ಆಳಂದ: ರೈತರ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ “ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ’ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಮೇ 27ರಂದು ತಾಲೂಕಿನ ಜಿಡಗಾದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಅಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆ ವರೆಗೆ ಗ್ರಾಮದಲ್ಲಿಯೇ ಜಿಲ್ಲಾಧಿಕಾರಿಗಳು ಇದ್ದು, ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಹಾಗೂ ಕಂದಾಯ ಇಲಾಖೆಯ ಇತರೇ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧಿ ಕಾರಿಗಳ ಅಹವಾಲು ಸ್ವೀಕಾರ ಸಮಾರಂಭವನ್ನು ನವಕಲ್ಯಾಣ ಮಠದಲ್ಲಿ ಆಯೋಜಿಸಲಾಗಿದೆ.
ಗ್ರಾಮದಲ್ಲಿನ ಎಲ್ಲ ರೈತರ ಪಹಣಿಯಲ್ಲಿ ಲೋಪದೋಷ, ಪಹಣಿ ಕಾಲಂ ನಂ.3 ಮತ್ತು ಆಕಾರಬಂದ್, ತಾಳೆ ಹೊಂದಿರುವ ಕುರಿತು ಖಚಿತಪಡಿಸಿಕೊಳ್ಳುವುದು, ಎಲ್ಲ ಪಹಣಿಗಳಲ್ಲಿಯೂ ಕಾಲಂ ನಂ.3, ಕಾಲಂ ನಂ.9 ತಾಳೆ ಹೊಂದುವಂತೆ ಸೂಕ್ತ ಆದೇಶ ಹೊರಡಿಸುವುದು. ಗ್ರಾಮದಲ್ಲಿ ಪೌತಿ (ಮರಣ) ಹೊಂದಿದ ಖಾತೆದಾರ ಹೆಸರನ್ನು ಪಹಣಿ ಕಾಲಂ 9ರಿಂದ ತೆಗೆದು ನೈಜ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮದ ಎಲ್ಲ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯದ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲನೆ ಕೈಗೊಳ್ಳುವರು. ಅಲ್ಲದೇ ಬಿಟ್ಟು ಹೋದಂತ ಅರ್ಹ ಪ್ರಕರಣಗಳ ಕುರಿತು ಪರಿಶೀಲಿಸಿ ಪರಿಹಾರ ಒದಗಿಸಲಿದ್ದಾರೆ.
ಗ್ರಾಮದಲ್ಲಿ ಸ್ಮಶಾನ ಭೂಮಿ ಲಭ್ಯತೆ ಕುರಿತು ಮಾಹಿತಿ ಕಲೆಹಾಕುವರು. ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ, ಲಭ್ಯ ಜಮೀನನ್ನು ಕಾಯ್ದಿರಿಸಲು ಕ್ರಮ ಕೈಗೊಳ್ಳಲಾಗುವುದು. ಆಧಾರ ಕಾರ್ಡ್ ಅನುಕೂಲತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಆನಲೈನ್ ಮುಖಾಂತರ ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ವಿವಿಧ ಯೋಜನೆಗಳ ಅಡಿಯಲ್ಲಿನ ಸೌಲಭ್ಯಗಳ ಕುರಿತು ಜನತೆಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ವಾಸ್ತವ್ಯ ನಡೆಯಲಿದೆ.
ಮೇ 27ರಂದು ತಾಲೂಕಿನ ಜಿಡಗಾದಲ್ಲಿನ “ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ’ ಕಾರ್ಯಕ್ರಮ ಕುರಿತು ಗ್ರಾಮದಲ್ಲಿ ಡಂಗೂರ ಸಾರಬೇಕು. ಒಟ್ಟಿನಲ್ಲಿ ಜನರ ಕುಂದುಕೊರತೆ ನಿವಾರಣೆ ಆಗಬೇಕು. ಗ್ರಾಮೀಣ ಜನರ ಹಲವಾರು ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ರಾಜ್ಯ ಸರ್ಕಾರದ “ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ’ ಪರಿಕಲ್ಪನೆಯಡಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
-ಸುಭಾಷ ಗುತ್ತೇದಾರ, ಶಾಸಕ
ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜನರ ಮನೆಬಾಗಿಲಿಗೆ ಬರುತ್ತಿರುವುದರಿಂದ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಧಿಕಾರಿಗಳು ಜಿಡಗಾ ಗ್ರಾಮ ವಾಸ್ತವ್ಯ ಕೈಗೊಳ್ಳಲಿದ್ದು, ಗ್ರಾಮಸ್ಥರು ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಬಂದು ದಾಖಲೆಗೆ ಸಂಬಂಧಿತ ತೊಂದರೆಗಳಿದ್ದರೆ ಗ್ರಾಮಸ್ಥರು ಬಗೆಹರಿಸಿಕೊಳ್ಳಬೇಕು.
-ಯಲ್ಲಪ್ಪ ಸುಬೇದಾರ, ತಹಶೀಲ್ದಾರ್