ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್, ಸಾಯಿ ಧರಮ್ ತೇಜ್ ಅಭಿನಯದ “ಬ್ರೋ” ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ.
ಟಾಲಿವುಡ್ ನ ಇಬ್ಬರು ಸ್ಟಾರ್ ಕಲಾವಿದರನ್ನು ಒಳಗೊಂಡಿರುವ “ಬ್ರೋ” ಸಿನಿಮಾ ಸಟ್ಟೇರಿದ ದಿನದಿಂದಲೇ ಸದ್ದು ಮಾಡಿತ್ತು. ಪವನ್ ಕಲ್ಯಾಣ್ ಲಾಂಗ್ ಗ್ಯಾಪ್ ಬಳಿಕ ಮತ್ತೆ ಬಣ್ಣದ ಲೋಕದಲ್ಲಿ ಕಾಲಿಟ್ಟ ಸಿನಿಮಾವಾಗಿರುವುದರಿಂದ ಅವರ ಅಭಿಮಾನಿಗಳಲ್ಲಿ ಒಂದಷ್ಟು ನಿರೀಕ್ಷೆಗಳಿತ್ತು. ಅದರಂತೆ ಸಿನಿಮಾದ ಹಾಡು, ಟೀಸರ್, ಟ್ರೇಲರ್ ಗಳಿಗೆ ಅಭೂತಪೂರ್ವ ರೆಸ್ಪಾನ್ಸ್ ವ್ಯಕ್ತವಾಗಿತ್ತು.
“ಬ್ರೋ” ಸಿನಿಮಾವನ್ನು ಸಮುದ್ರಕನಿ ಅವರು ನಿರ್ದೇಶನ ಮಾಡಿದ್ದಾರೆ. ಬ್ರೋ ಸಿನಿಮಾ ಸಮುದ್ರಕನಿ ಅವರ “ವಿನೋದಾಯ ಸಿತಮ್” ತಮಿಳು ಸಿನಿಮಾದ ರಿಮೇಕ್ ಎಂದು ಹೇಳಲಾಗಿತ್ತು, ಆದರೆ ಇದು ರಿಮೇಕ್ ಅಲ್ಲ, ಅದನ್ನೇ ಮೂಲವಾಗಿಟ್ಟುಕೊಂಡು ಮಾಡಿದ್ದೇವೆ ಎಂದು ಅದೇ ಸಿನಿಮಾದ ನಿರ್ದೇಶಕರು ಹೇಳಿದ್ದಾರೆ. ಈ ಸಿನಿಮಾವನ್ನು ತೆಲುಗು ಇಂಡಸ್ಟ್ರಿಗೆ ಬೇಕಾದ ಹಾಗೆ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಪವನ್ ಕಲ್ಯಾಣ್ ಅವರಿಗೆ ಟಾಲಿವುಡ್ ನಲ್ಲಿ ದೊಡ್ಡ ಅಭಿಮಾನಿಗಳ ವರ್ಗವೇ ಇದೆ. ಸಾಮಾನ್ಯವಾಗಿ ಅವರ ಸಿನಿಮಾಗಳಿಗೆ ಆರಂಭಿಕವಾಗಿ ಭರ್ಜರಿ ಓಪನಿಂಗ್ ಸಿಗುತ್ತದೆ. ಅದರಂತೆ ʼಬ್ರೋʼ ಸಿನಿಮಾಕ್ಕೂ ಪಾಸಿಟಿವ್ ಓಪನಿಂಗ್ ಸಿಕ್ಕಿದೆ.
ಮೊದಲ ದಿನದ ಬಾಕ್ಸ್ ಆಫೀಸ್ ನಲ್ಲಿ ʼಬ್ರೊʼ ಅಂದಾಜು 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಸಿನಿಮಾದ 76.77% ರಷ್ಟು ಕಲೆಕ್ಷನ್ ತೆಲುಗು ಬೆಲ್ಟ್ ನಿಂದ ಬಂದಿದೆ ಎಂದು ವರದಿಯಾಗಿದೆ.
ಪವನ್ ಕಲ್ಯಾಣ್ , ಸಾಯಿ ಧರಮ್ ತೇಜ್ ಅಭಿನಯದ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್, ಕೇತಿಕಾ ಶರ್ಮಾ ಮುಂತಾದವರು ನಟಿಸಿದ್ದು, ಬಾಲಿವುಡ್ ನಟಿ ಊರ್ವಶಿ ರೌಟೇಲಾ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪವನ್ ಕಲ್ಯಾಣ್ ಮುಂದೆ, ‘ಉಸ್ತಾದ್ ಭಗತ್ ಸಿಂಗ್’, ‘OG’ ಮತ್ತು ‘PSPK 29’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಾಯಿ ಧರಮ್ ತೇಜ್ ಈ ಹಿಂದೆ ಹಾರಾರ್ ಸಿನಿಮಾ ‘ವಿರೂಪಾಕ್ಷ’ದಲ್ಲಿ ಕಾಣಿಸಿಕೊಂಡಿದ್ದರು.