Advertisement

ಪಾತಾಳಕ್ಕೆ ಕುಸಿದ ಟೊಮೆಟೊ: ಹೈರಾಣಾದ ರೈತ ಸಮುದಾಯ

06:00 AM Jun 05, 2018 | |

ಚಿಕ್ಕಬಳ್ಳಾಪುರ: ಈಗಾಗಲೇ ಮಾರುಕಟ್ಟೆಯಲ್ಲಿ ಮಾವು, ದ್ರಾಕ್ಷಿ ಮತ್ತಿತರ ವಾಣಿಜ್ಯ ಬೆಳೆಗಳ ಬೆಲೆ ಕುಸಿತಗೊಂಡು ಜಿಲ್ಲೆಯ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿರುವುದು ರೈತರನ್ನು ಕಂಗಾಲಾಗಿಸಿದೆ.

Advertisement

ಕಳೆದೊಂದು ವಾರದಿಂದ ಜಿಲ್ಲೆಯ ಮಾರುಕಟ್ಟೆಯಲ್ಲಿ ಬೆಲೆ ತೀವ್ರ ಇಳಿಮುಖವಾಗಿ 15 ಕೆಜಿ ಟೊಮೆಟೊ ಬಾಕ್ಸ್‌ 30 ರಿಂದ 40 ರೂ.ಗೆ ಮಾರಾಟಗೊಳ್ಳುತ್ತಿದೆ. ಅಂದರೆ ಕೆಜಿಗೆ 2 ರೂ.ಗಳಿಂದ 3 ರೂ.ವರೆಗೆ ಮಾರಾಟವಾಗುತ್ತಿದೆ.ಸಾಮಾನ್ಯವಾಗಿ ಮಳೆಗಾಲದಲ್ಲಿ ಟೊಮೆಟೊ ಬೆಳೆ ಫ‌ಸಲು ಸಮರ್ಪಕವಾಗಿ ಬರುತ್ತಿರಲಿಲ್ಲ. ಬಂದರೂ ಮಳೆಯ ಅವಾಂತರಕ್ಕೆ ಸಿಲುಕಿ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಅವಕ ಬಾರದೇ ಬೆಲೆ ಗಗನಮುಖೀಯಾಗಿರುತ್ತಿತ್ತು. ಆದರೆ ಈ ಬಾರಿ ಟೊಮೆಟೊ ತೋಟಗಳ ಮೇಲೆ ಹೆಚ್ಚು ಮಳೆ ಪ್ರಭಾವ ಬೀರದ ಕಾರಣ ಹಾಗೂ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿಯೂ ನಿರೀಕ್ಷೆಗೂ ಮೀರಿ ಮಾರುಕಟ್ಟೆಗೆ ಟೊಮೆಟೊ ಬರುತ್ತಿರುವುದರಿಂದ ಬೇಡಿಕೆ ಕುಸಿದಿದೆ.

ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಪಾಲಿಗೆ ಪ್ರಮುಖ್ಯ ವಾಣಿಜ್ಯ ಬೆಳೆಯಾಗಿರುವ ಟೊಮೆಟೊ ಒಂದು ರೀತಿ ಬಂಪರ್‌ ಲಾಟರಿ ಇದ್ದಂತೆ. ಮಾರುಕಟ್ಟೆಯಲ್ಲಿ ಬೆಲೆ ಸಿಕ್ಕರೆ ಅಂತೂ ಬೆಳೆಗಾರರು ಲಕ್ಷಗಟ್ಟಲೇ ಹಣವನ್ನು ಒಂದೆರೆಡು ತಿಂಗಳಲ್ಲಿ ಸಂಪಾದಿಸುತ್ತಾರೆ. ಮಾರುಕಟ್ಟೆಯಲ್ಲಿ ಬೆಲೆ ಏನಾದರೂ ಕೈ ಕೊಟ್ಟರೆ ಲಕ್ಷಾಂತರ ರೂ, ಲಾಸು ಮಾಡಿಕೊಂಡು ಕೈ ಸುಟ್ಟುಕೊಳ್ಳುವುದು ಸಾಮಾನ್ಯ. ಆದರೀಗ ಹಾಕಿದ ಬಂಡವಾಳವೂ ಬರುವುದಿಲ್ಲವೆಂಬ ಆತಂಕ ಶುರುವಾಗಿದೆ.

ಎಂಟು ಎಕರೆಯಲ್ಲಿ  ಸುಮಾರು 12 ಲಕ್ಷ  ರೂ. ವೆಚ್ಚ ಮಾಡಿ ಟೊಮೆಟೊ ಬೆಳೆದಿದ್ದೆ. ಆದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ಅರ್ಧಕ್ಕೆ ಅರ್ಧ ಬಂಡವಾಳ ಕೈ ಸೇರಲಿಲ್ಲ. ತೋಟದಿಂದ ಮಾರುಕಟ್ಟೆಗೆ ಬರುವಾಗ ಬರೀ 30 ರಿಂದ 40 ರೂ. ಒಳಗೆ ಮಾರಾಟಗೊಂಡಿತು. ಇದರಿಂದ ಈ ಬಾರಿ ನಿರೀಕ್ಷಿತ ಬೆಲೆ ಸಿಗದೇ ತುಂಬ ನಷ್ಠ ಅನುಭವಿಸಬೇಕಾಯಿತು ಎಂದು ಚಿಕ್ಕಬಳ್ಳಾಪುರ ತಾಲೂಕಿನ ದೇವಿಶೇಟ್ಟಿಹಳ್ಳಿ ರೈತ ರಾಮಮೂರ್ತಿ ಅಳಲು ತೋಡಿಕೊಂಡಿದ್ದಾರೆ. 15 ಕೆಜಿ ಟೊಮೆಟೊ ಬಾಕ್ಸ್‌ ಮಾರುಕಟ್ಟೆಯಲ್ಲಿ ಕನಿಷ್ಟ 200 ರೂ.ಗೆ ಮಾರಾಟಗೊಂಡರೆ ಮಾತ್ರ ರೈತರಿಗೆ ಲಾಭವಾಗುತ್ತದೆ. 100, 150 ಹೋದರೂ ಹಾಕಿದ ಬಂಡವಾಳ ಕೈ ಬರಲ್ಲ ಎಂದರು.

ಕಳೆದ ವರ್ಷ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್‌ ಟೊಮೆಟೊ 900, ರಿಂದ 1,200 ರೂ. ವರೆಗೂ ಮಾರಾಟಗೊಂಡಿತು. ಆದರೆ ಈ ಬಾರಿ ಬೆಲೆ ಹೆಚ್ಚಾಗಬೇಕಿತ್ತು. ಆದರೆ ಎಲ್ಲಾ ಕಡೆ ಉತ್ತಮ ಮಳೆಯಾಗಿ ಟೊಮೆಟೊ ಫ‌ಸಲು ನಿರೀಕ್ಷೆಗೂ ಮೀರಿ ಬಂದಿದೆ. ಆ ಕಾರಣಕ್ಕಾಗಿ ಬೆಲೆ ಕುಸಿತವಾಗಿದೆ. ಆದರೂ ಮಳೆ ಹೆಚ್ಚಾದಂತೆ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಟೊಮೆಟೊನ ಪ್ರತಿ 15 ಕೆಜಿ ಬಾಕ್ಸ್‌ಗೆ 120 ರೂ.ವರೆಗೂ ಬೆಲೆ ಇದೆ. ಸಾಧರಣವಾದ ಟೊಮೆಟೊಗೆ ಕನಿಷ್ಠ 60 ರಿಂದ 70 ರೂ.ವರೆಗೂ ಬೆಲೆ ಇದೆ ಎಂದು ಜಿಲ್ಲೆಯ ಚಿಂತಾಮಣಿಯ ಎಪಿಎಂಸಿ ಮಾರುಕಟ್ಟೆಯ ಟೊಮೆಟೊ ವ್ಯಾಪಾರಸ್ಥ ದ್ವಾರಕನಾಥ್‌ ಉದಯವಾಣಿಗೆ ತಿಳಿಸಿದರು.

Advertisement

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next