Advertisement

Tollense Valley: ಬಾಣದ ಮೊನೆಯಂಚು ಹುಡುಕುತ್ತಾ.. ಸುಂದರ ಜಾಗದ ಹಿಂದಿದೆ ರಕ್ತಸಿಕ್ತ ಇತಿಹಾಸ

06:18 PM Oct 08, 2024 | Team Udayavani |

ಸುತ್ತಲೂ ಹಸುರಾದ, ಕಣ್ಮನ ಮುದಗೊಳಿಸುವ ಪ್ರದೇಶ. ಪಕ್ಕದಲ್ಲೇ ಸೊಂಪಾಗಿ ಹರಿಯುವ ನದಿ. ನೋಡಿದರೆ ʼಆಹಾ ಎಂತಹ ಪ್ರಶಾಂತವಾದ ಸ್ಥಳʼ ಎಂದೆನಿಸದಿರದು. ಇಲ್ಲೊಂದು ಮನೆ ಮಾಡಿ ಬದುಕೋಣ ಎಂಬ ಯೋಚನೆ ಬಂದರೂ ತಪ್ಪಲ್ಲ. ಆದರೆ ಈ ಪ್ರಶಾಂತ ವಾತಾವರಣವು ಹಿಂದೊಮ್ಮೆ ಜನರ ಕಿರುಚಾಟದೊಂದಿಗೆ ಆಯುಧಗಳ ಸದ್ದಿಗೆ ಸಾಕ್ಷಿಯಾಗಿತ್ತು. ಹಸುರು ಹಾಸಿದಂತೆ ಹುಲ್ಲು ತುಂಬಿದ ನೆಲದಲ್ಲಿ ಅದೆಷ್ಟೋ ಜನರ ರಕ್ತ ಚೆಲ್ಲಿ ನೆಲವನ್ನು ಕೆಂಪಾಗಿಸಿತ್ತು. ಕೇವಲ ನಿರ್ಜೀವ ದೇಹಗಳು ರಾಶಿ ರಾಶಿಯಾಗಿ ಇಲ್ಲಿ ಬಿದ್ದಿತ್ತು. ಕಾಲ ಕಳೆದಂತೆ, ಜನರು ಬದಲಾದಂತೆ ಈ ಪ್ರದೇಶವು ತನ್ನೆಲ್ಲಾ ರಹಸ್ಯಗಳನ್ನು ಮರೆಮಾಚಿ ಹೊಸ ಮೇಲ್ಮೈಯನ್ನು ಹೊರ ಚಾಚಿದೆ. ಅಷ್ಟಕ್ಕೂ ತನ್ನ ಗರ್ಭದೊಳಗೆ ಭೀಕರ ಇತಿಹಾಸವನ್ನು ಅದುಮಿಟ್ಟುಕೊಂಡಿರುವ ಈ ಪ್ರದೇಶ ಇರುವುದೆಲ್ಲಿ? ಏನಿದರ ಚರಿತ್ರೆ ಎಂಬ ಕುತೂಹಲವಿದೆಯೇ?.

Advertisement

ಜರ್ಮನಿಯ ಈಶಾನ್ಯ ಭಾಗದಲ್ಲಿ ಟೋಲೆನ್ಸ್‌ ಎಂಬ ನದಿ ದಡದಲ್ಲಿರುವ  ಈ ಪ್ರದೇಶ ಮೂರು ಸಹಸ್ರಮಾನಗಳ ಹಿಂದೆ ಯುದ್ದ, ಜಗಳ, ಕೂಗಾಟಗಳಿಗೆ ಸಾಕ್ಷಿಯಾಗಿತ್ತು. ಈ ಕುರಿತು ಪುರಾತತ್ವಜ್ಞರು ಈ ಪ್ರದೇಶವನ್ನು ಯುರೋಪಿನ ಅತ್ಯಂತ ಹಳೇಯ ಯುದ್ದ ಭೂಮಿ ಎಂದು ಪರಿಗಣಿಸಿದ್ದಾರೆ.

1996 ರಲ್ಲಿ ಹವ್ಯಾಸಿ ಪುರಾತತ್ವ ತಜ್ಞರು ನದಿಯ ದಡದಲ್ಲಿ ಮಾನವ ಮೂಳೆಗಳನ್ನು ಅಕಸ್ಮಾತ್‌ ಆಗಿ ಪತ್ತೆ ಹಚ್ಚಿದ್ದರು. ಈ ಸಣ್ಣ ಕುರುಹು ಅವರಲ್ಲಿ ದೊಡ್ಡ ಅನುಮಾನವನ್ನೆ ಹುಟ್ಟಿಸಿತ್ತು. ಈ ಬಗ್ಗೆ 2008ರಲ್ಲಿ ಈ ಪ್ರದೇಶದಲ್ಲಿ ಪ್ರಾರಂಭವಾದ ಉತ್ಖನನ ಕಾರ್ಯದಲ್ಲಿ ಸಾವಿರಾರು ಅಸ್ಥಿಪಂಜರಗಳ ಅವಶೇಷಗಳು, ನೂರಾರು ಶಸ್ತ್ರಾಸ್ತ್ರಗಳು ಪತ್ತೆಯಾಗುವುದರೊಂದಿಗೆ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಲಭಿಸಿದ ಎಲ್ಲಾ ಅವಶೇಷಗಳು ಕಂಚಿನ ಯುಗದ ಅಂತ್ಯದಲ್ಲಿ ಅಂದರೆ ಸುಮಾರು ಕ್ರಿ.ಪೂ 1250 ರಲ್ಲಿ ನಡೆದ ಭೀಕರ ಯುದ್ದದ ಸಾಕ್ಷ್ಯವಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

Advertisement

ಈ ಘೋರ ಯುದ್ದವು ಯಾವ ಕಾರಣಕ್ಕಾಗಿ ನಡೆದಿದೆ ಎಂಬ ಪ್ರಶ್ನೆಯು ಸಂಶೋಧಕರಿಗೆ ಬಹಳಷ್ಟು ಕುತೂಹಲವನ್ನು ಮೂಡಿಸಿತ್ತು.

 

ಯುದ್ದ ಭೂಮಿಯಲ್ಲಿ ಲಭಿಸಿದ ಆಯುಧಗಳು

ಇನ್ನೊಂದು ವಿಶೇಷವೆಂದರೆ ಈ ಪ್ರದೇಶದಲ್ಲಿ ಲಭಿಸಿದ ಬಾಣಗಳು ಹಾಗೂ ಆಯುಧಗಳ ಮೊನೆಗಳು. ಲಭಿಸಿದ ಆಯುಧಗಳ ಆಧಾರದ ಮೇಲೆ ಸಂಶೋಧನೆ ನಡೆಸಿದಾಗ ಅವುಗಳಲ್ಲಿ ಕೆಲವು ಸ್ಥಳೀಯ ಪ್ರದೇಶದಲ್ಲಿಯೇ ನಿರ್ಮಿಸಿರುವುದಾಗಿ ತಿಳಿದುಬಂದಿದೆ. ಇನ್ನು ಕೆಲವು ಆಯುಧಗಳು ವಿಭಿನ್ನ ರೀತಿಯ ಮೊನೆಗಳನ್ನು, ಆಕಾರಗಳನ್ನು ಹೊಂದಿದ್ದು ಅವುಗಳನ್ನು ದಕ್ಷಿಣ ಭಾಗದ ಪ್ರದೇಶಗಳಾದ ಪ್ರಸ್ತುತ ಬವೇರಿಯಾ ಮತ್ತು ಮೊರಾವಿಯಾ ಎಂದು ಕರೆಯಲ್ಪಡುವಂತಹ ದೂರದ ಪ್ರದೇಶಗಳಲ್ಲಿ ಉತ್ಪಾದಿಸಲಾಗಿರುವುದಾಗಿ ತಿಳಿದು ಬಂದಿದೆ. ಈ ಅನ್ವೇಷಣೆಯನ್ನು ಬಾಣಗಳ ಮೊನೆಯನ್ನು ಆಧಾರವಾಗಿಸಿಕೊಂಡು ನಡೆಸಲಾಗಿದ್ದು ಅವುಗಳ ಆಕಾರದ ಮೇಲೆ ವಿಂಗಡಿಸಲಾಗಿದೆ. ದಕ್ಷಿಣ ದಿಕ್ಕಿನಿಂದ ಬಂದಂತಹ ಸೈನ್ಯವೊಂದು ಟೋಲೆನ್ಸ್‌ ನದಿ ದಡದಲ್ಲಿ ಅಥವಾ ಸುತ್ತಮುತ್ತಲಿನಲ್ಲಿ ನೆಲೆಸಿದ್ದ ಬುಡಕಟ್ಟು ಜನಾಂಗದವರೊಂದಿಗೆ ಯಾವುದೋ ಕಾರಣಕ್ಕಾಗಿ ಯುದ್ದ ನಡೆಸಿದ್ದಾರೆ ಎನ್ನುವುದಕ್ಕೆ ಆಯುಧಗಳ ವಿಭಿನ್ನ ಆಕಾರವೇ ಸಾಕ್ಷಿ.

ಈ ಯುದ್ದವು ನದಿ ಪ್ರದೇಶವನ್ನು ಕಬಳಿಸುವ ಸಲುವಾಗಿರಬಹುದು ಅಥವಾ ವ್ಯವಹಾರದ ಸಲುವಾಗಿರಬಹುದು. ಆದರೂ ಇದರ ಹಿಂದಿನ ಕಾರಣದ ಕುರಿತು ನಿಖರ ಮಾಹಿತಿ ತಿಳಿಯದಿದ್ದರೂ, ಈ ಯುದ್ದವು ಕಂಚಿನ ಯುಗದಲ್ಲಿ ಒಂದು ಪ್ರದೇಶದ ಜನರು ದೂರದ ಪ್ರದೇಶದಲ್ಲಿನ ಜನರೊಂದಿಗೆ ವ್ಯವಹರಿಸುತ್ತಿದ್ದರೆಂಬುದಕ್ಕೆ ಆಧಾರವಾಗಿದೆ ಎಂದು ತಿಳಿದುಬರುತ್ತದೆ.

ನದಿ ಪ್ರದೇಶದಲ್ಲಿ ಕಂಡುಬಂದ ಸಾವಿರಾರು ಅಸ್ಥಿಪಂಜರಗಳು ಅಂದಿನ ಯುದ್ದದ ಭೀಕರತೆಯನ್ನು ಸಾರುತ್ತದೆ. ಅಲ್ಲದೆ ಅಸ್ಥಿಯಲ್ಲೇ ಸಿಲುಕಿಕೊಂಡ ಆಯುಧಗಳು, ತಲೆ ಬುರುಡೆಯಲ್ಲಿ ಸಿಲುಕಿಕೊಂಡ ಬಾಣಗಳನ್ನು ನೋಡಿದಾಗ ಅಂದಿನ ಜನರ ಆಯುಧಗಳು ಹಾಗು ಯುದ್ಧ ಶೈಲಿಯು ಆಶ್ಚರ್ಯವನ್ನು ಉಂಟುಮಾಡುತ್ತದೆ. ಲಭಿಸಿದ ಕುರುಹುಗಳಲ್ಲಿ ಒಡೆದ ತಲೆಬುರುಡೆಗಳು , ಅಸ್ಥಿಗಳಲ್ಲಿ ಕಂಡುಬಂದ ಇರಿತದ ಗಾಯಗಳು, ಹಾಗೆಯೇ ಕುದುರೆಗಳ ಅವಶೇಷಗಳು, ಹಲವಾರು ಮಿಲಿಟರಿ ಉಪಕರಣಗಳ ಅವಶೇಷಗಳು ಸೇರಿ ಅಲ್ಲಿನ ಕ್ರೂರತೆಯನ್ನು ತಿಳಿಸುವಂತಹ ಸಾಕ್ಷಿಗಳನ್ನು ಪುರಾತತ್ವಜ್ಞರು ಪತ್ತೆಹಚ್ಚಿದ್ದಾರೆ.

ಸದ್ಯ ಹೆಚ್ಚಿನ ಮಾಹಿತಿಗಾಗಿ ಈ ಪ್ರದೇಶದಲ್ಲಿ ಉತ್ಖನನ ಕಾರ್ಯವು ಸಾಗುತ್ತಿದೆ. ಕೃತಕ ಬುದ್ದಿಮತ್ತೆ (AI) ಹಾಗೂ ಉಪಗ್ರಹ ಚಿತ್ರಣದಂತಹ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಂಶೋಧನೆ ನಡೆಯುತ್ತಿದೆ.

ಸದ್ಯಕ್ಕೆ ಈಗ ಪ್ರಶ್ನೆಯಾಗಿ ಉಳಿದಿರುವುದೆಂದರೆ, ಸಾವಿರಾರು ಜನರ ಮರಣಕ್ಕೆ ಕಾರಣವಾಗಿರುವ ಈ ಯುದ್ದವು ಯಾವ ಕಾರಣಕ್ಕಾಗಿ ನಡೆಯಿತು? ನೂರಾರು ಮೈಲಿ ದೂರದಿಂದ ಬಂದ ಜನರು ಇಲ್ಲಿ ಯಾವ ಕಾರಣಕ್ಕಾಗಿ ಯುದ್ದ ಮಾಡಿರಬಹುದು? ಆ ಪ್ರದೇಶವು ಯಾವ ರಹಸ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ?. ಈ ಪ್ರದೇಶದ ಮೂಲಕ ಹಾದು ಹೋಗುವ ವ್ಯಾಪಾರ ಮಾರ್ಗಗಳ ಮೇಲೆ ತಮ್ಮ ನಿಯಂತ್ರಣ ಸಾಧಿಸುವ ಸಲುವಾಗಿ ಈ ಯುದ್ದವಾಗಿರಬುದು ಎಂಬ ಊಹೆಯಿದೆ. ಆದರೆ ಎಲ್ಲಾ ಪ್ರಶ್ನೆಗಳಿಗೆ, ಊಹಾಪೋಹಗಳಿಗೆ ಸಂಶೋಧನಕಾರರು ಸಂಶೋಧನೆಯಿಂದ ಉತ್ತರಿಸಬೇಕಿದೆ.

ಪೂರ್ಣಶ್ರೀ.ಕೆ

Advertisement

Udayavani is now on Telegram. Click here to join our channel and stay updated with the latest news.

Next