗಳಾರತಿ ಮಾಡಿದ ನಂತರ ರಥಗಳು ಒಂದೊಂದಾಗಿ ಚಲಿಸಲಿವೆ.
ಮೊದಲಿಗೆ ಗಣಪತಿ ರಥ, ನಂತರ ಶ್ರೀಕಂಠೇಶ್ವರ, ಪಾರ್ವತಿ ಅಮ್ಮನವರ ರಥ, ಸುಬ್ರಹ್ಮಣ್ಯ ರಥ, ಕೊನೆಯದಾಗಿ ಚಂಡಿಕೇಶ್ವರ ರಥಗಳು ಹೊರಡಲಿವೆ. ಇದಕ್ಕಾಗಿ ಈಗಾಗಲೇ ಐದು ರಥಗಳನ್ನು ಸಿದ್ಧಪಡಿಸಿ, ಬಣ್ಣ ಬಳಿದು, ಬಂಟಿಂಗ್ಸ್ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.
ಹೊಸದಾಗಿ ಕಾಂಕ್ರೀಟ್ ರಸ್ತೆಯಾಗಿ ಮಾರ್ಪಾಡಾಗಿರುವ ರಥ ಬೀದಿಯಲ್ಲಿ ಅಲಂಕೃತಗೊಂಡ ತೇರುಗಳಲ್ಲಿ ಸಾಗುವ ಪಂಚಮಹಾರಥೋತ್ಸವದ ವೈಭವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಜಾತ್ರೆಗೆ ಸುಮಾರು 2 ಲಕ್ಷ ಮಂದಿ ಸೇರಿಸುವ ನಿರೀಕ್ಷೆ ಇದೆ.
ಸಿದ್ಧತೆ: ದೇಗುಲದ ಪ್ರಮುಖ ಸ್ಥಳ ಹಾಗೂ ಕಪಿಲಾ ನದಿ ದಡದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅನೇಕ ಸಂಘ ಸಂಸ್ಥೆಗಳು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಬೃಹತ್ ಅನ್ನ ಸಂತರ್ಪಣೆ, ನೀರು, ಮಜ್ಜಿಗೆ ಹಣ್ಣು ಹಂಪಲು, ಪಾನಕ ವಿತರಿಸಲು ಸಿದ್ಧತೆ ಮಾಡಿಕೊಂಡಿವೆ.
ಯಾವುದೇ ರೀತಿಯ ಲೋಪ ಹಾಕದಂತೆ ನೋಡಿಕೊಳ್ಳಲು ಕೆಲ ನಿಬಂಧನೆಗಳನ್ನು ವಿಧಿಸಿ, ಕಟ್ಟೆಚ್ಚರ ವಹಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಹಾಗೂ ರೈಲ್ವೆ ಇಲಾಖೆಯಿಂದ ಹೆಚ್ಚುವರಿ ಬೋಗಿ ಅಳವಡಿಸಿ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ.